ADVERTISEMENT

ರಿಷಿಯ ಮಾತು...

ಕೆ.ಎಚ್.ಓಬಳೇಶ್
Published 24 ಸೆಪ್ಟೆಂಬರ್ 2020, 19:30 IST
Last Updated 24 ಸೆಪ್ಟೆಂಬರ್ 2020, 19:30 IST
ರಿಷಿ
ರಿಷಿ   

‘ಒಳ್ಳೆಯ ಉದ್ದೇಶವಿಲ್ಲದೆ ಸಿನಿಮಾ ಮಾಡಲು ಹೊರಟರೆ ಹಳಿ ತಪ್ಪುವುದು ನಿಶ್ಚಿತ. ಜೊತೆಗೆ, ಪ್ರೇಕ್ಷಕರನ್ನು ತಲುಪಲು ಕಷ್ಟಪಡಬೇಕಾಗುತ್ತದೆ. ಹಾಗಾಗಿ, ಚಿತ್ರ ನಿರ್ಮಾಣದ ಹಿಂದಿರುವ ಉದ್ದೇಶ ನನಗೆ ಮುಖ್ಯ. ಅಲ್ಲೊಂದು ಹೊಸ ದೃಷ್ಟಿಕೋನವೂ ಇರಬೇಕು. ಕಮರ್ಷಿಯಲ್‌ ಆಶಯದಡಿಯೇ ಸಿನಿಮಾ ನಿರ್ಮಿಸಿ ಗೆಲ್ಲುವುದು ತುಸು ಕಷ್ಟಕರ’

–ಹೀಗೆಂದು ಸ್ಪಷ್ಟವಾಗಿ ಹೇಳಿದರು ನಟ ರಿಷಿ. ‘ಒಳ್ಳೆಯ ಉದ್ದೇಶವಿರುವ ಸಿನಿಮಾಗಳಿಗೆ ನನ್ನ ಪ್ರಥಮ ಆದ್ಯತೆ. ಸಿನಿಮಾದ ಗೆಲುವು ಉತ್ತಮ ನಿರ್ದೇಶಕನ ಮೇಲೆ ನಿಂತಿರುತ್ತದೆ. ಅಂತಹ ನಿರ್ದೇಶಕರು ಹೆಣೆಯುವ ಗಟ್ಟಿಯಾದ ಪಾತ್ರಗಳೆಂದರೆ ನನಗಿಷ್ಟ’ ಎಂದು ಮಾತು ವಿಸ್ತರಿಸಿದರು.

ಹೇಮಂತ್‌ ರಾವ್‌ ನಿರ್ದೇಶಿಸಿದ ‘ಕವಲುದಾರಿ’ ಸಿನಿಮಾದಲ್ಲಿ ಅವರು ನಿಭಾಯಿಸಿದ ‘ಶ್ಯಾಮ್‌’ ಪಾತ್ರ ಪ್ರೇಕ್ಷಕರಿಗೆ ಮೋಡಿ ಮಾಡಿತ್ತು. ಈಗ ‘ರಾಮನ ಅವತಾರ’ ಚಿತ್ರದಲ್ಲೂ ಅಂತಹದ್ದೇ ಭಿನ್ನವಾದ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ನವೆಂಬರ್‌ ಅಂತ್ಯದಿಂದ ಇದರ ಶೂಟಿಂಗ್‌ಗೆ ಚಿತ್ರತಂಡ ಸಿದ್ಧತೆ ನಡೆಸಿದೆ. ಚಿತ್ರದ ಪಾತ್ರ ಕುರಿತು ಅವರು ವಿವರಿಸುವುದು ಹೀಗೆ; ‘ನನ್ನ ಪಾತ್ರದ ಹೆಸರು ರಾಮಕೃಷ್ಣ. ದೊಡ್ಡ ಕನಸುಗಳನ್ನು ಕಾಣುವುದೇ ಅವನ ಹವ್ಯಾಸ. ಒಮ್ಮೆ ಮೋಸ ಮಾಡಿ ಮನೆಬಿಟ್ಟು ಓಡಿ ಹೋಗುತ್ತಾನೆ. ಆತ ಹೋದ ಕಡೆಯಲ್ಲಾ ಅನಾಹುತ ಸೃಷ್ಟಿಸುತ್ತಲೇ ಇರುತ್ತಾನೆ’.

ADVERTISEMENT

ಇದೊಂದು ಕೌಟುಂಬಿಕ ಪ್ರಧಾನ ಚಿತ್ರವಂತೆ. ರಾಜ್‌ ಬಿ. ಶೆಟ್ಟಿ, ಡ್ಯಾನೀಶ್‌ ಸೇಟ್‌, ಪ್ರಣೀತಾ ಮತ್ತು ಶುಭ್ರ ಅಯ್ಯಪ್ಪ ಪ್ರಧಾನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಜೇಕಬ್‌ ವರ್ಗೀಸ್‌ ಆ್ಯಕ್ಷನ್‌ ಕಟ್‌ ಹೇಳಿರುವ ‘ಸಕಲಕಲಾವಲ್ಲಭ’ ಚಿತ್ರದಲ್ಲೂ ರಿಷಿ ನಟಿಸಿದ್ದಾರೆ. ಇದು ಬಿಡುಗಡೆಗೆ ಸಿದ್ಧವಾಗಿದೆ. ಚಿತ್ರಮಂದಿರಗಳು ಪುನರಾರಂಭವಾಗುವುದನ್ನೇ ಚಿತ್ರತಂಡ ಎದುರು ನೋಡುತ್ತಿದೆ. ಅಂದಹಾಗೆ ಇದು ಅವರ ಮೊದಲ ಮುಖ್ಯವಾಹಿನಿಯ ಮನರಂಜನಾತ್ಮಕ ಚಿತ್ರವೂ ಹೌದು. ಚಿತ್ರದ ನಾಯಕನದು ರೋಡ್‌ ರೋಮಿಯೊ ಮನಸ್ಥಿತಿ. ಆದರೆ, ಆತನ ತಾಯಿಗೆ ಮಾತ್ರ ಪುತ್ರನನ್ನು ಪೊಲೀಸ್‌ ಅಧಿಕಾರಿಯನ್ನಾಗಿ ಮಾಡುವ ಆಸೆ.ಈ ದ್ವಂದ್ವದಲ್ಲಿಯೇ ಪಾತ್ರ ಸಾಗಲಿದೆಯಂತೆ. ಬೇರೆಯವರಿಗೆ ಸಹಾಯ ಮಾಡಲು ಹೋಗುವ ಆತ ಪೊಲೀಸೋ ಅಥವಾ ರೌಡಿಯೋ ಎಂಬುದೇ ಇದರ ಹೂರಣ.

ಇಸ್ಲಾ ಉದ್ದೀನ್ ನಿರ್ದೇಶನದ ಹೊಸ ಚಿತ್ರಕ್ಕೂ ರಿಷಿ ಅವರೇ ಹೀರೊ. ಈಗಾಗಲೇ, ಇದರ ಶೂಟಿಂಗ್‌ ಕೂಡ ಪೂರ್ಣಗೊಂಡಿದೆ. ‘ಬ್ಲಾಕ್‌ ಕಾಮಿಡಿ ಚಿತ್ರ. ಪೋಸ್ಟ್‌ ಪ್ರೊಡಕ್ಷನ್‌ ಕೆಲಸ ನಡೆಯುತ್ತಿದೆ. ಇನ್ನೂ ಟೈಟಲ್‌ ಅಂತಿಮಗೊಂಡಿಲ್ಲ’ ಎಂದು ವಿವರಿಸುತ್ತಾರೆ.

ಪತ್ರಿಕೆಗಳಲ್ಲಿ ವ್ಯಕ್ತಿಚಿತ್ರಣದ ಲೇಖನಗಳನ್ನು ಓದಿದಾಗಲೆಲ್ಲಾ ಅವರಿಗೆ ಅಂತಹ ವ್ಯಕ್ತಿಗಳ ಕ್ಯಾರೆಕ್ಟರ್‌ ಇಟ್ಟುಕೊಂಡು ಸಿನಿಮಾ ಮಾಡುವ ಕನಸು ತಲೆಯಲ್ಲಿ ಚಿಗುರೊಡೆಯುತ್ತದೆಯಂತೆ. ಹಾಗಾಗಿ, ನನಗೆ ಪ್ರತಿದಿನವೂ ಕ್ಯಾರೆಕ್ಟರ್‌ವೊಂದು ಪ್ರೇರಣೆಯಾಗುತ್ತಲೇ ಇರುತ್ತದೆ ಎಂದು ನಗುತ್ತಾರೆ.

ರಿಷಿಗೆ ಸಿನಿಮಾ ನಿರ್ದೇಶಿಸುವ ಕನಸೂ ಇದೆ. ಆದರೆ, ಅದಕ್ಕೆ ಸಾಕಷ್ಟು ಶ್ರಮವೂ ಬೇಕು ಎಂಬ ಸ್ಪಷ್ಟತೆಯೂ ಅವರಲ್ಲಿದೆ. ‘ಈಗ ನಟನೆಯಲ್ಲಿ ಸಾಕಷ್ಟು ತೊಡಗಿಸಿಕೊಂಡಿದ್ದೇನೆ. ಭವಿಷ್ಯದಲ್ಲಿ ಕಾಲಕೂಡಿ ಬಂದರೆ ಸಿನಿಮಾವನ್ನೂ ನಿರ್ದೇಶಿಸುತ್ತೇನೆ’ ಎನ್ನುತ್ತಾರೆ.

ಮೋಹನ್ ‌ಸಿಂಗ್ ನಿರ್ದೇಶನದ ಹೊಸ ಸಿನಿಮಾದಲ್ಲಿ ನಟಿಸುವ ಕುರಿತು ರಿಷಿ ಮಾತುಕತೆಯಲ್ಲಿ ತೊಡಗಿದ್ದಾರೆ. ನೇಕಾರರ ಬದುಕಿನ ಚಿತ್ರಣ ಕುರಿತ ಚಿತ್ರ ಇದಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.