ADVERTISEMENT

ಹಿರಿಯ ನಟಿ ಭಾರ್ಗವಿ ನಾರಾಯಣ್ ಇನ್ನಿಲ್ಲ

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2022, 17:32 IST
Last Updated 14 ಫೆಬ್ರುವರಿ 2022, 17:32 IST
ನಟಿ ಭಾರ್ಗವಿ ನಾರಾಯಣ್
ನಟಿ ಭಾರ್ಗವಿ ನಾರಾಯಣ್    

ಬೆಂಗಳೂರು: ಕನ್ನಡದ ಹಿರಿಯ ನಟಿ ಭಾರ್ಗವಿ ನಾರಾಯಣ್ (84) ಅವರು ಸೋಮವಾರ ಸಂಜೆ 7:30ಕ್ಕೆ ನಿಧನರಾದರು.

ಸಿನಿಮಾ, ಕಿರುತೆರೆ ಹಾಗೂ ರಂಗಭೂಮಿಯಲ್ಲಿ ಸಕ್ರಿಯರಾಗಿದ್ದ ಭಾರ್ಗವಿ ನಾರಾಯಣ್‌ ಅವರು ಸಹಜ ಅಭಿನಯದಿಂದ ಗುರುತಿಸಿಕೊಂಡವರು. ಅವರ ಸಾವಿನ ಕುರಿತು ಅವರ ಮೊಮ್ಮಗಳು, ನಟಿ ಸಂಯುಕ್ತಾ ಹೊರನಾಡು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.

ಎರಡು ಕನಸು, ಹಂತಕರ ಸಂಚು, ಪಲ್ಲವಿ ಅನುಪಲ್ಲವಿ, ಬಾ ನಲ್ಲೆ ಮಧುಚಂದ್ರಕೆ, ವಂಶವೃಕ್ಷ, ಪ್ರೊಫೆಸರ್‌ ಹುಚ್ಚುರಾಯ ಸೇರಿದಂತೆ ಹಲವು ಕನ್ನಡ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. 2019ರಲ್ಲಿ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ಸಂದಿದೆ. ಭಾರ್ಗವಿ ಅವರು 600ಕ್ಕೂ ಹೆಚ್ಚು ನಾಟಕಗಳ ಪ್ರದರ್ಶನ ನೀಡಿದ್ದಾರೆ.

ADVERTISEMENT

ಸುಮಾರು ಎರಡು ವರ್ಷಗಳಿಂದ ವಯೋ ಸಹಜ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದರು. ಸೊಂಟದ ಮೂಳೆ ಮುರಿತಕ್ಕೊಳಗಾಗಿದ್ದರು. ಸಂಜೆ ವೇಳೆ ಇದ್ದಕ್ಕಿದ್ದಂತೆ ಕುಸಿದು ಬಿದ್ದ ಅವರು ಬಳಲಿದಂತೆ ಕಂಡುಬಂದರು. ನಮ್ಮ ಜೊತೆ ಕೆಲ ಮಾತುಗಳನ್ನಾಡಿ ಸಂಜೆ 7.30ರ ವೇಳೆಗೆ ಕೊನೆಯುಸಿರೆಳೆದರು ಎಂದು ಅವರ ಪುತ್ರ, ನಟ ಪ್ರಕಾಶ್‌ ಬೆಳವಾಡಿ ತಿಳಿಸಿದರು.

ಭಾರ್ಗವಿ ಅವರ ದೇಹವನ್ನು ಸೇಂಟ್‌ ಜಾನ್ಸ್‌ ಆಸ್ಪತ್ರೆಗೆ ದಾನ ಮಾಡಲಾಗುವುದು. ಈ ಸಂಬಂಧ ಭಾರ್ಗವಿ ಅವರು ಬಹಳ ಹಿಂದೆಯೇ ಸಮ್ಮತಿ ನೀಡಿದ್ದಾರೆ. ಅಂಗಾಂಗ ದಾನ ಹಾಗೂ ದೇಹ ದಾನ ಸಂಬಂಧಿಸಿದ ಪ್ರಕ್ರಿಯೆಗಳು ನಡೆಯಬೇಕಿದೆ. ಅವರ ಕಣ್ಣುಗಳನ್ನು ನೇತ್ರಧಾಮ ಸಂಸ್ಥೆಗೆ ದಾನ ಮಾಡಲಾಗುವುದು. ಹಿರಿಯ ಪುತ್ರಿ ಸುಜಾತಾ ಅವರು ಮುಂಬೈಯಿಂದ ಬರಬೇಕಿದೆ. ಅವರು ಬಂದ ತಕ್ಷಣ ವಿಳಂಬ ಮಾಡದೇ ದೇಹವನ್ನು ಆಸ್ಪತ್ರೆಗೆ ಹಸ್ತಾಂತರಿಸಲಾಗುವುದು ಎಂದು ಪ್ರಕಾಶ್‌ ಬೆಳವಾಡಿ ತಿಳಿಸಿದರು.

ರಂಗಭೂಮಿಯಲ್ಲಿ 'ಮೇಕಪ್‌ ನಾಣಿ' ಎಂದೇ ಹೆಸರಾಗಿದ್ದ ಬೆಳವಾಡಿ ನಂಜುಡಯ್ಯ ನಾರಾಯಣ ಅವರು ಭಾರ್ಗವಿ ಅವರ ಪತಿ. ದಂಪತಿಗೆ ನಟರಾದ ಪ್ರಕಾಶ್ ಬೆಳವಾಡಿ, ಸುಧಾ ಬೆಳವಾಡಿ ಸೇರಿ ನಾಲ್ವರು ಮಕ್ಕಳು.

ಮೇಕಪ್‌ ನಾಣಿ ಮತ್ತು ಭಾರ್ಗವಿ

ಭಾರ್ಗವಿ ಅವರು ಬಿಎಸ್ಸಿ ಮತ್ತು ಇಂಗ್ಲಿಷ್‌ ಎಂಎ ಸ್ನಾತಕೋತ್ತರ ಪದವಿ ಪಡೆದಿದ್ದರು. ಅವರು ಆತ್ಮಕಥನ 'ನಾನು ಭಾರ್ಗವಿ', 'ನಾ ಕಂಡ ನಮ್ಮವರು' ಕೃತಿಗಳನ್ನು ರಚಿಸಿದ್ದಾರೆ.

ಭಾರ್ಗವಿ ನಾರಾಯಣ್‌ ಅವರ ಕುಟುಂಬ
ಮಗಳು ಸುಧಾ, ಮೊಮ್ಮಗಳು ಸಂಯುಕ್ತಾ ಜೊತೆಗೆ ಭಾರ್ಗವಿ ನಾರಾಯಣ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.