ADVERTISEMENT

ಕನ್ನಡ ಸಿನಿಮಾ 'ಬ್ರಹ್ಮಚಾರಿ' ತೆರೆಗೆ ಬರಲು ಸಿದ್ಧ

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2019, 19:30 IST
Last Updated 17 ಅಕ್ಟೋಬರ್ 2019, 19:30 IST
‘ಬ್ರಹ್ಮಚಾರಿ’ ಚಿತ್ರದಲ್ಲಿ ಅದಿತಿ ಪ್ರಭುದೇವ ಮತ್ತು ನೀನಾಸಂ ಸತೀಶ್‌
‘ಬ್ರಹ್ಮಚಾರಿ’ ಚಿತ್ರದಲ್ಲಿ ಅದಿತಿ ಪ್ರಭುದೇವ ಮತ್ತು ನೀನಾಸಂ ಸತೀಶ್‌   

ಸಮಕಾಲೀನ ಸಮಾಜದಲ್ಲಿ ಅವಿವಾಹಿತನಾಗಿ ಅಥವಾ ಬ್ರಹ್ಮಚಾರಿಯಾಗಿ ಬದುಕಲು ಸಾಧ್ಯವೇ ಎಂಬುದು ಗಾಂಧಿನಗರದ ಮಂದಿ ಕೇಳುವ ಪ್ರಶ್ನೆ. ಇದಕ್ಕೆ ನಾನು ‘ನೂರು ಪರ್ಸೆಂಟ್‌ ವರ್ಜಿನ್’ ಎಂದು ಉತ್ತರಿಸುತ್ತಲೇ ಥಿಯೇಟರ್‌ಗೆ ಬರಲು ಸಜ್ಜಾಗಿದ್ದಾನೆ ‘ಬ್ರಹ್ಮಚಾರಿ’.

ಸತೀಶ್ ನೀನಾಸಂ ನಟನೆಯ ‘ಬ್ರಹ್ಮಚಾರಿ’ ಚಿತ್ರದ ಶೂಟಿಂಗ್‌ ಪೂರ್ಣಗೊಂಡಿದೆ. ಪೋಸ್ಟ್‌ ಪ್ರೊಡಕ್ಷನ್‌ನಲ್ಲಿ ತೊಡಗಿರುವ ಚಿತ್ರತಂಡ ನವೆಂಬರ್‌ನಲ್ಲಿ ಜನರ ಮುಂದೆ ಬರುವ ಯೋಚನೆಯಲ್ಲಿದೆ.

ಉದಯ್‌ ಕೆ. ಮೆಹ್ತಾ ಇದಕ್ಕೆ ಬಂಡವಾಳ ಹೂಡಿದ್ದಾರೆ. ‘ಬಾಂಬೆ ಮಿಠಾಯಿ’ ಮತ್ತು ‘ಡಬಲ್‌ ಇಂಜನ್’ ಸಿನಿಮಾಗಳಿಗೆ ಆ್ಯಕ್ಷನ್‌ ಕಟ್‌ ಹೇಳಿದ್ದ ಚಂದ್ರಮೋಹನ್‌ ಅವರೇ ಈ ಸಿನಿಮಾವನ್ನು ನಿರ್ದೇಶಿಸಿದ್ದಾರೆ. ಕಾಮಿಡಿ ಹಾಗೂ ಕೌಟುಂಬಿಕ ಕಥಾಹಂದರ ಹೊಂದಿರುವ ಚಿತ್ರ ಇದು. ಚಿತ್ರಕಥೆ ಮತ್ತು ಸಂಭಾಷಣೆಯ ಜವಾಬ್ದಾರಿಯನ್ನು ಅವರೇ ಹೊತ್ತಿದ್ದಾರೆ.

ADVERTISEMENT

ಕಳೆದ ವರ್ಷ ತೆರೆಕಂಡ ಸತೀಶ್‌ ನೀನಾಸಂ ನಟನೆಯ ‘ಅಯೋಗ್ಯ’ ಸಿನಿಮಾ ಬಾಕ್ಸ್‌ ಆಫೀಸ್‌ನಲ್ಲಿ ಜೋರಾಗಿಯೇ ಸದ್ದು ಮಾಡಿತ್ತು. ಆ ಬಳಿಕ ತೆರೆಕಂಡ ‘ಚಂಬಲ್‌’ ವಿವಾದಕ್ಕೆ ಸೀಮಿತವಾಯಿತೇ ಹೊರತು ಗಳಿಕೆಯಲ್ಲಿ ನೆಲ ಕಚ್ಚಿತ್ತು. ಈಗ ಅವರು ‘ಬ್ರಹ್ಮಚಾರಿ’ಯ ಮೂಲಕ ಮತ್ತೆ ಗೆಲುವಿನ ದಂಡೆ ಏರುವ ಉತ್ಸಾಹದಲ್ಲಿದ್ದಾರೆ.

ಚಿತ್ರದಲ್ಲಿ ಅವರದು ಮುಗ್ಧ ಹುಡುಗನ ಪಾತ್ರ. ಬ್ರಹ್ಮಚಾರಿ ತನ್ನ ಬದುಕಿನ ಪಯಣದ ಸಂಕಷ್ಟದ ಸಂಕೋಲೆಯನ್ನು ಹೇಗೆ ಕಳಚುತ್ತಾನೆ ಎನ್ನುವುದೇ ಚಿತ್ರದ ತಿರುಳು. ಮೊದಲ ಬಾರಿಗೆ ಅವರು ಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸತೀಶ್‌ಗೆ ಅದಿತಿ ಪ್ರಭುದೇವ ಜೋಡಿಯಾಗಿದ್ದಾರೆ. ಅವರದು ಗ್ರಂಥಪಾಲಕಿಯ ಪಾತ್ರವಂತೆ. ಪೋಷಕ ನಟ ದತ್ತಣ್ಣ ಮನೋವೈದ್ಯನ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ.

ಬೆಂಗಳೂರು ಮತ್ತು ಶ್ರೀರಂಗಪಟ್ಟಣದ ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದೆ. ಚಿತ್ರದ ಮೂರು ಹಾಡುಗಳಿಗೆ ಧರ್ಮವಿಶ್ ಸಂಗೀತ ಸಂಯೋಜಿಸಿದ್ದಾರೆ. ಛಾಯಾಗ್ರಹಣ ರವಿ ವಿ. ಅವರದು. ಶಿವರಾಜ್ ಕೆ.ಆರ್. ಪೇಟೆ, ಅಶೋಕ್, ಅಕ್ಷತಾ, ಅಚ್ಯುತ್‌ಕುಮಾರ್, ಪದ್ಮಜಾ ರಾವ್, ಬಿರಾದಾರ್, ಗಿರಿಜಾ ಲೋಕೇಶ್ ತಾರಾಗಣದಲ್ಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.