ADVERTISEMENT

ಸಿನಿಮಾ ಟಿಕೆಟ್‌ ಮೇಲೆ ಸೆಸ್‌ ಬೇಡ: ಸಿಎಂ ಸಿದ್ದರಾಮಯ್ಯಗೆ ಎನ್‌.ಎಂ.ಸುರೇಶ್ ಮನವಿ

​ಪ್ರಜಾವಾಣಿ ವಾರ್ತೆ
Published 27 ಜುಲೈ 2024, 13:36 IST
Last Updated 27 ಜುಲೈ 2024, 13:36 IST
ಎನ್‌.ಎಂ.ಸುರೇಶ್‌ 
ಎನ್‌.ಎಂ.ಸುರೇಶ್‌    

ಬೆಂಗಳೂರು: ಕರ್ನಾಟಕ ಸಿನಿ ಮತ್ತು ಸಾಂಸ್ಕೃತಿಕ ಕಾರ್ಯಕರ್ತರ (ಕ್ಷೇಮಾಭಿವೃದ್ಧಿ) ಮಸೂದೆ 2024ನ್ನು ಕೈಬಿಡಬೇಕು ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ (ಕೆಎಫ್‌ಸಿಸಿ) ಅಧ್ಯಕ್ಷ ಎನ್‌.ಎಂ.ಸುರೇಶ್‌ ಆಗ್ರಹಿಸಿದ್ದಾರೆ. ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಮನವಿ ಪತ್ರ ಸಲ್ಲಿಸಿದ್ದಾರೆ. 

ಶನಿವಾರ ಸುದ್ದಿಗೋಷ್ಠಿ ನಡೆಸಿದ ಎನ್‌.ಎಂ.ಸುರೇಶ್‌, ‘ನಿರ್ಮಾಪಕರು ಚಿತ್ರದ ಸೆನ್ಸಾರ್‌ ಪಡೆಯುವ ಸಂದರ್ಭದಲ್ಲಿ ವೀಕ್ಷಣೆಗೆ ಪಾವತಿ ಮಾಡುವ ಹಣವು ಕಾರ್ಮಿಕರ ಹಿತರಕ್ಷಣೆಗೆ ವರ್ಗಾಯಿಸಲಾಗುತ್ತದೆ. ಅದೇ ರೀತಿ ಚಿತ್ರೀಕರಣದಲ್ಲಿ ತೊಡಗಿಸಿಕೊಳ್ಳುವ ಕಾರ್ಮಿಕರಿಗೂ ಇಎಸ್‌ಐ ಮತ್ತು ಪಿಎಫ್‌ ಸೌಲಭ್ಯಗಳನ್ನು ನೀಡಲಾಗುತ್ತಿದೆ. ಈಗ ಟಿಕೆಟ್‌ ಮೇಲೆ ಶೇ 2ರಷ್ಟು ಸೆಸ್‌ ವಿಧಿಸಿದರೆ ಕನ್ನಡ ಚಿತ್ರರಂಗಕ್ಕೆ ಮತ್ತಷ್ಟು ಹೊರೆಯಾಗುತ್ತದೆ. ಚಿತ್ರಮಂದಿರಗಳಿಗೆ ಪ್ರೇಕ್ಷಕರ ಸಂಖ್ಯೆ ಗಣನೀಯವಾಗಿ ಇಳಿಮುಖವಾಗಿದೆ. ಹಾಕಿದ ಬಂಡವಾಳ ವಾಪಸ್‌ ಬರದ ಕಾರಣ ಪರಿಸ್ಥಿತಿಯನ್ನು ಎದುರಿಸಲಾಗದೆ ಕೆಲವು ನಿರ್ಮಾಪಕರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಟಿಕೆಟ್‌ ಮೇಲೆ ಶೇ 2ರಷ್ಟು ಸೆಸ್‌ ವಿಧಿಸಿದರೆ ಮತ್ತಷ್ಟು ಹೊರೆಯಾಗುತ್ತದೆ. ಆದ್ದರಿಂದ ಕಾರ್ಮಿಕರ ಕಲ್ಯಾಣಕ್ಕೆ ಬೇಕಾದಂತಹ ಹಣವನ್ನು ಪ್ರೇಕ್ಷಕರಿಗೆ ನೀಡುವ ಟಿಕೆಟ್‌ ದರದ ಮೇಲೆ ವಿಧಿಸುವುದು ಸಮಂಜಸವಲ್ಲ. ಮೇಲಾಗಿ, ಈ ರೀತಿಯ ಸೆಸ್‌ ದೇಶದ ಯಾವುದೇ ರಾಜ್ಯಗಳಲ್ಲಿ ಚಾಲ್ತಿಯಲ್ಲಿ ಇರುವುದಿಲ್ಲ’ ಎಂದಿದ್ದಾರೆ.   

‘ಈ ಹಿಂದೆ ಕನ್ನಡ ಚಿತ್ರಗಳಿಗೆ ತೆರಿಗೆ ವಿನಾಯಿತಿ ಇತ್ತು. ಆದರೆ ಜಿಎಸ್‌ಟಿ ಬಂದ ಮೇಲೆ ಕನ್ನಡ ಚಿತ್ರಗಳಿಗೂ ತೆರಿಗೆಯನ್ನು ಪಾವತಿ ಮಾಡುತ್ತಿದ್ದೇವೆ. ಟಿಕೆಟ್‌ ಮೇಲೆ ವಿಧಿಸಲು ನಿರ್ಧರಿಸಿರುವ ಸೆಸ್‌ ಅನ್ನು ಸರ್ಕಾರ ಪುನರ್‌ಪರಿಶೀಲಿಸಲಿ’ ಎಂದು ಸುರೇಶ್‌ ಆಗ್ರಹಿಸಿದ್ದಾರೆ. ಈ ಮನವಿಗೆ ಮುಖ್ಯಮಂತ್ರಿ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದೂ ಸುರೇಶ್‌ ಹೇಳಿದರು.

ADVERTISEMENT

ಸುದ್ದಿಗೋಷ್ಠಿಯಲ್ಲಿ ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್‌ ಬಣಕಾರ್‌ ಮತ್ತಿತರರು ಇದ್ದರು.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.