ಚಂದನವನದಲ್ಲಿ ‘ರಣವಿಕ್ರಮ’, ‘ಗೂಗ್ಲಿ’, ‘ನಟಸಾರ್ವಭೌಮ’ದಂತಹ ಹಿಟ್ ಸಿನಿಮಾಗಳನ್ನು ನಿರ್ದೇಶಿಸಿದ್ದ ಪವನ್ ಒಡೆಯರ್ ಸದ್ಯಕ್ಕೆ ‘ರೇಮೊ’ ಚಿತ್ರದ ಬಿಡುಗಡೆಗೆ ಎದುರು ನೋಡುತ್ತಿದ್ದಾರೆ. ಈ ನಡುವೆಯೇ ಬಾಲಿವುಡ್‌ಗೂ ಅವರು ಹೆಜ್ಜೆ ಇಟ್ಟಿದ್ದಾರೆ.
‘ನೋಟರಿ’ ಚಿತ್ರಕ್ಕೆ ಪವನ್ ಸಾರಥಿ: ಪವನ್ ಒಡೆಯರ್ ನಿರ್ದೇಶನದಲ್ಲಿ ಮೂಡಿಬರಲಿರುವ ಮೊದಲ ಬಾಲಿವುಡ್ ಸಿನಿಮಾಗೆ ‘ನೋಟರಿ’ ಎಂಬ ಶೀರ್ಷಿಕೆ ಇಡಲಾಗಿದೆ. ಇದೊಂದು ಕಾಮಿಡಿ ಡ್ರಾಮಾ ಸಿನಿಮಾವಾಗಿದೆ. ಬೆಂಗಾಳಿಯ ಖ್ಯಾತ ನಟ, ‘ಕಹಾನಿ’, ‘ಪರಿ’ ಹಾಗೂ ನೆಟ್‌ಫ್ಲಿಕ್ಸ್‌ನಲ್ಲಿ ರಿಲೀಸ್ ಆಗಿರುವ ‘ಅರಣ್ಯಕ್’ನಲ್ಲಿ ನಟಿಸಿರುವ ಪರಂಬ್ರತಚಟ್ಟೋಪಾಧ್ಯಾಯ್ ‘ನೋಟರಿ’ ಸಿನಿಮಾದ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ.
ಪವನ್ ಒಡೆಯರ್ ನಿರ್ದೇಶನದ ಜೊತೆಗೆ‘ನೋಟರಿ’ ನಿರ್ಮಾಣದ ಹೊಣೆಯನ್ನೂ ಹೊತ್ತಿದ್ದಾರೆ. ನಿರ್ಮಾಪಕ ಶಬೀರ್ ಬಾಕ್ಸ್‌ವಾಲ ಅವರ ಕಾಶ್ ಎಂಟರ್‌ಟೈನ್‌ಮೆಂಟ್ ಜೊತೆಗೂಡಿ ಪವನ್ ತಮ್ಮದೇ ಒಡೆಯರ್ ಮೂವೀಸ್ ಬ್ಯಾನರ್‌ನಡಿ ನೋಟರಿ ಚಿತ್ರಕ್ಕೆ ಹಣ ಹೂಡಲಿದ್ದಾರೆ. ಸದ್ಯಕ್ಕೆ ಪ್ರಿಪ್ರೊಡಕ್ಷನ್ ಕೆಲಸದಲ್ಲಿ ತೊಡಗಿಸಿಕೊಂಡಿರುವ ಚಿತ್ರತಂಡವು ಆಗಸ್ಟ್‌ನಿಂದ ಮಧ್ಯಪ್ರದೇಶ ಅಥವಾ ಛತ್ತೀಸಗಡದಲ್ಲಿ ಚಿತ್ರೀಕರಣ ನಡೆಸಲು ಯೋಜನೆ ರೂಪಿಸಿದೆ. ಸದ್ಯದಲ್ಲಿಯೇ ಉಳಿದ ತಾರಾಗಣದ ಮಾಹಿತಿಯನ್ನು ತಿಳಿಸುವುದಾಗಿ ಚಿತ್ರತಂಡವು ತಿಳಿಸಿದೆ.
‘ರೇಮೊ’ ಸಿನಿಮಾ ಮೇನಲ್ಲಿ ತೆರೆಗೆ ಬರುವ ಸಾಧ್ಯತೆಯಿದೆ. ಜೊತೆಗೆ ಒಡೆಯರ್ ಮೂವೀಸ್ ನಿರ್ಮಾಣದ, ಹಲವು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನ ಕಂಡು ಪ್ರಶಸ್ತಿ ಪಡೆದಿರುವ,ಸಾಗರ್ ಪುರಾಣಿಕ್ ನಿರ್ದೇಶನದ ‘ಡೊಳ್ಳು’ ಸಿನಿಮಾವನ್ನೂ ತೆರೆಗೆ ತರುವ ತಯಾರಿ ನಡೆಸಿದ್ದಾರೆ ಪವನ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.