ಯೋಗರಾಜ್ ಭಟ್ ನಿರ್ದೇಶನದ, ಯಶಸ್ ಸೂರ್ಯ ಹಾಗೂ ಸೋನಲ್ ಮೊಂತೆರೋ ನಟನೆಯ ‘ಗರಡಿ’ ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದ್ದು, ಮಾರ್ಚ್‌ನಲ್ಲಿ ಚಿತ್ರವನ್ನು ತೆರೆಗೆ ತರಲು ಚಿತ್ರತಂಡ ಸಿದ್ಧತೆ ಆರಂಭಿಸಿದೆ.
ನಟ, ಸಚಿವ ಬಿ.ಸಿ.ಪಾಟೀಲ್ ಅವರ ಪತ್ನಿ ವನಜಾ ಪಾಟೀಲ್ ಹಾಗೂ ಪುತ್ರಿ ಸೃಷ್ಟಿ ಪಾಟೀಲ್ ನಿರ್ಮಾಣದ ‘ಗರಡಿ’ ಚಿತ್ರದ ಅಂತಿಮ ಹಂತದ ಚಿತ್ರೀಕರಣ ರಾಮುಹಳ್ಳಿಯ ಜಿ.ವಿ.ಅಯ್ಯರ್ ಸ್ಟುಡಿಯೊದಲ್ಲಿ ಇತ್ತೀಚೆಗೆ ನಡೆಯಿತು. ಸ್ಟುಡಿಯೊದಲ್ಲಿ ಗರಡಿಮನೆ ಸೆಟ್ ಹಾಕಿ ಶೂಟಿಂಗ್ ನಡೆಸಲಾಗಿತ್ತು.
‘ಸುಮಾರು ಎಪ್ಪತ್ತು ದಿನಗಳ ಚಿತ್ರೀಕರಣ ನಡೆಸಿದ್ದೇವೆ. ಚಿತ್ರದ ಕೊನೆಯ ಶೆಡ್ಯೂಲ್‌ನ ವಿಶೇಷವೆಂದರೆ, ಕಡೂರು ಶಾಸಕ ಬೆಳ್ಳಿ ಪ್ರಕಾಶ್ ಅವರು ನಾಯಕನ ತಂದೆ ಪಾತ್ರದಲ್ಲಿ ಇಲ್ಲಿ ನಟಿಸಿದ್ದಾರೆ. ಯಶಸ್ ಸೂರ್ಯ, ಸೋನಾಲ್ ಮೊಂತೆರೊ, ಬಿ.ಸಿ.ಪಾಟೀಲ್, ರವಿಶಂಕರ್, ಸುಜಯ್ ಬೇಲೂರು, ರಘು, ಧರ್ಮಣ್ಣ, ಚೆಲುವರಾಜ್, ಪೃಥ್ವಿ ಮುಂತಾದವರು ಈ ಹಂತದ ಚಿತ್ರೀಕರಣದಲ್ಲಿ ಭಾಗವಹಿಸಿದ್ದಾರೆ. ‘ಗರಡಿ’ ಹಳೆ ಮೈಸೂರು ಭಾಗದಲ್ಲಿ ನಡೆಯುವ ಕಥೆ. ದೇಸಿ ಕ್ರೀಡೆಗೆ ಒತ್ತು ನೀಡುವ ಸಲುವಾಗಿ ಈ ವಿಭಿನ್ನ ಕಥೆಯನ್ನು ಆಯ್ಕೆ ಮಾಡಿಕೊಂಡಿದ್ದೇವೆ’ ಎನ್ನುತ್ತಾರೆ ಯೋಗರಾಜ್ ಭಟ್.
‘ಚಿತ್ರದ ಆಡಿಯೋ ಹಕ್ಕು ಸರಿಗಮಪ ಸಂಸ್ಥೆಗೆ ₹1 ಕೋಟಿಗೆ ಮಾರಾಟವಾಗಿದೆ. ಡಬ್ಬಿಂಗ್, ರಿಮೇಕ್ ರೈಟ್ಸ್‌ಗೂ ಸಾಕಷ್ಟು ಬೇಡಿಕೆ ಇದೆ. ‘ಗರಡಿ’ ನಮ್ಮ ಸಂಸ್ಥೆಯ ನಿರ್ಮಾಣದ ಹದಿನಾರನೇ ಚಿತ್ರ. ಫೆಬ್ರುವರಿ ಮಾಸಾಂತ್ಯ ಅಥವಾ ಮಾರ್ಚ್ ಮೊದಲ ವಾರದಲ್ಲಿ ಚಿತ್ರ ತೆರೆಗೆ ಬರಲಿದೆ’ ಎಂದು ಬಿ.ಸಿ.ಪಾಟೀಲ್ ತಿಳಿಸಿದರು.
ಇದೇ ಮೊದಲ ಬಾರಿಗೆ ಯೋಗರಾಜ್ ಭಟ್ ಅವರು ಆ್ಯಕ್ಷನ್ ಕಟ್ ಹೇಳುತ್ತಿರುವ ಚಿತ್ರದಲ್ಲಿ ರವಿಶಂಕರ್ ನಟಿಸುತ್ತಿದ್ದಾರೆ. ಬಿ.ಸಿ.ಪಾಟೀಲ್ ಅವರ ಜೊತೆಗಿನ ಅವರ ಮೊದಲ ಸಿನಿಮಾವೂ ಇದೇ ಆಗಿದೆ. ಚಿತ್ರದಲ್ಲಿ ವಿಶೇಷ ಪಾತ್ರದಲ್ಲಿ ನಟ ದರ್ಶನ್ ಅಭಿನಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.