ಬೆಂಗಳೂರು: ಚಂದನವನದಲ್ಲಿ ‘ಮೇಕಪ್ ಸೀನಣ್ಣ’ ಎಂದೇ ಗುರುತಿಸಿಕೊಂಡಿದ್ದ ಖ್ಯಾತ ಪ್ರಸಾಧನ ಕಲಾವಿದ ಶ್ರೀನಿವಾಸ್ (46 ವ) ಕೋವಿಡ್‌ನಿಂದ ನಿಧನರಾಗಿದ್ದಾರೆ.
ಜ್ವರದಿಂದ ಬಳಲುತ್ತಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಉಸಿರಾಟದ ಸಮಸ್ಯೆ ತೀವ್ರವಾಗಿ ಬುಧವಾರ ಬೆಳಗ್ಗೆ ಅವರು ಮೃತಪಟ್ಟಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಕಳೆದ 25 ವರ್ಷಗಳಿಂದ ಮೇಕಪ್‌ಮ್ಯಾನ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಶ್ರೀನಿವಾಸ್ ಅವರು 200ಕ್ಕೂ ಹೆಚ್ಚು ಚಿತ್ರಗಳಲ್ಲಿ ಹಲವು ಸ್ಟಾರ್ ನಟರಿಗೆ ಬಣ್ಣ ಹಚ್ಚಿದ್ದಾರೆ. ಪ್ರಸ್ತುತ ವರ್ಣಾಲಂಕಾರ ಹಾಗೂ ಕೇಶಾಲಂಕಾರ ಕಲಾವಿದ ಸಂಘದ ಉಪಾಧ್ಯಕ್ಷರಾಗಿದ್ದರು. ನಟ ಪುನೀತ್ ರಾಜ್‌ಕುಮಾರ್ ನಟಿಸುತ್ತಿರುವ ‘ಜೇಮ್ಸ್’ನಲ್ಲೂ ಶ್ರೀನಿವಾಸ್ ಕಾರ್ಯನಿರ್ವಹಿಸುತ್ತಿದ್ದರು.
‘ನನ್ನ ಎಲ್ಲ ಸಿನಿಮಾಗಳಿಗೂ ಮೇಕ್‌ಅಪ್ ಕಲಾವಿದರಾಗಿ ಸೀನಣ್ಣ ಕೆಲಸ ನಿರ್ವಹಿಸುತ್ತಿದ್ದರು. ಒಂದು ವಾರದ ಹಿಂದೆ ನಗುನಗುತ್ತಾ ಬಂದು ಭೇಟಿಯಾಗಿದ್ದ ವ್ಯಕ್ತಿ ಇಂದು ಇಲ್ಲ ಎಂದರೆ ನಿಜವಾಗಿಯೂ ನಂಬಲಾಗುತ್ತಿಲ್ಲ’ ಎಂದು ಅದ್ದೂರಿ ಚಿತ್ರದ ನಿರ್ದೇಶಕ ಎ.ಪಿ.ಅರ್ಜುನ್ ಟ್ವೀಟ್ ಮಾಡಿದ್ದಾರೆ.
‘ನಮ್ಮ ‘ಬಹದ್ದೂರ್’, ‘ಭರ್ಜರಿ’, ‘ಭರಾಟೆ’ ಹಾಗೂ ‘ಜೇಮ್ಸ್’ ಚಿತ್ರಗಳಿಗೆ ಹಾಗೂ ಕನ್ನಡದ ಬಹಳಷ್ಟು ಚಿತ್ರಗಳಿಗೆ ಕಂಪೆನಿ ಮೇಕಪ್ ಮ್ಯಾನ್ ಆಗಿ (ವರ್ಣಾಲಂಕಾರ) ಸೀನಣ್ಣ ಕಾರ್ಯನಿರ್ವಹಿಸಿದ್ದರು. ಭಾವಪೂರ್ಣ ಶ್ರದ್ಧಾಂಜಲಿ ಅಣ್ಣ’ ಎಂದು ನಿರ್ದೇಶಕ ಚೇತನ್ ಕುಮಾರ್ ಟ್ವೀಟ್‌ನಲ್ಲಿ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.