ಹೊಸಪೇಟೆಯಲ್ಲಿ ನಟ ದರ್ಶನ್ ಮೇಲೆ ಅಪ್ಪು ಅಭಿಮಾನಿಗಳ ಆಕ್ರೋಶ ಖಂಡಿಸಿ ಕನ್ನಡ ಚಿತ್ರರಂಗ ದರ್ಶನ್ ಬೆಂಬಲಕ್ಕೆ ನಿಲ್ಲುತ್ತಿದೆ. ಘಟನೆಯನ್ನು ಖಂಡಿಸಿ ಕಿಚ್ಚ ಸುದೀಪ್ ಮಂಗಳವಾರ ಬೆಳಿಗ್ಗೆ ಟ್ವೀಟ್ ಮಾಡಿದ್ದರು. ದ್ವೇಷದಿಂದ ಏನೂ ಸಾಧಿಸಿಲ್ಲ ಸಾಧ್ಯವಿಲ್ಲ, ಪ್ರೀತಿಯಿಂದ ಬಾಳೋಣ ಎಂದಿದ್ದರು. ಶಿವರಾಜ ಕುಮಾರ್ ಕೂಡ ದರ್ಶನ್ ಮೇಲಿನ ದಾಳಿ ಖಂಡನೀಯ ಎಂದಿದ್ದರು. ಅದರ ಬೆನ್ನಲ್ಲೇ ಚಿತ್ರರಂಗದ ಅನೇಕ ಗಣ್ಯರು ದಾಳಿ ಖಂಡಿಸಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುತ್ತಿದ್ದಾರೆ.
ನಟ ಶರಣ್ ಟ್ವೀಟ್ ಮಾಡಿ ನನ್ನ ಚಿತ್ರರಂಗದ ಸಹಪಾಠಿ, ನನ್ನ ಗೆಳೆಯರಾದ ದರ್ಶನ್ ಅವರಿಗೆ ಹೊಸಪೇಟೆಯಲ್ಲಿ ನಡೆದಿದ್ದು ನಿಜಕ್ಕೂ ಖಂಡನೀಯ. ದ್ವೇಷ ಯಾಕೆ ಎಂದಿದ್ದಾರೆ.
ನಟ ಜಗ್ಗೇಶ್ ಕೂಡ ಹಿಂದಿನ ಮನಸ್ತಾಪಗಳನ್ನೆಲ್ಲ ಮರೆತು ದರ್ಶನ್ ಬೆನ್ನಿಗೆ ನಿಂತಿದ್ದಾರೆ. ನಟಿ ರಮ್ಯಾ, ರಶ್ಮಿಕಾ ಮಂದಣ್ಣ, ಅನುಪ್ರಭಾಕರ್ ಕೂಡ ಘಟನೆಗೆ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಟ ರಘು ಮುಖರ್ಜಿ, ನಿರ್ದೇಶಕ ತರುಣ್ ಸುಧೀರ್, ನಿರ್ಮಾಪಕ ಉಮಾಪತಿ ಕೂಡ ದಾಳಿ ಖಂಡಿಸಿ ದರ್ಶನ್ ಜತೆಗಿನ ಪೋಟೊ ಹಂಚಿಕೊಂಡಿದ್ದಾರೆ.
ಜನವರಿಯಲ್ಲಿ ತೆರೆ ಕಾಣಲಿರುವ ‘ಕ್ರಾಂತಿ’ ಸಿನಿಮಾದ ಪ್ರಚಾರ ಹಾಗೂ ಹಾಡು ಬಿಡುಗಡೆಗೆ ಚಿತ್ರತಂಡದೊಂದಿಗೆ ಭಾನುವಾರ ಸಂಜೆ ಹೊಸಪೇಟೆಗೆ ಬಂದಿದ್ದ ನಟ ದರ್ಶನ್ ತೂಗುದೀಪ ಅವರು ದಿವಂಗತ ನಟ ಡಾ. ಪುನೀತ್ ರಾಜಕುಮಾರ್ ಅವರ ಅಭಿಮಾನಿಗಳ ಆಕ್ರೋಶಕ್ಕೆ ಗುರಿಯಾಗಿದ್ದರು.
ದರ್ಶನ್ ಅವರು ವೇದಿಕೆಗೆ ಬರುತ್ತಿದ್ದಂತೆ ಅವರ ಎದುರಿನಲ್ಲೇ ಅವರ ಬ್ಯಾನರ್ ಹರಿದು ಹಾಕಿದರು. ಅಪ್ಪು.. ಅಪ್ಪು ಎಂದು ಜಯಘೋಷ ಹಾಕಿದರು. ದರ್ಶನ್ ಬಂದ ಬಸ್ಸಿನ ಮೇಲೆ ಯುವಕರ ಗುಂಪೊಂದು ಪುನೀತ್ ಅವರ ಭಾವಚಿತ್ರ ಹಿಡಿದುಕೊಂಡು ಕುಣಿಯಿತು. ‘ಸ್ಟಾರ್ ವಾರ್ ಬೇಡ, ಅಪ್ಪು ಅವರೇ ಹೇಳಿದ್ದಾರೆ. ಸಹಕಾರ ಕೊಡಬೇಕು’ ಎಂದು ನಿರೂಪಕರು ಕೋರಿದರೂ ಕೇಳಲಿಲ್ಲ. ಸುತ್ತ ನೆರೆದಿದ್ದವರು ಕೂಡ ಪುನೀತ್ ಪರ ಜಯಘೋಷ ಹಾಕಿದರು. ಪರಿಸ್ಥಿತಿ ಬಿಗಡಾಯಿಸುತ್ತಿರುವುದನ್ನು ಗಮನಿಸಿದ ಚಿತ್ರತಂಡ ಅಲ್ಲಿಂದ ನಿರ್ಗಮಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.