ಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯ ನಿರ್ಮಾಪಕ, ವಿತರಕ ಕೆಸಿಎನ್ ಮೋಹನ್ ಭಾನುವಾರ ನಿಧನರಾದರು. ಅವರಿಗೆ 63 ವರ್ಷ ವಯಸ್ಸಾಗಿತ್ತು.
‘ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಭಾನುವಾರ ಮಧ್ಯಾಹ್ನ 12 ಗಂಟೆ ವೇಳೆಗೆ ನಿಧನರಾಗಿದ್ದಾರೆ. ಸೋಮವಾರ ಬೆಳಿಗ್ಗೆ ಚಾಮರಾಜಪೇಟೆಯ ಚಿತಾಗಾರದಲ್ಲಿ ಅಂತ್ಯಕ್ರಿಯೆ ನಡೆಯಲಿದೆ’ ಎಂದು ಅವರ ಕುಟುಂಬದ ಮೂಲಗಳು ಹೇಳಿವೆ.
ಡಾ. ರಾಜ್ಕುಮಾರ್ ಅವರ ಹಲವು ಜನಪ್ರಿಯ ಸಿನಿಮಾಗಳ ನಿರ್ಮಾಪಕ ಕೆಸಿಎನ್ ಗೌಡರ ಪುತ್ರರಾಗಿದ್ದ ಮೋಹನ್, ನವರಂಗ್, ಊರ್ವಶಿ ಚಿತ್ರಮಂದಿರಗಳ ಮಾಲೀಕರಾಗಿದ್ದರು. ಜೊತೆಗೆ ತಾವು ಕೂಡ ಸಾಕಷ್ಟು ಸಿನಿಮಾಗಳನ್ನು ನಿರ್ಮಿಸಿದ್ದರು. ಅದಲ್ಲದೇ ಚಿತ್ರ ವಿತರಣೆ ಉದ್ಯಮದಲ್ಲಿಯೂ ಸಕ್ರಿಯರಾಗಿದ್ದರು.
ರಮ್ಯಾ ದಿವ್ಯ ಸ್ಪಂದನಾ ನಟನೆಯ ‘ಜೂಲಿ’ ಸಿನಿಮಾವನ್ನು ಮೋಹನ್ ನಿರ್ಮಿಸಿದ್ದರು. ಅವರ ಪತ್ನಿ ಪೂರ್ಣಿಮಾ ಈ ಚಿತ್ರವನ್ನು ನಿರ್ದೇಶಿಸಿದ್ದರು. ‘ರಾಮರಾಜ್ಯದಲ್ಲಿ ರಾಕ್ಷಸರು’, ‘ಜಯಸಿಂಹ’, ‘ಧರ್ಮ ಯುದ್ಧ’, ಶಂಕರ್ ನಾಗ್ ನಟನೆ ‘ಭಲೇ ಚತುರು’ ಮುಂತಾದ ಸಿನಿಮಾಗಳನ್ನು ಕೆಸಿಎನ್ ಮೋಹನ್ ಅವರು ನಿರ್ಮಾಣ ಮಾಡಿದ್ದರು.
ಮೃತರು ಓರ್ವ ಪುತ್ರ ಹಾಗೂ ಇಬ್ಬರು ಹೆಣ್ಣುಮಕ್ಕಳನ್ನು ಅಗಲಿದ್ದಾರೆ. ಮೃತರ ಪತ್ನಿ ಪೂರ್ಣಿಮಾ ಕೆಲ ವರ್ಷಗಳ ಹಿಂದೆ ಹೃದಯಾಘಾತದಿಂದ ಮೃತಪಟ್ಟಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.