ADVERTISEMENT

‘ದೂರದರ್ಶನ’ ಚಿತ್ರೀಕರಣ ಪೂರ್ಣ

​ಪ್ರಜಾವಾಣಿ ವಾರ್ತೆ
Published 15 ಮೇ 2022, 11:20 IST
Last Updated 15 ಮೇ 2022, 11:20 IST
ಪೃಥ್ವಿ ಅಂಬಾರ್‌
ಪೃಥ್ವಿ ಅಂಬಾರ್‌   

ಪೃಥ್ವಿ ಅಂಬಾರ್ ನಟನೆಯ ‘ದೂರದರ್ಶನ’ ಸಿನಿಮಾದ ಚಿತ್ರೀಕರಣ ಮುಗಿದಿದೆ. ಈಗ ಪೋಸ್ಟ್‌ ಪ್ರೊಡಕ್ಷನ್‌ ನಡೆಯುತ್ತಿದೆ. ಹಾಗಿದ್ದರೆ ಏನಿದೆ ‘ದೂರದರ್ಶನ’ದಲ್ಲಿ? ಮುಂದೆ ಓದಿ

ಕರಾವಳಿ ಮತ್ತು ಪಶ್ಚಿಮ ಘಟ್ಟಗಳ ನಡುವಿನ ಒಂದು ಚಿಕ್ಕ ಊರಿಗೆ ಟಿವಿ ಬಂದ ಮೇಲೆ ಹೇಗೆಲ್ಲಾ ಪ್ರಭಾವ ಬೀರುತ್ತದೆ ಎನ್ನುವುದನ್ನು ಹೇಳಿದೆ ‘ದೂರದರ್ಶನ’. ಅಂದಿನ ಕಾಲ ಘಟ್ಟದಲ್ಲಿ ಇದ್ದಂತಹ ಹಲವಾರು ಪ್ರಚಲಿತ ವಿದ್ಯಮಾನಗಳನ್ನು ನೋಡುಗರು ಮೆಲುಕು ಹಾಕುವಂತೆ ಮಾಡುವ ಕಥಾಹಂದರ ಇರುವ ಈ ಸಿನಿಮಾ ತಯಾರಾಗಿದೆ. ಆಕರ್ಷಕ ಶೀರ್ಷಿಕೆಯಡಿ ತಯಾರಾಗಿರುವ ಈ ಸಿನಿಮಾ 80ರ ದಶಕಕ್ಕೆ ನೋಡುಗರನ್ನು ಕರೆದೊಯ್ಯುವಂತೆ ಮಾಡುತ್ತದೆ ಎನ್ನುವುದು ಚಿತ್ರತಂಡದ‌ ಮಾತು.

‘ದಿಯಾ’ ಸಿನಿಮಾ ಮೂಲಕ ಪ್ರೇಕ್ಷಕರ ಮನೆ ಮನ ಗೆದ್ದಿರುವ ಮಂಗಳೂರಿನ ಪ್ರತಿಭೆ ಪೃಥ್ವಿ ಅಂಬಾರ್ ‘ದೂರದರ್ಶನ’ ಸಿನಿಮಾದಲ್ಲಿ ನಾಯಕ. ಪೃಥ್ವಿಗೆ ಜೋಡಿಯಾಗಿ ಅಯಾನಾ ನಟಿಸಿದ್ದಾರೆ. ಪ್ರಮುಖ ಪಾತ್ರದಲ್ಲಿ ಉಗ್ರಂ ಮಂಜು ಕಾಣಿಸಿಕೊಂಡಿದ್ದಾರೆ. ಹರಿಣಿ, ದೀಪಕ್ ರೈ ಪಾಣಾಜೆ, ರಘು ರಮಣಕೊಪ್ಪ, ಹುಲಿ ಕಾರ್ತಿಕ್, ಸೂರಜ್ ಮಂಗಳೂರು, ಸೂರ್ಯ ಕುಂದಾಪುರ ಸೇರಿದಂತೆ ಮತ್ತಿತರ ತಾರಾಗಣ ಸಿನಿಮಾದಲ್ಲಿದೆ.

ADVERTISEMENT

‘ಟ್ರಂಕ್’ ಸಿನಿಮಾದಲ್ಲಿ ಸಂಭಾಷಣೆ ಹಾಗೂ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿರುವ, ಹಲವು ಕಿರುಚಿತ್ರಗಳನ್ನು ನಿರ್ದೇಶನ ಮಾಡಿರುವ ಸುಕೇಶ್ ಶೆಟ್ಟಿ ಈ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದು, ಸಿನಿಮಾಗೆ ಕಥೆ, ಚಿತ್ರಕಥೆಯನ್ನೂ ಬರೆದಿದ್ದಾರೆ. ಇದು ಇವರ ಮೊದಲ ಸಿನಿಮಾ.

ನೈಜ ಘಟನೆ ಹಾಗೂ ಕಾಲ್ಪನಿಕತೆ ಬೆರೆತ ಸಿನಿಮಾವಾಗಿರುವ ದೂರದರ್ಶನ ಚಿತ್ರೀಕರಣ ಮಂಗಳೂರು ಪುತ್ತೂರು ಮಧ್ಯದ ಆರ್ಲಪದವಿನಲ್ಲಿ 38 ದಿನಗಳ ಕಾಲ ನಡೆದಿದೆ. ವಿಎಸ್ ಮೀಡಿಯಾ ಎಂಟರ್‌ಪ್ರೈಸಸ್‌ ಬ್ಯಾನರ್ ಅಡಿ ರಾಜೇಶ್ ಭಟ್ ಸಿನಿಮಾಗೆ ಬಂಡವಾಳ ಹೂಡಿದ್ದಾರೆ.ಉಗ್ರಂ ಮಂಜು ಎಕ್ಸಿಕ್ಯೂಟಿವ್ ಪ್ರೊಡ್ಯೂಸರ್. ವಾಸುಕಿ ವೈಭವ್ ಸಂಗೀತ ಸಂಯೋಜನೆ, ಅರುಣ್ ಸುರೇಶ್ ಕ್ಯಾಮೆರಾ ವರ್ಕ್, ನಂದೀಶ್ ಟಿಜಿ ಸಂಭಾಷಣೆ, ಪ್ರದೀಪ್ ಆರ್. ರಾವ್ ಸಂಕಲನ ಸಿನಿಮಾಕ್ಕಿದೆ. ದೂರದರ್ಶನ ಸಿನಿಮಾದಲ್ಲಿ ನಾಲ್ಕು ಹಾಡುಗಳು, ಎರಡು ಫೈಟ್ ದೃಶ್ಯಗಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.