ADVERTISEMENT

ರಾಜಕೀಯ ಇಷ್ಟವಿಲ್ಲ: ‘ಬನಾರಸ್‌’ ನಾಯಕನ ಬಿಂದಾಸ್‌ ಮಾತು

ಶರತ್‌ ಹೆಗ್ಡೆ
Published 8 ಸೆಪ್ಟೆಂಬರ್ 2022, 19:30 IST
Last Updated 8 ಸೆಪ್ಟೆಂಬರ್ 2022, 19:30 IST
ಸೋನಲ್‌ ಮೋಂತೆರೋ, ಝೈದ್‌ ಖಾನ್‌ 
ಸೋನಲ್‌ ಮೋಂತೆರೋ, ಝೈದ್‌ ಖಾನ್‌    

ಉದ್ಯಮದ ಜೊತೆ ನಟನೆಯನ್ನೇ ನೆಚ್ಚಿಕೊಂಡು ಮುಂದುವರಿದಿದ್ದಾರೆ ಶಾಸಕ ಜಮೀರ್‌ ಅಹಮದ್‌ ಖಾನ್‌ ಪುತ್ರ ಝೈದ್‌ ಖಾನ್‌. ಸಾಕಷ್ಟು ತರಬೇತಿ, ಸಿದ್ಧತೆ, ಭಾಷಾ ಕಲಿಕೆಯ ಬಳಿಕ ಚಂದನವನಕ್ಕೆ ಪ್ರವೇಶಿಸಿರುವ ಅವರ ಮೊದಲ ಚಿತ್ರ ‘ಬನಾರಸ್‌’ ಸಿದ್ಧವಾಗಿದೆ. ಐದು ಭಾಷೆಗಳಲ್ಲಿ ಮೂಡಿಬರಲಿರುವ ‘ಬನಾರಸ್‌’ನ ನಾಯಕ ತಮ್ಮ ಮೊದಲ ಚಿತ್ರದ ಬಗ್ಗೆ ತೆರೆದುಕೊಂಡದ್ದು ಹೀಗೆ

**

*ಬೆಳ್ಳಿತೆರೆಗೆ ಪ್ರವೇಶಿಸುವ ಸಂದರ್ಭ ಹೇಗನ್ನಿಸುತ್ತಿದೆ?
ತುಂಬಾ ಖುಷಿ ಅನ್ನಿಸುತ್ತಿದೆ. ನಮ್ಮ ಭಾಷೆಯ ಚಿತ್ರದಲ್ಲಿ ಕಾಣಿಸಿಕೊಳ್ಳುವುದೆಂದರೆ ಸಹಜವಾದ ಖುಷಿ ಅಲ್ವಾ. ಅದಕ್ಕಾಗಿ ಸಿದ್ಧತೆ ಮಾಡಿಕೊಂಡದ್ದು ಸಾರ್ಥಕವೆನಿಸಿದೆ.

ADVERTISEMENT

*ನಿಮ್ಮ ಸಿದ್ಧತೆ ಏನಿತ್ತು?
ಪಿ.ಯು. ಶಿಕ್ಷಣ ಮುಗಿದ ಬಳಿಕ ಮುಂಬೈಗೆ ತೆರಳಿದೆ. ಅನುಪಮ್‌ ಖೇರ್‌ ಅಕಾಡೆಮಿಯಲ್ಲಿ ನಟನೆಯ ತರಬೇತಿ ಪಡೆದೆ. ಆ ಬಳಿಕ ಬೆಂಗಳೂರಿಗೆ ಬಂದೆ. ಗೌತಿ ಭಟ್‌ ಅನ್ನುವ ಶಿಕ್ಷಕಿ ಬಳಿ ಸ್ಪಷ್ಟ ಕನ್ನಡದ ಶಿಕ್ಷಣ ಪಡೆದೆ. ಸುಮಾರು 6 ತಿಂಗಳು ಭಾಷಾ ಸ್ಪಷ್ಟತೆ ಬರಲು ಬೇಕಾಯಿತು. ಅದರ ಪರಿಣಾಮವೇ ಇಂದು ಸ್ಪಷ್ಟವಾಗಿ ಕನ್ನಡ ಮಾತನಾಡಬಲ್ಲವನಾಗಿದ್ದೇನೆ. ಈ ಸಿನಿಮಾಕ್ಕೆ ಆಯ್ಕೆಯಾಗಬೇಕಾದರೂ ಕೆಲಕಾಲ ಕಾಯಬೇಕಾಯಿತು. ಸುಖಾ ಸುಮ್ಮನೆ ಕಥೆಗಳನ್ನು ಒಪ್ಪಿಕೊಳ್ಳುವುದಿಲ್ಲ. ನನ್ನ ಸಾಮರ್ಥ್ಯ ಮತ್ತು ಇತಿಮಿತಿಗಳ ಅರಿವು ಸ್ಪಷ್ಟವಾಗಿದೆ. ಅದಕ್ಕೆ ತಕ್ಕಂತಿರುವ ಪಾತ್ರಗಳನ್ನು ಆಯ್ಕೆ ಮಾಡುತ್ತೇನೆ. ನಿರ್ದೇಶಕ ಜಯತೀರ್ಥ ಅವರೂ ಅಷ್ಟೇ. ನನ್ನನ್ನು ದೀರ್ಘ ಕಾಲ ಅಧ್ಯಯನ ನಡೆಸಿ ನನಗೆ ಸರಿಹೊಂದುವ ಪಾತ್ರ ಸೃಷ್ಟಿ ಮಾಡಿದ್ದಾರೆ. ತುಂಬಾ ಆತ್ಮೀಯವಾಗಿ ನಡೆಸಿಕೊಂಡಿದ್ದಾರೆ.

*ಉದ್ಯಮಿ, ರಾಜಕಾರಣಿಯ ಮಗನಿಗೆ ಸಿನಿಮಾ ಆಸಕ್ತಿ ಬಂದದ್ದು ಹೇಗೆ?
ಚಿಕ್ಕ ವಯಸ್ಸಿನಿಂದಲೂ ಸಿನಿಮಾ ಬಗ್ಗೆ ಕ್ರೇಜ್‌ ಇತ್ತು. ನನಗೆ ರಾಜಕಾರಣ ಏನೇನೂ ಇಷ್ಟವಿಲ್ಲ. ಅದರಲ್ಲಿ ನೆಮ್ಮದಿ ಇಲ್ಲ. ನಮ್ಮ ಕುಟುಂಬದಲ್ಲಿ ಇನ್ನು ಯಾರೂ ರಾಜಕಾರಣಿಯಾಗಿ ಮುಂದುವರಿಯಬಾರದು. ಒಂದು ವೇಳೆ ನಾನು ರಾಜಕಾರಣ ಪ್ರವೇಶಿಸಿದರೆ ಪ್ರತಿಯೊಂದಕ್ಕೂ ಅಪ್ಪನ ಜೊತೆ ಹೋಲಿಸಿ ನೋಡುವ ಸಾಧ್ಯತೆಯೂ ಇದೆ. ಹಾಗಾಗಿ ನಾನು ಅಪ್ಪನ ಉದ್ಯಮ ಮತ್ತು ನನ್ನ ಆಸಕ್ತಿ ಆಗಿರುವ ನಟನೆಯನ್ನೇ ಮುಂದುವರಿಸುತ್ತೇನೆ.

*ಅಪ್ಪನ ಮನವೊಲಿಸಿದ್ದು ಹೇಗೆ?
ಹೌದು ಅದೊಂದು ದೊಡ್ಡ ಸರ್ಕಸ್‌. ಒಂದು ಕುರುಕ್ಷೇತ್ರ ಯುದ್ಧದಂತೆ. ನಮ್ಮ ಅಪ್ಪ ಸ್ವಲ್ಪ ಮುಂಗೋಪಿ. ಎಲ್ಲಿ ರೇಗಾಡುತ್ತಾರೋ ಎಂಬ ಭಯ ಇತ್ತು. ಹಾಗಾಗಿ ನಟನೆ, ಸಿನಿಮಾ ಆಸೆಯನ್ನು 2014ರಿಂದಲೇ ಅದುಮಿಟ್ಟುಕೊಂಡಿದ್ದೆ. ನಮ್ಮ ನಿರ್ಮಾಪಕ ತಿಲಕ್‌ರಾಜ್‌ ಮತ್ತು ಅಪ್ಪ ತುಂಬಾ ಆತ್ಮೀಯರು. ಅವರ ಮೂಲಕ ಸೂಕ್ಷ್ಮವಾಗಿ ಹೇಳಿಸಿದೆ. ಅದಕ್ಕೂ ದೊಡ್ಡ ಜಗಳವೇ ಆಗಿ ಹೋಯಿತು. ಕೊನೆಗೂ ಒಲ್ಲದ ಮನಸ್ಸಿನಿಂದ ಒಪ್ಪಿದ ಅಪ್ಪ, ನಾನು ನಿನ್ನ ಜೊತೆ ಸಿನಿಮಾ ವಿಷಯದಲ್ಲಿ ಬೆಂಬಲವಾಗಿ ನಿಲ್ಲುವುದಿಲ್ಲ. ಹಣಕಾಸು, ಅಥವಾ ಯಾವುದೇ ನೆರವು ಸಿಗುವುದಿಲ್ಲ. ನಿನ್ನ ಸ್ವಪ್ರಯತ್ನದಿಂದ ಏನಾಗುತ್ತದೋ ಅದನ್ನು ಮಾಡು ಅಂದು ಬಿಟ್ಟರು. ನಟನೆ ಕಲಿತುಕೊಂಡು ಬರಲಿ. ಮತ್ತೆ ನೋಡೋಣ ಎಂದು ತಿಲಕ್‌ರಾಜ್‌ ಅವರಿಗೆ ಹೇಳಿದರು. ಅಲ್ಲಿಂದ ಇಲ್ಲಿವರೆಗೆ ಬಂದಿದ್ದೇನೆ ನೋಡಿ. ಅಪ್ಪ ಇನ್ನೂ ನಮ್ಮ ಸಿನಿಮಾದ ಪ್ರತಿ ನೋಡಿಯೇ ಇಲ್ಲ.

*ಹೊಸ ಪ್ರಾಜೆಕ್ಟ್‌ಗಳ ಬಗ್ಗೆ?
ಸದ್ಯ ‘ಬನಾರಸ್‌’ ಬಿಡುಗಡೆಯತ್ತ ಗಮನವಿದೆ. ಮುಂದಿನ ವರ್ಷ ಜನವರಿ– ಫೆಬ್ರುವರಿ ವೇಳೆಗೆ ಮತ್ತೆ ಎರಡು ಹೊಸ ಚಿತ್ರಗಳನ್ನು ಕೈಗೆತ್ತಿಕೊಳ್ಳುತ್ತೇನೆ. ಈ ಕ್ಷೇತ್ರದಲ್ಲೇ ಇನ್ನೊಂದಿಷ್ಟು ಕನಸುಗಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.