ADVERTISEMENT

ವೆನಿಸ್‌ ಚಿತ್ರೋತ್ಸವದಲ್ಲಿ ‘ಘಟಶ್ರಾದ್ಧ’ ಪ್ರದರ್ಶನ

​ಪ್ರಜಾವಾಣಿ ವಾರ್ತೆ
Published 31 ಆಗಸ್ಟ್ 2024, 22:30 IST
Last Updated 31 ಆಗಸ್ಟ್ 2024, 22:30 IST
ಘಟಶ್ರಾದ್ಧ ಚಿತ್ರದ ದೃಶ್ಯ 
ಘಟಶ್ರಾದ್ಧ ಚಿತ್ರದ ದೃಶ್ಯ    

ಬೆಂಗಳೂರು: ಗಿರೀಶ ಕಾಸರವಳ್ಳಿ ಅವರು ನಿರ್ದೇಶಿಸಿದ ರಾಷ್ಟ್ರಪ್ರಶಸ್ತಿ ವಿಜೇತ ‘ಘಟಶ್ರಾದ್ಧ’ ಸಿನಿಮಾ ವಿಶ್ವದ ಪ್ರತಿಷ್ಠಿತ ಚಿತ್ರೋತ್ಸವಗಳಲ್ಲಿ ಅಗ್ರಸ್ಥಾನ ಪಡೆದ ವೆನಿಸ್‌ ಅಂತರರಾಷ್ಟ್ರೀಯ ಚಿತ್ರೋತ್ಸವದಲ್ಲಿ ಪ್ರದರ್ಶನ ಕಾಣಲಿದೆ. ವೆನಿಸ್‌ ಚಿತ್ರೋತ್ಸವದಲ್ಲಿ ಪ್ರದರ್ಶನಗೊಳ್ಳುತ್ತಿರುವ ಮೊದಲ ಕನ್ನಡ ಚಿತ್ರವೆಂಬ ಹೆಗ್ಗಳಿಕೆಗೂ ‘ಘಟಶ್ರಾದ್ಧ’ ಭಾಜನವಾಗಿದೆ.  

ಈ ಸಿನಿಮಾವನ್ನು ವಿಶ್ವಸಿನಿಮಾದ ಒಂದು ಕ್ಲಾಸಿಕ್‌ ಚಿತ್ರ ಎಂದು ಪರಿಗಣಿಸಿ ಪ್ರದರ್ಶಿಸಲಾಗುತ್ತಿದೆ. ಸಾಮಾನ್ಯವಾಗಿ ಚಿತ್ರೋತ್ಸವಗಳಲ್ಲಿ ಒಂದು ಚಿತ್ರಕ್ಕೆ ಎರಡು ಪ್ರದರ್ಶನಗಳಿದ್ದರೆ ‘ಘಟಶ್ರಾದ್ಧ’ ಚಿತ್ರದ ಮೂರು ಪ್ರದರ್ಶನಗಳು ವೆನಿಸ್‌ ಚಿತ್ರೋತ್ಸವದಲ್ಲಿ ಇರಲಿವೆ. ಜೊತೆಗೆ ನಿರ್ದೇಶಕರಾದ ಗಿರೀಶ ಕಾಸರವಳ್ಳಿಯವರನ್ನೂ ವಿಶೇಷ ಆಹ್ವಾನ ನೀಡಿ ಕರೆಸಿಕೊಳ್ಳಲಾಗಿದೆ. 

ಯು.ಆರ್‌.ಅನಂತಮೂರ್ತಿ ಅವರ ಕಥೆ ಆಧರಿಸಿದ, ಗಿರೀಶ ಕಾಸರವಳ್ಳಿ ಅವರು ನಿರ್ದೇಶಿಸಿದ್ದ ‘ಘಟಶ್ರಾದ್ಧ’ ಸಿನಿಮಾ 1978ರಲ್ಲಿ ತೆರೆಕಂಡಿತ್ತು. ಇದು ಗಿರೀಶ ಅವರ ಪ್ರಥಮ ಚಿತ್ರ. ಚಿತ್ರವನ್ನು ಸದಾನಂದ ಸುವರ್ಣ ನಿರ್ಮಾಣ ಮಾಡಿದ್ದರು. ಭಾರತೀಯ ಸಿನಿಮಾದ ಶತಮಾನೋತ್ಸವ ಸಂದರ್ಭದಲ್ಲಿ ಶತಮಾನದ 20 ಶ್ರೇಷ್ಠ ಚಿತ್ರಗಳಲ್ಲಿ ಒಂದೆಂದು ಪರಿಗಣಿತವಾದ ‘ಘಟಶ್ರಾದ್ಧ’ ಅನೇಕ ಅಂತರರಾಷ್ಟ್ರೀಯ ಮನ್ನಣೆಯನ್ನೂ ಗಳಿಸಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.