‘ಗೋಧ್ರಾ’ ಟೈಟಲ್ ಅಷ್ಟೇ ಅಲ್ಲ, ‘ಇದು ಎಂದೂ ಮುಗಿಯದ ಯುದ್ಧ’ ಸಬ್ ಟೈಟಲ್‌ನಿಂದಲೂ ಸಿನಿರಸಿಕರಕುತೂಹಲ ಹೆಚ್ಚಿಸಿರುವ ಚಿತ್ರ. ‘ಗೋಧ್ರಾ’ ಎಂದಾಕ್ಷಣ ಎಲ್ಲರಿಗೂ ಗುಜರಾತ್ ಹತ್ಯಾಕಾಂಡ ನೆನಪಾಗಬಹುದು. ಆದರೆ, ಆ ದುರಂತಕ್ಕೂ ಈ ಚಿತ್ರದ ಕಥೆಗೂ ಯಾವುದೇ ನಂಟು ಇಲ್ಲವೆಂದು ಚಿತ್ರ ತಂಡ ಈ ಹಿಂದೆಯೇ ಸ್ಪಷ್ಟಪಡಿಸಿದೆ.
ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿರುವ ನಾಯಕ ನಟ ನೀನಾಸಂ ಸತೀಶ್ ಈ ಚಿತ್ರದಲ್ಲಿ ಕ್ರಾಂತಿಕಾರಿಯ ಪಾತ್ರವಂತೆ. ಚಿತ್ರರಸಿಕರ ಕುತೂಹಲ ಇಮ್ಮಡಿಗೊಳಿಸುವಂತೇ ಚಿತ್ರದ ಪೋಸ್ಟರ್‌ವೊಂದುಈಗ ಸಾಮಾಜಿಕ ಜಾಲತಾಣದಲ್ಲೂಗಮನ ಸೆಳೆಯುತ್ತಿದೆ.
ಅಂದುಕೊಂಡಂತೆಯೇ ಆಗಿದ್ದರೆ ಈ ಚಿತ್ರ ಅಕ್ಟೋಬರ್ ಅಥವಾ ನೆವೆಂಬರ್‌ನಲ್ಲಿ ತೆರೆಗೆ ಬರಬೇಕಿತ್ತು. ಆದರೆ, ಚಿತ್ರ ಬಿಡುಗಡೆ ಇನ್ನಷ್ಟು ವಿಳಂಬವಾಗಬಹುದು ಎನ್ನುವುದನ್ನು ನೀನಾಸಂ ಸತೀಶ್ ಟ್ವೀಟರ್‌ನಲ್ಲಿ ಹಾಕಿರುವ ಬರಹವೂ ಪುಷ್ಟೀಕರಿಸಿದೆ.‘ದೇಶದ ಬೇರೆ ಬೇರೆ ರಾಜ್ಯಗಳಲ್ಲಿ ಚಿತ್ರೀಕರಣ ಮಾಡಬೇಕಾದ್ದರಿಂದ ಚಿತ್ರದ ಚಿತ್ರೀಕರಣ ಮುಗಿಯಲು ಸ್ವಲ್ಪ ತಡವಾಗಿದೆ. ತಡವಾದರೂ ನೀವೆಲ್ಲರೂ ಅಚ್ಚರಿಪಡುವ ಚಿತ್ರ ಇದಾಗಲಿದೆ’ ಎಂದು ಸತೀಶ್ ಟ್ವೀಟ್ ಮಾಡಿದ್ದು, ಅಭಿಮಾನಿಗಳು ಮತ್ತು ಸಿನಿ ರಸಿಕರು ಇನ್ನಷ್ಟು ದಿನ ‘ಗೋಧ್ರಾ’ಗಾಗಿ ಕಾಯಿರಿ ಎನ್ನುವ ಕೋರಿಕೆ ರವಾನಿಸಿದ್ದಾರೆ.
‘ಗೋಧ್ರಾ ಚಿತ್ರದಲ್ಲಿನನ್ನದು ಮಧ್ಯಮ ವರ್ಗದ ವಿದ್ಯಾರ್ಥಿಯ ಪಾತ್ರ. ಆತ ಜನಪರ ಹೋರಾಟ ನಡೆಸುವ ಆ್ಯಕ್ಟಿವಿಸ್ಟ್ ಮನಸ್ಥಿತಿಯ ವ್ಯಕ್ತಿ. ಪೊಲಿಟಿಕಲ್ ಥ್ರಿಲ್ಲರ್ ಜತೆಗೆ ಇದರಲ್ಲೊಂದು ಪ್ರೇಮಕಥೆಯೂ ಇದೆ’ ಎನ್ನುವ ಮಾಹಿತಿಯನ್ನು ಸತೀಶ್ ಈ ಹಿಂದೆಯೇ ನೀಡಿದ್ದರು. ಚಿತ್ರದಲ್ಲಿರುವ ಪ್ರಮುಖ ನಾಲ್ಕು ಪಾತ್ರಗಳಲ್ಲಿ ಪತ್ರಿಕೋದ್ಯಮ ವಿದ್ಯಾರ್ಥಿಗಳಾಗಿ ಸತೀಶ್ ಮತ್ತು ಶ್ರದ್ಧಾ ಶ್ರೀನಾಥ್, ರಾಜಕಾರಣಿಯ ಪಾತ್ರದಲ್ಲಿ ಅಚ್ಯುತ್ ಕುಮಾರ್ ಹಾಗೂ ಪೈಲಟ್ ಪಾತ್ರದಲ್ಲಿ ವಸಿಷ್ಠ ಸಿಂಹ ಕಾಣಿಸಿಕೊಂಡಿದ್ದಾರೆ.
ಜಾಕೋಬ್ ಫಿಲಮ್ಸ್ ಮತ್ತು ಲೀಡರ್ ಫಿಲ್ಮ್ ಪ್ರೊಡಕ್ಷನ್ ಬ್ಯಾನರ್‌ನಡಿ ನಿರ್ಮಾಣವಾಗುತ್ತಿರುವಚಿತ್ರದ ಬಜೆಟ್‌ಈಗಾಗಲೇ ₹5 ಕೋಟಿ ತಲುಪಿದೆ ಎನ್ನಲಾಗುತ್ತಿದೆ. ಚಿತ್ರದ ಕಥೆ, ಚಿತ್ರಕಥೆ ಹಾಗೂ ನಿರ್ದೇಶನ ಕೆ.ಎಸ್.ನಂದೀಶ್ ಅವರದ್ದು.ಜಬೇಜ್ ಕೆ.ಗಣೇಶ್ ಛಾಯಾಗ್ರಹಣ ಮಾಡಿದ್ದಾರೆ.
ಸತೀಶ್ ಮತ್ತು ಅದಿತಿ ಪ್ರಭುದೇವ ನಟಿಸಿರುವ ‘ಬ್ರಹ್ಮಚಾರಿ’ ಚಿತ್ರವು ಪೂರ್ಣಗೊಂಡಿದ್ದು, ಅದು ಕೂಡ ಸದ್ಯದಲ್ಲೇ ತೆರೆಕಾಣಲಿದೆ. ಈ ಚಿತ್ರದ ಟೀಸರ್ ಅನ್ನು ಟ್ವಿಟರ್‌ನಲ್ಲಿ ಸತೀಶ್ ಹಂಚಿಕೊಂಡಿದ್ದಾರೆ. ‘ಸಿನಿಮಾವನ್ನು ಯಾವಾಗ ಬಿಡುಗಡೆ ಮಾಡೋಣ ನೀವೆ ಹೇಳಿ’ ಎಂದು ಕೇಳಿಕೊಂಡಿದ್ದು, ತೀರ್ಮಾನವನ್ನು ಅಭಿಮಾನಿಗಳಿಗೇ ಬಿಟ್ಟಿರುವಂತಿದೆ ಅವರ ಈ ಟ್ವೀಟ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.