ಉಡುಪಿ: ಸ್ಯಾಂಡಲ್‌ವುಡ್ ನಟ ವಸಿಷ್ಠ ಸಿಂಹ ನಟನೆಯ ‘ಲವ್ಲಿ’ ಸಿನಿಮಾದ ಚಿತ್ರೀಕರಣ ಮಲ್ಪೆಯ ಪಡುಕೆರೆ ಸಮೀಪದ ಕಡಲ ಕಿನಾರೆಯಲ್ಲಿ ಭರದಿಂದ ಸಾಗಿದೆ.
ಚಿತ್ರಕ್ಕಾಗಿ ಕಡಲತೀರದಲ್ಲಿ ₹ 1.5 ಕೋಟಿ ವೆಚ್ಚದಲ್ಲಿ ನೈಜವಾಗಿ ಕಾಣುವ ಸುಂದರವಾದ ಮನೆಯ ಸೆಟ್ ನಿರ್ಮಾಣ ಮಾಡಲಾಗಿದೆ. ಕಥೆಗೆ ಪೂರಕವಾಗಿ ಮನೆಯ ಒಳಾಂಗಣವನ್ನು ವಿಭಿನ್ನವಾಗಿ ನಿರ್ಮಿಸಲಾಗಿದೆ.
ಲವ್ಲಿ ಸಿನಿಮಾ ಕುರಿತು ಗುರುವಾರ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ನಾಯಕ ನಟ ವಸಿಷ್ಠ ಸಿಂಹ, ಮಲ್ಪೆಯ ಪಡುಕೆರೆ ಕಡಲತೀರ ಚಿತ್ರದ ಕಥೆಗೆ ಪೂರಕವಾಗಿದ್ದು, ಅದ್ಭುತ ದೃಶ್ಯಗಳನ್ನು ಸೆರೆ ಹಿಡಿಯಲಾಗಿದೆ. ಸಾಹಸಮಯ ಸನ್ನಿವೇಶವೂ ಚಿತ್ರದ ಹೈಲೈಟ್ಸ್. ಸಿನಿಮಾದಲ್ಲಿ ಲಾಂಗು ಮಚ್ಚು ಇದ್ದರೂ ರೌಡಿಸಂ ಚಿತ್ರವಲ್ಲ. ನವಿರಾದ ವಿಚಾರಗಳನ್ನು ಹಲವು ಮಜಲುಗಳಲ್ಲಿ ಹೇಳುವ ವಿಭಿನ್ನ ಪ್ರಯತ್ನವನ್ನು ಮಾಡಲಾಗಿದೆ. ಸ್ಕ್ರೀನ್ ಪ್ಲೇ ಸಿನಿಮಾದ ಜೀವಾಳ ಎಂದರು.
ಜಾರ್ಖಂಡ್ ಮೂಲದ ನಟಿ ಸ್ಟೆಫಿ ಪಟೇಲ್ ಮೊದಲ ಬಾರಿಗೆ ಕನ್ನಡದಲ್ಲಿ ಅಭಿನಯಿಸುತ್ತಿದ್ದಾರೆ. ಚಿತ್ರದ ಕುರಿತು ಮಾತನಾಡಿದ ನಟಿ, ಲವ್ಲಿ ಕನ್ನಡ ಸಿನಿಮಾದಲ್ಲಿ ನಟಿಸುತ್ತಿರುವುದು ಖುಷಿ ತಂದಿದೆ. ಪಾತ್ರಕ್ಕೆ ಹೆಚ್ಚಿನ ಮಹತ್ವವಿದ್ದು, ಸುಂದರವಾಗಿ ಮೂಡಿಬಂದಿದೆ. ಶೂಟಿಂಗ್‌ನ ಪ್ರತಿಕ್ಷಣವೂ ಆಸಕ್ತಿಯಿಂದ ಅನುಭವಿಸುತ್ತಿದ್ದೇನೆ ಎಂದರು.
ಮಫ್ತಿ ಸಿನಿಮಾದಲ್ಲಿ ಸಹಾಯಕ ನಿರ್ದೇಶಕರಾಗಿ ದುಡಿದಿರುವ ಚೇತನ್ ಲವ್ಲಿ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ಚಿತ್ರದ ಕುರಿತು ಮಾತನಾಡಿದ ಚೇತನ್ ‘ಸಿನಿಮಾ ಅದ್ಧೂರಿಯಾಗಿ ಮೂಡಿ ಬರುತ್ತಿದೆ. ರೌಡಿಸಂ, ಸೆಂಟಿಮೆಂಟ್, ಲವ್ ಕಥಾ ಹಂದರ ಇದೆ. ಚಿತ್ರದ ಕಥೆಗೆ ಕರಾವಳಿ ಪೂರಕವಾಗಿದ್ದರಿಂದ ಕಡಲ ತೀರದಲ್ಲಿ ನೈಜ ಸೆಟ್ ಹಾಕಲಾಗಿದೆ.
ಬೆಂಗಳೂರಿನಲ್ಲಿ ಚಿತ್ರೀಕರಣ ನಡೆಸಲಾಗಿದ್ದು ಲಂಡನ್‌ನಲ್ಲೂ ನಡೆಯಲಿದೆ. ಒಂದು ವಾರದಲ್ಲಿ ಶೇ 80ರಷ್ಟು ಚಿತ್ರೀಕರಣ ಪೂರ್ಣಗೊಳ್ಳಲಿದ್ದು ಏಪ್ರಿಲ್ ವೇಳೆಗೆ ಲವ್ಲಿ ಚಿತ್ರ ತೆರೆಗೆ ಬರಲಿದೆ ಎಂದು ನಿರ್ದೇಶಕ ಚೇತನ್ ತಿಳಿಸಿದರು.
ಸಿನಿಮಾದಲ್ಲಿ ಹಿರಿಯ ನಟರಾದ ದತ್ತಣ್ಣ, ಸಾಧುಕೋಕಿಲಾ, ಅಚ್ಚುತ್, ಮಾಳವಿಕಾ, ಸ್ವಪ್ನಾ, ಶೋಭರಾಜ್ ಅವರು ಅಭಿನಯಿಸಿದ್ದು ರಿಯಾಲಿಟಿ ಶೋ ಖ್ಯಾತಿಯ ವಂಶಿಕಾ ಕೂಡ ನಟಿಸಿದ್ದಾಳೆ ಎಂದರು.
ಸಿನಿಮಾ ನಿರ್ಮಾಪಕ ಬಾಲು ಮಾತನಾಡಿ, ಪಡುಕೆರೆ ಬೀಚ್‌ನಲ್ಲಿ ಹಾಕಲಾಗಿರುವ ಸೆಟ್ ಕೂಡ ಸಿನಿಮಾದಲ್ಲಿ ಪ್ರಧಾನ ಪಾತ್ರವಾಗಿದ್ದು, ಅದ್ಧೂರಿಯಾಗಿ ಸಿನಿಮಾ ನಿರ್ಮಾಣ ಮಾಡಲಾಗುತ್ತಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ನಿರ್ಮಾಪಕ ರವಿ, ಸಿನಿಮಾಟೊಗ್ರಾಫರ್ ಅಶ್ವಿನ್ ಕೆನಡಿ, ಕಲಾ ನಿರ್ದೇಶಕ ಪ್ರದೀಪ್ ಕುಂದರ್, ಸಹ ನಟರು ಹಾಗೂ ತಾಂತ್ರಿಕ ಸಿಬ್ಬಂದಿ ಇದ್ದರು.
ಕಡಲ ತೀರದಲ್ಲಿ ಸುಂದರ ಸೆಟ್
ಪಡುಕೆರೆಯ ಕಡಲ ತೀರದಲ್ಲಿ ಕಾಂಕ್ರಿಟ್ ತಳಪಾಯದ ಮೇಲೆ 2,800 ಚದರಡಿ ಸೆಟ್ ನಿರ್ಮಾಣ ಮಾಡಲಾಗಿದ್ದು ಕಥೆಗೆ ಪೂರಕವಾಗಿ ಮನೆಯ ಒಳಾಂಗಣ ನಿರ್ಮಿಸಲಾಗಿದೆ. ಮನೆಯ ಪ್ರತಿಯೊಂದು ವಸ್ತುವೂ ಕಥೆ ಹೇಳುತ್ತಾ ಸಾಗುತ್ತದೆ. 26 ದಿನಗಳಲ್ಲಿ ಮನೆಯನ್ನು ನಿರ್ಮಿಸಲಾಗಿದೆ. ಬದಲಾಗುವ ವಾತಾವರಣ, ಕಡಲಿನ ಪ್ರಕ್ಷುಬ್ಧತೆ ಸೇರಿದಂತೆ ಸವಾಲುಗಳನ್ನು ಎದುರಿಸಿ ಚಿತ್ರೀಕರಣ ಮಾಡಲಾಗುತ್ತಿದೆ ಎಂದು ಚಿತ್ರತಂಡ ತಿಳಿಸಿತು.
‘ವಿಲನ್ ಪಾತ್ರ ಇಷ್ಟ’
ಸಿನಿಮಾದಲ್ಲಿ ನೆಗೆಟಿವ್ ಶೇಡ್‌ನಲ್ಲಿ ಅಭಿನಯಿಸಲು ಬಹಳ ಇಷ್ಟ. ಆರಂಭದ ದಿನಗಳಲ್ಲಿ ವಿಲನ್ ಪಾತ್ರಕ್ಕಾಗಿ ದುಂಬಾಲು ಬಿದ್ದರೂ ಸಿಗುತ್ತಿರಲಿಲ್ಲ. ಗಡ್ಡಬಿಟ್ಟ ಬಳಿಕ, ಅಭಿನಯ ಪಕ್ವವಾಗುತ್ತಾ ಹೋದ ಬಳಿಕ ಹುಡುಕಿಕೊಂಡು ಬಂದವು. ವಿಲನ್ ಪಾತ್ರದಲ್ಲಿ ಅಭಿನಯಕ್ಕೆ ಹೆಚ್ಚು ಸ್ವಾತಂತ್ರ್ಯ ಇದೆ. ಮುಂದೆ ಅವಕಾಶ ಸಿಕ್ಕರೆ ಖಂಡಿತ ವಿಲನ್ ಆಗಿ ಅಭಿನಯಿಸುತ್ತೇನೆ.
–ವಸಿಷ್ಠ ಸಿಂಹ, ನಟ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.