ADVERTISEMENT

‘ಎಂಆರ್‌ಪಿ’ಯಲ್ಲಿ ದಢೂತಿ ದೇಹದ ಹಾಸ್ಯ ಲೇಪನ ...

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2020, 19:30 IST
Last Updated 26 ಫೆಬ್ರುವರಿ 2020, 19:30 IST
ಚೈತ್ರಾ ರೆಡ್ಡಿ
ಚೈತ್ರಾ ರೆಡ್ಡಿ   

ದಢೂತಿ ಯುವಕನೊಬ್ಬ ದೇಹ ಸಪೂರಕ್ಕಾಗಿಜಿಮ್‌ಗೆ ಹೋಗುತ್ತಾನೆ. ಒಂದೇ ದಿನಕ್ಕೆ ಜಿಮ್‌ ಸಾಕೆನಿಸಿ, ಅದನ್ನು ಕೈಬಿಡುತ್ತಾನೆ. ಆತನ ಸ್ನೇಹಿತರು ಅತಿಕಾಯ ಶರೀರ ನೋಡಿ ಆತನನ್ನು ಹೀಯಾಳಿಸುತ್ತಾರೆ. ವಧು ಅನ್ವೇಷಣೆಗೆ ಹೊರಟಾಗಲೂ ಆತನಿಗೆ ನಿರಾಸೆ. ಯಾರೆಲ್ಲ ಹೀಯಾಳಿಸಿದ್ದರೋ, ತಿರಸ್ಕರಿಸಿದ್ದರೋ ಅವರೆಲ್ಲರೂ ದಢೂತಿಯನ್ನೇಇಷ್ಟಪಡಲಾರಂಭಿಸುತ್ತಾರೆ. ಇದು ಎಂಆರ್‌ಪಿ (ಮೋಸ್ಟ್‌ ರೆಸ್ಪಾನ್ಸಿಬಲ್‌ ಪರ್ಸನ್‌) ಚಿತ್ರದ ಕಥಾಹಂದರ.

ಚಿತ್ರದ ಟ್ರೇಲರ್‌ ಬಿಡುಗಡೆಯಾಗಿದ್ದು, ಕನ್ನಡದ ಪ್ರೇಕ್ಷಕರಿಗೆ ಈ ಚಿತ್ರದಲ್ಲಿ ಸಂಪೂರ್ಣ ಕೌಟುಂಬಿಕ ಮನರಂಜನೆಯ ರಸಾಯನ ಉಣಬಡಿಸುವ ನಿರೀಕ್ಷೆ ಮೂಡಿಸಿದೆ. ಮಾರ್ಚ್‌ನಲ್ಲಿ ಚಿತ್ರ ತೆರೆಗೆ ತರುವಸಿದ್ಧತೆಯಲ್ಲಿದೆಚಿತ್ರತಂಡ.

ಚಿತ್ರರಂಗದಲ್ಲಿ ಹಲವು ವರ್ಷಗಳಿಂದ ಸಹಾಯಕ ಕ್ಯಾಮೆರಾಮನ್‌ ಆಗಿ ದುಡಿದಿರುವ ಮತ್ತು ‘ಫ್ರೆಂಡ್ಸ್‌’ ಚಿತ್ರದಲ್ಲಿ ನಟನಾಗಿ ಬಣ್ಣ ಹಚ್ಚಿದ್ದ ಹರಿ ಈ ಚಿತ್ರದ ನಾಯಕ. ಅವರ ಅತಿಕಾಯ ಶರೀರರವು ಪಾತ್ರಕ್ಕೆ ಪ್ಲಸ್‌ ಪಾಯಿಂಟ್‌. ನಾಯಕನಾಗುವ ಅವರ ಕನಸನ್ನು ನಿರ್ದೇಶಕ ಬಾಹುಬಲಿ ಈಡೇರಿಸಿದ್ದಾರೆ.‘ಚಿತ್ರಸೂಪರ್‌ ಆಗಿ ಬಂದಿದೆ. ಹಾಡುಗಳು ತುಂಬಾ ಚೆನ್ನಾಗಿವೆ. ಡೂಪ್ ಬಳಸದೆ ಫೈಟ್ ಮಾಡಿದ್ದೇನೆ. ನನ್ನ ಪಾತ್ರಕ್ಕೆ ಕಂಠದಾನವನ್ನೂ ನಾನೇ ಮಾಡಿದ್ದೇನೆ’ ಎಂದರು ಹರಿ.

ADVERTISEMENT

ಚಿತ್ರದ ಟ್ರೇಲರ್‌ ಬಿಡುಗಡೆ ಮಾಡಿದ ನಟ ಶರಣ್‌ ‘ಈ ಚಿತ್ರತಂಡದ‌ ನಿಷ್ಠೆ ಎಂಥದ್ದೆನ್ನುವುದನ್ನುಎಂಆರ್‌ಪಿ ಟೈಟಲ್ ಹೇಳುತ್ತದೆ. ಇದು ಹೊಸತನದ ಸಿನಿಮಾ ಎಂದು ಎದೆತಟ್ಟಿಕೊಂಡು ಹೇಳುತ್ತೇನೆ. ಪ್ರೇಕ್ಷಕರಿಗೆ ಅದ್ದೂರಿ ರಸದೌತಣ ನೀಡಲಿದೆ. ಎಂಆರ್‌ಪಿ ಸರಣಿಗಳು ಮುಂದುವರಿಯಲಿ’ ಎಂದರು.‌ ನಿರ್ದೇಶಕ ದಿನಕರ್‌ ತೂಗುದೀಪ ಅವರು ಸಹ ‘ಇಂತಹ ವಿಭಿನ್ನ ಚಿತ್ರಗಳನ್ನು ಪ್ರೇಕ್ಷಕರು ಬೆಂಬಲಿಸಬೇಕು’ ಎನ್ನುವ ಮಾತು ಸೇರಿಸಿದರು.

ನಿರ್ದೇಶನದ ಜತೆಗೆ ಚಿತ್ರದ ಕಥೆ ಮತ್ತು ಚಿತ್ರಕಥೆಯ ಹೊಣೆ ನಿಭಾಯಿಸಿರುವ ಬಾಹುಬಲಿ, ‘ಹಾಸ್ಯದ ಲೇಪನ ಇಟ್ಟುಕೊಂಡೇ ಸಮಾಜಕ್ಕೆ ಒಳ್ಳೆಯ ಸಂದೇಶ ಕೊಡಲು ಪ್ರಯತ್ನಿಸಿದ್ದೇವೆ’ಎಂದರು.

ನಾಯಕಿಯಾಗಿ ಚೈತ್ರಾ ರೆಡ್ಡಿ ನಟಿಸಿದ್ದಾರೆ. ನಾಯಕಿಯ ತಂದೆಯ ಪಾತ್ರದಲ್ಲಿ ಕಾಣಿಸಿಕೊಂಡಿರುವಬಾಲರಜಾವಾಡಿ ‘ನನ್ನನ್ನು ಬಹುತೇಕ ನಿರ್ದೇಶಕರು ವ್ಯಗ್ರ ಪಾತ್ರಗಳಲ್ಲಿ ತೋರಿಸಿದ್ದರು. ಮೊದಲ ಬಾರಿಗೆ ಕಾಮಿಡಿ ಪಾತ್ರ ನಿಭಾಯಿಸಿದ್ದೇನೆ. ಇದು ವಿಭಿನ್ನ ಕಥಾಹಂದರದ ಚಿತ್ರ’ ಎಂದರು.

ಈ ಚಿತ್ರಕ್ಕೆ ಎಂಎನ್‌ವೈ ಪಿಕ್ಚರ್ಸ್ ಲಾಂಛನದಡಿ ಎಂ.ಡಿ. ಶ್ರೀಧರ್, ಎ.ವಿ. ಕೃಷ್ಣಕುಮಾರ್, ಎನ್.ಜಿ. ಮೋಹನ್ ಕುಮಾರ್, ಕೆ.ಆರ್. ರಂಗಸ್ವಾಮಿ ಬಂಡವಾಳ ಹೂಡಿದ್ದಾರೆ. ಛಾಯಾಗ್ರಹಣ ಎ.ವಿ. ಕೃಷ್ಣ ಕುಮಾರ್ ಮತ್ತು ಎಲ್.ಎಂ. ಸೂರಿ, ಸಂಗೀತ ಎಚ್.ವಿ.ಆರ್. ಹರ್ಷವರ್ಧನ ರಾಜ್, ಸಂಕಲನ ಕೆ.ಎಂ. ಪ್ರಕಾಶ್ ಅವರದ್ದು. ತಾರಾಗಣದಲ್ಲಿ ವಿಜಯ್ ಚೆಂಡೂರು, ಸುಧಾ ಬೆಳವಾಡಿ, ಪ್ರಕಾಶ್ ತುಮಿನಾಡು, ಮೋಹನ್ ಜುನೇಜಾ ಇದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.