‘ಅವಸರದಲ್ಲಿ ಪ್ರಿಂಟ್ ಹಾಕಿಸಿದೆವು. ಹಾಗಾಗಿ ಕನ್ನಡದ ಪೋಸ್ಟರ್ ಮಾಡಲಿಕ್ಕೆ ಆಗಲಿಲ್ಲ. ಮುಂದಿನ ಸಲ ಹೀಗಾಗದ ಹಾಗೆ ಎಚ್ಚರ ವಹಿಸುತ್ತೇವೆ’ ಎಂದು ನಿರೀಕ್ಷಣಾ ಜಾಮೀನು ಪಡೆದುಕೊಂಡೇ ಮಾತಿಗೆ ತೊಡಗಿದರು ರಾಕೇಶ್ ಅಡಿಗ. ವೇದಿಕೆಯ ಇಕ್ಕೆಲಗಳಲ್ಲಿದ್ದ ‘ನೈಟ್ ಔಟ್’ ಸಿನಿಮಾ ಪೋಸ್ಟರ್ ಪೂರ್ತಿ ಇಂಗ್ಲಿಷ್‌ಮಯವಾಗಿತ್ತು. ಅದರ ಕುರಿತು ಆಕ್ಷೇಪ ವ್ಯಕ್ತವಾಗುವ ಮೊದಲೇ ಕ್ಷಮೆ ಕೋರಿದರು ರಾಕೇಶ್.
ಹದಿಮೂರು ಸಿನಿಮಾಗಳಲ್ಲಿ ನಟಿಸಿರುವ ರಾಕೇಶ್, ಇದೀಗ ‘ನೈಟ್ ಔಟ್’ ಸಿನಿಮಾ ಮೂಲಕ ನಿರ್ದೇಶಕರಾಗುತ್ತಿದ್ದಾರೆ. ನಟನಾಗಿ ಗುರ್ತಿಸಿಕೊಳ್ಳುವ ಮೊದಲೇ ಅವರು ಕಿರುಚಿತ್ರಗಳಿಗೆ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿದ್ದರಂತೆ. ‘ನಟನೆ ಮಾಡುವಾಗಲೂ ನಿರ್ದೇಶನ ವಿಭಾಗದ ಕಡೆಗೆ ಗಮನ ಕೊಡುತ್ತಿದ್ದೆ. ನಾನೂ ನಿರ್ದೇಶಕ ಆಗಬೇಕು ಎಂದು ಯಾವಾಗಲೂ ಅನಿಸುತ್ತಿತ್ತು. ಆದರೆ ಒಂದು ಒಳ್ಳೆಯ ಕಥೆಗಾಗಿ ಕಾಯುತ್ತಿದ್ದೆ. ಸ್ನೇಹಿತ ಅಕ್ಷಯ್ ಸಿಕ್ಕಾಗ ಒಂದು ಕಥೆ ಹೇಳಿದ. ಅದೇ ಎಳೆ ಇಟ್ಟುಕೊಂಡು ನಾನೊಂದು ಚಿತ್ರಕಥೆ ಸಿದ್ಧಮಾಡಿಕೊಂಡೆ. ಇಷ್ಟಾದರೂ ನಿರ್ದೇಶನ ಮಾಡುವ ಕುರಿತು ಭಯ ಇತ್ತು. ಅದನ್ನು ನಿವಾರಿಸಿಕೊಳ್ಳಲು, ನನ್ನದೇ ಹಣ ಹಾಕಿ ಒಂದು ಕ್ಯಾಮೆರಾ ಕೊಂಡು ಹತ್ತು ನಿಮಿಷದ ದೃಶ್ಯವೊಂದನ್ನು ಚಿತ್ರೀಕರಿಸಿದೆ. ಅದನ್ನು ಒಂದಿಷ್ಟು ಜನರಿಗೆ ತೋರಿಸಿದಾಗ ಮೆಚ್ಚಿಕೊಂಡರು. ಆ ಆತ್ಮವಿಶ್ವಾಸದ ಮೇಲೆಯೇ ಸಿನಿಮಾ ನಿರ್ದೇಶನಕ್ಕಿಳಿದೆ’ ಎಂದು ಹೇಳಿಕೊಂಡರು ರಾಕೇಶ್. ಹಾಸ್ಯ, ಸಸ್ಪೆನ್ಸ್, ಹಾರರ್, ಥ್ರಿಲ್ಲರ್ ಎಲ್ಲ ಅಂಶಗಳೂ ಇರುವಂತೆ ಅವರು ನೋಡಿಕೊಂಡಿದ್ದಾರಂತೆ.
ನಟನೆ ಮತ್ತು ನಿರ್ದೇಶನ ಎರಡೂ ಭಾರವನ್ನು ಹೊರುವುದು ಕಷ್ಟ ಎಂಬ ಕಾರಣಕ್ಕೆ ಈ ಚಿತ್ರದಲ್ಲಿ ಅವರು ನಟಿಸಿಲ್ಲ. ಬರೀ ನಿರ್ದೇಶನಕ್ಕೆ ತಮ್ಮನ್ನು ಸೀಮಿತ ಮಾಡಿಕೊಂಡಿದ್ದಾರೆ. ಅವರ ಸ್ನೇಹಿತ ಅಕ್ಷಯ್ ಮುಖ್ಯಪಾತ್ರದಲ್ಲಿ ನಟಿಸಿದ್ದಾರೆ. ಅವರ ಜತೆ ಭರತ್ ಎಂಬ ಹೊಸ ಹುಡುಗನೂ ಇನ್ನೊಂದು ಮುಖ್ಯಪಾತ್ರವನ್ನು ನಿಭಾಯಿಸಿದ್ದಾರೆ.
ಶ್ರುತಿ ಗೊರಾಡಿಯಾ ಈ ಚಿತ್ರದ ನಾಯಕಿ. ‘ನಾನು ನಿಜಜೀವನದಲ್ಲಿ ಹೇಗೆ ಇರುತ್ತೇನೋ ಅದಕ್ಕೆ ತದ್ವಿರುದ್ಧ ಪಾತ್ರದಲ್ಲಿ ನಟಿಸಿದ್ದೇನೆ. ಆ ಸವಾಲನ್ನು ಎಂಜಾಯ್ ಮಾಡಿದ್ದೇನೆ. ಟೌನ್ ಹುಡುಗಿಯೊಬ್ಬಳು ನಗರಕ್ಕೆ ಬಂದಾಗ ಏನಾಗುತ್ತದೆ ಎನ್ನುವುದೇ ಕಥೆ’ ಎಂದರು ಶ್ರುತಿ.
ಈ ಚಿತ್ರ ಬರೀ ಆರು ತಾಸುಗಳಲ್ಲಿ ನಡೆಯುವ ಕಥೆಯನ್ನು ಹೊಂದಿದೆ. ಸ್ನೇಹಿತರಿಬ್ಬರು ಆಟೊದಲ್ಲಿ ನೈಟ್ ಔಟ್ ಹೋಗುತ್ತಾರೆ. ಆಗ ಅವರ ಮಾತುಗಳಲ್ಲಿಯೇ ಕಥೆ ಬಿಚ್ಚಿಕೊಳ್ಳುವ ಹಾಗೆ ಫ್ಲ್ಯಾಷ್ ಬ್ಯಾಕ್ ತಂತ್ರ ಬಳಸಿ ಕಥೆ ಹೆಣೆಯಲಾಗಿದೆ.
ಸಿನಿಮಾದಲ್ಲಿನ ನಾಲ್ಕು ಹಾಡುಗಳಿಗೆ ಸಮೀರ್ ಕುಲಕರ್ಣಿ ಸಂಗೀತ ಸಂಯೋಜನೆ ಮಾಡಿದ್ದಾರೆ. ಅರುಣ್ ಕೆ. ಅಲೆಕ್ಸಾಂಡರ್ ಛಾಯಾಗ್ರಹಣ ಇದೆ.ಕಡ್ಡಿಪುಡಿ ಚಂದ್ರು, ಉಮಾದೇವಿ, ಚಂದನ್ ವಿಜಯ್, ಸಾರಿಕಾ, ತಾರಾಗಣದಲ್ಲಿದ್ದಾರೆ. ಜನವರಿಯಲ್ಲಿ ಚಿತ್ರವನ್ನು ಬಿಡುಗಡೆ ಮಾಡುವ ಆಲೋಚನೆ ತಂಡಕ್ಕಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.