ADVERTISEMENT

‘ಸಪ್ತ ಸಾಗರದಾಚೆ...’ ಸೈಡ್‌–ಬಿ ಕಥೆಯಲ್ಲಿ ವೇಗ

​ಪ್ರಜಾವಾಣಿ ವಾರ್ತೆ
Published 6 ನವೆಂಬರ್ 2023, 23:30 IST
Last Updated 6 ನವೆಂಬರ್ 2023, 23:30 IST
ಹೇಮಂತ್‌, ಚೈತ್ರಾ, ರಕ್ಷಿತ್‌ ಶೆಟ್ಟಿ ಹಾಗೂ ರುಕ್ಮಿಣಿ 
ಹೇಮಂತ್‌, ಚೈತ್ರಾ, ರಕ್ಷಿತ್‌ ಶೆಟ್ಟಿ ಹಾಗೂ ರುಕ್ಮಿಣಿ    

ನಟ ರಕ್ಷಿತ್‌ ಶೆಟ್ಟಿ ನಟನೆಯ ‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾದ ಎರಡನೇ ಭಾಗ ನ.17ರಂದು ತೆರೆಕಾಣುತ್ತಿದೆ. ಸಿನಿಮಾದ ಮೊದಲ ಭಾಗದಲ್ಲಿ ನಿಧಾನಗತಿಯ ಚಿತ್ರಕಥೆಯ ಕುರಿತು ಕೆಲ ಪ್ರೇಕ್ಷಕರಿಗೆ ಅಸಮಾಧಾನವಿತ್ತು. ಆದರೆ ಸಿನಿಮಾದ ಎರಡನೇ ಭಾಗದ ಚಿತ್ರಕಥೆ ವೇಗವಾಗಿ ಸಾಗಲಿದೆ ಎನ್ನುವ ಸುಳಿವನ್ನು ನಿರ್ದೇಶಕ ಹೇಮಂತ್‌ ರಾವ್‌ ನೀಡಿದ್ದಾರೆ.  

‘‘ಸೈಡ್‌–ಎ’ಯಲ್ಲಿ ಕಥೆ ಕಮ್ಮಿ ಇತ್ತು. ನಾಲ್ಕೇ ವಾಕ್ಯದಲ್ಲಿ ಆ ಕಥೆಯನ್ನು ಹೇಳಬಹುದಿತ್ತು. ಆದರೆ ಕೆಲವೊಂದು ಪಾತ್ರಗಳ ಭಾವನೆಗಳನ್ನು ಪ್ರೇಕ್ಷಕರು ಗಾಢವಾಗಿ ಅನುಭವಿಸಬೇಕು ಎನ್ನುವ ಉದ್ದೇಶದಿಂದಲೇ ಸುದೀರ್ಘವಾದ ನಿರೂಪಣೆ ಮಾಡಿದ್ದೆ. ‘ಸೈಡ್‌–ಬಿ’ ಕಥೆ ಶೈಲಿಯೇ ಬೇರೆ ಇದೆ. ಇಲ್ಲಿ ಚಿತ್ರಕಥೆಗೆ ವೇಗವಿದೆ. ಜೊತೆಗೆ ಕಥೆ ಇನ್ನಷ್ಟು ಬಿಗಿಯಾಗಿದೆ, ಸಂಕೀರ್ಣವಾಗಿದೆ. ಇದರ ವೀಕ್ಷಣೆಯ ಅನುಭವವವೂ ವಿಭಿನ್ನವಾಗಿರುತ್ತದೆ’’ ಎನ್ನುತ್ತಾರೆ ಹೇಮಂತ್‌.   

‘‘ಸೈಡ್‌–ಎ’ನಲ್ಲಿ ‘ಮನು’ ಎಷ್ಟು ಮುಗ್ಧನೋ ಅದನ್ನು ಮುಂದುವರಿಸಿಕೊಂಡೇ ಎರಡನೇ ಭಾಗವಿದೆ. ಆತನಿಗೆ ಸಿಕ್ಕಿರುವ ಅನುಭವ ಹೊಸದಾಗಿದೆ. ಅದರಿಂದ ಆತನ ವ್ಯಕ್ತಿತ್ವದಲ್ಲಿ ಕೊಂಚ ಬದಲಾವಣೆಗಳು ಕಾಣಿಸಿಕೊಂಡಿವೆ’ ಎಂದು ತಮ್ಮ ಪಾತ್ರದ ವಿವರಣೆ ನೀಡಿದ ರಕ್ಷಿತ್‌, ‘ಸಿನಿಮಾದ ಎರಡನೇ ಭಾಗವನ್ನು ಕೇವಲ ದಕ್ಷಿಣ ಭಾರತದಲ್ಲಿ ಬಿಡುಗಡೆ ಮಾಡುತ್ತಿದ್ದೇವೆ. ಮೊದಲನೇ ಭಾಗವನ್ನು ಮಲಯಾಳಂನಲ್ಲೂ ಬಿಡುಗಡೆ ಮಾಡುವ ಯೋಜನೆ ಇತ್ತು. ಆದರೆ ಅದೇ ವೇಳೆಗೆ ಒಟಿಟಿಯಲ್ಲೂ ಸಿನಿಮಾ ಬಿಡುಗಡೆ ದಿನಾಂಕ ಬಂದಿತ್ತು. ಹೀಗಾಗಿ ಕೊನೆಯ ಕ್ಷಣದಲ್ಲಿ ಮಲಯಾಳಂನಲ್ಲಿ ಸಿನಿಮಾ ಬಿಡುಗಡೆ ಕೈಬಿಟ್ಟೆವು. ಇದೀಗ ತಮಿಳಿನಲ್ಲಿ ‘ಚಾರ್ಲಿ’ ಸಿನಿಮಾ ವಿತರಣೆ ಮಾಡಿದ್ದ ಶಕ್ತಿ ವೇಲನ್‌ ಅವರು ‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾದ ಎರಡನೇ ಭಾಗವನ್ನು ವಿತರಣೆ ಮಾಡುತ್ತಿದ್ದಾರೆ. ಮಲಯಾಳಂನಲ್ಲಿ ನಟ ಪೃಥ್ವಿರಾಜ್‌ ಅವರ ವಿತರಣಾ ಸಂಸ್ಥೆ ಹಾಗೂ ತೆಲುಗಿನಲ್ಲಿ ಪೀಪಲ್‌ ಮೀಡಿಯಾ ಫ್ಯಾಕ್ಟರಿ ಸಂಸ್ಥೆ ವಿತರಣೆ ಮಾಡುತ್ತಿದೆ. ಹಿಂದಿ ಪ್ರಾಂತ್ಯಗಳಲ್ಲಿ ಪ್ರಚಾರಕ್ಕೇ ₹4–5 ಕೋಟಿ ಖರ್ಚು ಮಾಡಬೇಕು. ಹಾಗಾಗಿ ಹಿಂದಿಯಲ್ಲಿ ಬಿಡುಗಡೆ ಮಾಡುತ್ತಿಲ್ಲ. ಹಿಂದಿಯಲ್ಲಿ ಸಿನಿಮಾ ಡಬ್‌ ಮಾಡಿ ಸಿದ್ಧವಿಟ್ಟುಕೊಂಡಿದ್ದೇವೆ’ ಎಂದರು. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.