ಕನ್ನಡದ ಸ್ಟಾರ್ ನಟರು, ನಟಿಯರು ಹಾಗೂ ನಿರ್ದೇಶಕರು ಕನ್ನಡಿಗರಿಗೆ ಹೊಸ ವರ್ಷದಲ್ಲಿ ಯಾವೆಲ್ಲ ಸಿನಿಮಾ ಕೊಡಲಿದ್ದಾರೆ? ಅವುಗಳ ವಿಶೇಷ ಏನಿರಲಿದೆ? ಯಾರ ಸಿನಿಮಾಕ್ಕೆ ಯಾರು ನಿರ್ದೇಶನ ಮಾಡಲಿದ್ದಾರೆ?ಈ ಎಲ್ಲ ಸಂಗತಿಗಳ ಮೇಲೊಂದು ಫಟಾಫಟ್ ನೋಟ
ಯಶ್
ಭಾರತೀಯ ಚಿತ್ರರಂಗ ಚಂದನವನದತ್ತ ಬೆರಗುಗಣ್ಣಿನಿಂದ ನೋಡುವಂತೆ ಮಾಡಿದ ಚಿತ್ರ ‘ಕೆಜಿಎಫ್ ಚಾಪ್ಟಅರ್ 1’. ಪ್ರಶಾಂತ್ ನೀಲ್ ನಿರ್ದೇಶಿಸಿದ ಈ ಚಿತ್ರ ಕನ್ನಡ ಚಿತ್ರರಂಗದ ಮಾರುಕಟ್ಟೆ ವಿಸ್ತರಣೆಗೆ ಬುನಾದಿ ಹಾಕಿತು. ಕನ್ನಡ ಚಿತ್ರವನ್ನು ದಕ್ಷಿಣಭಾರತಕ್ಕೂ, ಬಾಲಿವುಡ್‌ಗೂ ತಲುಪಿಸಿದ ಶ್ರೇಯ ನಟ ಯಶ್ ಸಲ್ಲುತ್ತದೆ. ಆ ಮೂಲಕ ಕನ್ನಡಾಚೆಗೂ ತಮ್ಮ ಇಮೇಜ್ ವಿಸ್ತರಿಸಿಕೊಂಡಿದ್ದು ಅವರ ಹೆಗ್ಗಳಿಕೆ.
ಮೊದಲ ಅಧ್ಯಾಯದಲ್ಲಿ ಅಧೀರನ ಮುಖ ತೋರಿಸಿರಲಿಲ್ಲ. ಈ ಪಾತ್ರದಲ್ಲಿ ಬಾಲಿವುಡ್ ನಟ ಸಂಜಯ್ ದತ್ ಕಾಣಿಸಿಕೊಂಡಿದ್ದಾರೆ. ಅಧೀರನ ಪಾತ್ರಕ್ಕೆ ಸಂಜಯ್ ದತ್ ಅವರೇ ಸೂಕ್ತ ನಟ ಎಂದು ಐದು ವರ್ಷದ ಹಿಂದೆಯೇ ಪ್ರಶಾಂತ್ ನೀಲ್ ಕಥೆ ಹೆಣೆದಿದ್ದರಂತೆ. ಹಾಗಾಗಿ, ‘ನರಾಚಿ’ ಗಣಿಯಲ್ಲಿ ರಾಕಿ ಭಾಯ್ ಮತ್ತು ಅಧೀರನ ಅಬ್ಬರ ಹೇಗಿರಲಿದೆ ಎಂಬುದು ಕುತೂಹಲ ಹೆಚ್ಚಿಸಿದೆ.
ಈಗಾಗಲೇ, ಚಿತ್ರದ ಶೇಕಡ 50ರಷ್ಟು ಚಿತ್ರೀಕರಣ ಪೂರ್ಣಗೊಂಡಿದೆ. ಮುಂದಿನ ಹಂತದಲ್ಲಿ ಮೈಸೂರು, ಉತ್ತರ ಕರ್ನಾಟಕ ಮತ್ತು ಹೈದರಾಬಾದ್‌ನಲ್ಲಿ ಶೂಟಿಂಗ್ ನಡೆಸಲು ಚಿತ್ರತಂಡ ನಿರ್ಧರಿಸಿದೆ. ವಿಜಯ್ ಕಿರಗಂದೂರು ಬಂಡವಾಳ ಹೂಡಿದ್ದಾರೆ.
***
ದರ್ಶನ್
‘ರಾಬರ್ಟ್’ –ದರ್ಶನ್ ನಟನೆಯ 53ನೇ ಚಿತ್ರ. ಇದಕ್ಕೆ ತರುಣ್ ಸುಧೀರ್ ಆ್ಯಕ್ಷನ್ ಕಟ್ ಹೇಳಿದ್ದಾರೆ. ‘ಚೌಕ’ ಚಿತ್ರದ ಬಳಿಕ ತರುಣ್ ನಿರ್ದೇಶಿಸುತ್ತಿರುವ ಎರಡನೇ ಚಿತ್ರ ಇದು. ಇದರಲ್ಲಿ ದರ್ಶನ್ ವಿರುದ್ಧ ತೆಲುಗಿನ ಖ್ಯಾತ ಖಳನಟ ಜಗಪತಿಬಾಬು ತೊಡೆ ತೊಟ್ಟಿದ್ದಾರೆ. ಕನ್ನಡತಿ ಆಶಾ ಭಟ್ ಇದರ ನಾಯಕಿ. ಈಗಾಗಲೇ, ಚಿತ್ರತಂಡ ನೂರು ದಿನಗಳ ಚಿತ್ರೀಕರಣ ಪೂರೈಸಿದೆ. ವಾರಣಾಸಿಯಲ್ಲಿ ಬೀಡುಬಿಟ್ಟಿದ್ದು ಅಂತಿಮ ಹಂತದ ಶೂಟಿಂಗ್‌ನಲ್ಲಿ ತೊಡಗಿಸಿಕೊಂಡಿದೆ. ಉಮಾಪತಿ ಇದಕ್ಕೆ ಆರ್ಥಿಕ ಇಂಧನ ಒದಗಿಸಿದ್ದಾರೆ.
ಇದಾದ ಬಳಿಕ ದರ್ಶನ್ ನಟನೆಯ ‘ರಾಜವೀರ ಮದಕರಿನಾಯಕ’ ಚಿತ್ರದ ಶೂಟಿಂಗ್ ಶುರುವಾಗಲಿದೆ. ಈ ಚಿತ್ರ ನಿರ್ದೇಶಿಸುತ್ತಿರುವುದು ಎಸ್.ವಿ. ರಾಜೇಂದ್ರಸಿಂಗ್ ಬಾಬು. ಬಿ.ಎಲ್. ವೇಣು ಅವರ ಕಾದಂಬರಿ ಆಧಾರಿತ ಚಿತ್ರ ಇದು. ಈ ಸಿನಿಮಾಕ್ಕಾಗಿ ದೊಡ್ಡ ಸೆಟ್ ಹಾಕಿ ಚಿತ್ರದುರ್ಗದ ಕೋಟೆಯನ್ನು ಮರುಸೃಷ್ಟಿಸಲಾಗುತ್ತದೆಯಂತೆ. ಈ ಹಿಂದೆ ವಿಷ್ಣುವರ್ಧನ್ ಅವರು ‘ಮದಕರಿನಾಯಕ’ನಾಗಿ ಬಣ್ಣ ಹಚ್ಚಬೇಕಿತ್ತಂತೆ. ಚಿತ್ರ ದೊಡ್ಡ ಬಂಡವಾಳ ಬೇಡುತ್ತಿದ್ದ ಹಿನ್ನೆಲೆಯಲ್ಲಿ ನಿರ್ದೇಶಕರು ಚಿತ್ರ ನಿರ್ಮಾಣದಿಂದ ಹಿಂದೆ ಸರಿದಿದ್ದರಂತೆ. ರಾಕ್‌ಲೈನ್ ವೆಂಕಟೇಶ್ ಬಂಡವಾಳ ಹೂಡಿದ್ದಾರೆ. ಹಂಸಲೇಖ ಸಂಗೀತ ಸಂಯೋಜಿಸಲಿದ್ದಾರೆ. ಹೈದರಾಬಾದ್, ರಾಜಸ್ಥಾನ ಮತ್ತು ಬೆಂಗಳೂರಿನಲ್ಲಿ ಶೂಟಿಂಗ್ ನಡೆಸಲು ಚಿತ್ರತಂಡ ಯೋಜನೆ ರೂಪಿಸಿದೆ.
***
ಪುನೀತ್ ರಾಜ್‌ಕುಮಾರ್
ಸಂತೋಷ್ ಆನಂದರಾಮ್ ಮತ್ತು ಪುನೀತ್ ರಾಜ್‌ಕುಮಾರ್ ಕಾಂಬಿನೇಷನ್‌ನಡಿ ಮೂಡಿಬರುತ್ತಿರುವ ಎರಡನೇ ಚಿತ್ರ ‘ಯುವರತ್ನ’. ಈ ಹಿಂದೆ ಇಬ್ಬರ ಕಾಂಬಿನೇಷನ್‌ನಡಿ ತೆರೆಕಂಡಿದ್ದ ‘ರಾಜಕುಮಾರ’ ಚಿತ್ರ ಸೂಪರ್ ಹಿಟ್ ಆಗಿತ್ತು. ‘ಯುವರತ್ನ’ದ ಮಾತಿನ ಭಾಗದ ಬಹುತೇಕ ಚಿತ್ರೀಕರಣ ಪೂರ್ಣಗೊಂಡಿದೆ. ನಾಲ್ಕು ಹಾಡುಗಳ ಚಿತ್ರೀಕರಣವಷ್ಟೇ ಬಾಕಿಯಿದೆ.
ಚಿತ್ರದಲ್ಲಿ ಪುನೀತ್ ಅವರದು ವಿದ್ಯಾರ್ಥಿಯ ಪಾತ್ರ. ಶೈಕ್ಷಣಿಕ ದಂಧೆಯ ಸುತ್ತ ಕಥೆ ಹೆಣೆಯಲಾಗಿದೆ. ತಮಿಳಿನ ಸಯೇಷಾ ಸೆಹಗಲ್ ಈ ಚಿತ್ರದ ನಾಯಕಿ. ನಟ ಧನಂಜಯ್ ಅವರದ್ದು ವಿಲನ್ ಪಾತ್ರ. ವಿಜಯ್ ಕಿರಗಂದೂರು ಬಂಡವಾಳ ಹೂಡಿದ್ದಾರೆ.
ಈಗಾಗಲೇ, ಟೀಸರ್ ಬಿಡುಗಡೆಗೊಳಿಸಿರುವ ಚಿತ್ರತಂಡ ಟ್ರೇಲರ್ ಬಿಡುಗಡೆಗೊಳಿಸಲು ಸಿದ್ಧತೆ ನಡೆಸಿದೆ. ಇದಾದ ಬಳಿಕ ಪುನೀತ್ ಅವರು, ಚೇತನ್‌ಕುಮಾರ್ ನಿರ್ದೇಶನದ ‘ಜೇಮ್ಸ್’ ಚಿತ್ರದಲ್ಲಿ ನಟಿಸಲಿದ್ದಾರೆ. ‘ಒಂದಲ್ಲಾ ಎರಡಲ್ಲಾ’ ಚಿತ್ರದ ಖ್ಯಾತಿಯ ಡಿ. ಸತ್ಯಪ್ರಕಾಶ್ ಅವರ ಹೊಸ ಚಿತ್ರಕ್ಕೂ ಪುನೀತ್ ಅವರೇ ನಾಯಕ. ಹೊಸ ವರ್ಷದಲ್ಲಿ ಈ ಎರಡೂ ಚಿತ್ರಗಳು ಸೆಟ್ಟೇರಲಿವೆ.
***
ಸುದೀಪ್
ಸುದೀಪ್ ನಟನೆಯ ‘ಕೋಟಿಗೊಬ್ಬ 2’ ಚಿತ್ರ ತೆರೆ ಕಂಡಿದ್ದು ಮೂರು ವರ್ಷದ ಹಿಂದೆ. ಈಗ ಸೂರಪ್ಪಬಾಬು ನಿರ್ಮಾಣದ ‘ಕೋಟಿಗೊಬ್ಬ 3’ ಚಿತ್ರದಲ್ಲಿ ಅವರು ನಟಿಸುತ್ತಿದ್ದಾರೆ. ಈಗಾಗಲೇ, ಚಿತ್ರತಂಡ ಮಾತಿನ ಭಾಗದ ಶೂಟಿಂಗ್ ಪೂರ್ಣಗೊಳಿಸಿದೆ. ಸರ್ಬಿಯಾ, ಥೈಲ್ಯಾಂಡ್, ಮಲೇಷ್ಯಾದ ಸುಂದರ ತಾಣಗಳಲ್ಲಿ ಇದರ ಚಿತ್ರೀಕರಣ ನಡೆಸಲಾಗಿದೆ.
ಇದಕ್ಕೆ ಆ್ಯಕ್ಷನ್ ಕಟ್ ಹೇಳಿರುವುದು ಶಿವ ಕಾರ್ತಿಕ್. ಇದು ಅವರ ಮೊದಲ ಚಿತ್ರ. ಕೇರಳದ ಬೆಡಗಿ ಮಡೋನ್ನಾ ಸೆಬಾಸ್ಟಿಯನ್ ಇದರ ನಾಯಕಿ. ಬಾಲಿವುಡ್‌ನ ಸುಧಾಂಶು ಪಾಂಡೆ, ಅಫ್ತಾಪ್ ಶಿವದಾಸನಿ ಮತ್ತು ಶ್ರದ್ಧಾ ದಾಸ್ ನಟಿಸಿರುವುದು ಈ ಚಿತ್ರದ ವಿಶೇಷ. ಈ ಸಿನಿಮಾ ನಂತರ ಅನೂಪ್ ಭಂಡಾರಿ ನಿರ್ದೇಶನದ ಜಾಕ್ ಮಂಜು ನಿರ್ಮಾಣದ ‘ಫ್ಯಾಂಟಮ್’ ಸಿನಿಮಾದಲ್ಲಿ ಸುದೀಪ್ ನಟಿಸಲಿದ್ದಾರೆ.
ಜೊತೆಗೆ, ಅವರೇ ಹೊಸ ಸಿನಿಮಾವೊಂದನ್ನು ನಿರ್ದೇಶಿಸಲಿದ್ದಾರಂತೆ. ಸುದೀಪ್ ನಿರ್ದೇಶಿಸಿದ ಮೊದಲ ಚಿತ್ರ ‘ಮೈ ಆಟೋಗ್ರಾಫ್’. ಬಳಿಕ ‘ಶಾಂತಿ ನಿವಾಸ’, ‘ಜಸ್ಟ್ ಮಾತ್ ಮಾತಲ್ಲಿ’, ‘ವೀರ ಮದಕರಿ’, ‘ಕೆಂಪೇಗೌಡ’, ‘ಮಾಣಿಕ್ಯ’ ಚಿತ್ರ ನಿರ್ದೇಶಿಸಿದ್ದರು. ರಿಮೇಕ್ ಚಿತ್ರಗಳನ್ನೇ ನಿರ್ದೇಶಿಸಿರುವ ಅವರು ಮೊದಲ ಬಾರಿಗೆ ಸ್ವಮೇಕ್ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುವ ತವಕದಲ್ಲಿದ್ದಾರೆ.
***
ಶಿವರಾಜ್‌ಕುಮಾರ್
ಹನುಮನ ಭಕ್ತನಾಗಿ ಶಿವರಾಜ್‌ಕುಮಾರ್ ನಟಿಸಿದ್ದ ‘ಭಜರಂಗಿ’ ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ದೊಡ್ಡ ಸದ್ದು ಮಾಡಿತ್ತು. ಅವರ ಹೊಸ ಗೆಟಪ್‌ಗೆ ಅಭಿಮಾನಿಗಳು ಫಿದಾ ಆಗಿದ್ದರು. ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದು ಎ. ಹರ್ಷ. ಈಗ ಈ ಇಬ್ಬರ ಕಾಂಬಿನೇಷನ್‌ನಡಿ ಪ್ಯಾನ್ ಇಂಡಿಯಾ ಕಾನ್ಸೆಫ್ಟ್‌ನಲ್ಲಿ ‘ಭಜರಂಗಿ 2’ ಚಿತ್ರ ನಿರ್ಮಾಣವಾಗುತ್ತಿದೆ. ಕನ್ನಡ, ಹಿಂದಿ, ತೆಲುಗು, ತಮಿಳು ಮತ್ತು ಮಲಯಾಳದಲ್ಲಿ ಅದ್ದೂರಿಯಾಗಿ ತೆರೆಗೆ ತರಲು ಇರಾದೆ ಚಿತ್ರತಂಡದ್ದು.
ಈಗಾಗಲೇ, ಚಿತ್ರದ ಮುಕ್ಕಾಲು ಭಾಗದಷ್ಟು ಶೂಟಿಂಗ್ ಪೂರ್ಣಗೊಂಡಿದೆ. ಜನವರಿಯ ಅಂತ್ಯಕ್ಕೆ ಚಿತ್ರೀಕರಣ ಪೂರ್ಣಗೊಳಿಸಿ ಏಪ್ರಿಲ್‌ನಲ್ಲಿ ಚಿತ್ರ ಬಿಡುಗಡೆಗೊಳಿಸುವ ಉತ್ಸಾಹದಲ್ಲಿದ್ದಾರೆ ನಿರ್ದೇಶಕ ಹರ್ಷ. ಜಯಣ್ಣ ಕಂಬೈನ್ಸ್‌ನಡಿ ಚಿತ್ರ ನಿರ್ಮಾಣವಾಗುತ್ತಿದೆ. ‘ಟಗರು’ ಚಿತ್ರದ ಬಳಿಕ ನಟಿ ಭಾವನಾ ಅವರು ಇದರಲ್ಲಿ ಶಿವರಾಜ್‌ಕುಮಾರ್‌ಗೆ ನಾಯಕಿಯಾಗಿದ್ದಾರೆ. ಇದು ‘ಭಜರಂಗಿ’ ಚಿತ್ರದ ಮುಂದುವರಿದ ಕಥೆಯಲ್ಲ. ಕಥೆಯ ಎಳೆಯ ಭಿನ್ನವಾದುದು ಎಂಬುದು ಚಿತ್ರತಂಡದ ವಿವರಣೆ.
ಪ್ರಮೋದ್ ಚಕ್ರವರ್ತಿ ನಿರ್ದೇಶನದ ‘ದ್ರೋಣ’ ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ಮೊದಲ ಬಾರಿಗೆ ಶಿವರಾಜ್‌ಕುಮಾರ್ ಅವರು ಇದರಲ್ಲಿ ಶಿಕ್ಷಕನ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಕೇರಳದ ಇನಿಯಾ ಇದರ ನಾಯಕಿ. ಶಿವಣ್ಣ ಅವರ 125ನೇ ಚಿತ್ರ ‘ಬೈರತಿ ರಣಗಲ್ಲು’ ಹೊಸ ವರ್ಷದಲ್ಲಿ ಸೆಟ್ಟೇರಲಿದೆ. ‘ಮಫ್ತಿ’ ಚಿತ್ರ ನಿರ್ದೇಶಿಸಿದ್ದ ನರ್ತನ್ ಅವರೇ ಇದನ್ನು ನಿರ್ದೇಶಿಸಲಿದ್ದಾರಂತೆ.
***
ಧ್ರುವ ಸರ್ಜಾ
ಅದ್ದೂರಿ ಮೇಕಿಂಗ್ ಮತ್ತು ಕಥೆಯಿಂದ ಕುತೂಹಲ ಮೂಡಿಸಿರುವ ಚಿತ್ರ ‘ಪೊಗರು’. ಧ್ರುವ ಸರ್ಜಾ ನಟಿಸಿದ್ದ ಈ ಹಿಂದಿನ ಮೂರು ಚಿತ್ರಗಳು ಯಶಸ್ಸು ಕಂಡಿವೆ. ನಂದ ಕಿಶೋರ್ ನಿರ್ದೇಶನದ ಇದರ ಮೇಲೂ ನಿರೀಕ್ಷೆ ದ್ವಿಗುಣಗೊಂಡಿದೆ. ಮಾತಿನ ಭಾಗದ ಚಿತ್ರೀಕರಣ ಪೂರ್ಣಗೊಳಿಸಿರುವ ಚಿತ್ರತಂಡ, ನಾಲ್ಕು ಹಾಡುಗಳ ಚಿತ್ರೀಕರಣವನ್ನಷ್ಟೇ ಬಾಕಿ ಉಳಿಸಿಕೊಂಡಿದೆ.
ತಾಯಿ ಮತ್ತು ಮಗನ ಸಂಬಂಧದ ಸುತ್ತ ಹೆಣೆದಿರುವ ಕಥನ ಇದು. ಧ್ರುವ ಸರ್ಜಾ ಎರಡು ಭಿನ್ನ ಶೇಡ್‌ನಲ್ಲಿ ಕಾಣಿಸಿಕೊಂಡಿದ್ದಾರಂತೆ. ಅವರಿಗೆ ರಶ್ಮಿಕಾ ಮಂದಣ್ಣ ಜೋಡಿ. ಇಬ್ಬರದು ಕ್ಯಾಟ್ ಅಂಡ್ ಮೌಸ್ ಗೇಮ್ ಮನಸ್ಥಿತಿ. ಫ್ರೆಂಚ್‌ನ ಮಾರ್ಗೆನ್ ಆಸ್ಟೆ, ಅಮೆರಿಕದ ಕಾಯ್ ಗ್ರೀನ್ ಇದರಲ್ಲಿ ನಟಿಸಿದ್ದಾರೆ. ಬಿ.ಕೆ. ಗಂಗಾಧರ್ ಬಂಡವಾಳ ಹೂಡಿದ್ದಾರೆ.
***
ರಚಿತಾ ರಾಮ್
ನಟಿ ರಚಿತಾ ರಾಮ್ ಪಾಲಿಗೆ 2020 ಸ್ಮರಣೀಯ ವರ್ಷವಾಗಲಿದೆ ಎಂದರೆ ಅತಿಶಯೋಕ್ತಿಯಲ್ಲ. ಈಗ ಅವರು ‘ದಿಸ್ ಪ್ರಾಪರ್ಟಿ ಬಿಲಾಂಗ್ಸ್ ಟು ಮೀನಾಕ್ಷಿ’ ಸಿನಿಮಾದ ಮೂಲಕ ಟಾಲಿವುಡ್‌ಗೂ ಎಂಟ್ರಿ ನೀಡಿದ್ದಾರೆ. ಕನ್ನಡದಲ್ಲಿ ಅವರು ‘100’, ‘ಏಕ್ ಲವ್ ಯಾ’, ‘ಡಾಲಿ’, ‘ಏಪ್ರಿಲ್’, ‘ಸಂಜಯ್ ಅಲಿಯಾಸ್ ಸಂಜು’, ‘ವೀರಂ’ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ.
ಸ್ಟಾರ್ ನಟರ ಜೊತೆಗಷ್ಟೇ ನಟಿಸುತ್ತಾರೆ ಎಂಬುದು ಅವರ ಮೇಲಿರುವ ಸಾಮಾನ್ಯ ಆರೋಪ. ಈಗ ಹೊಸಬರ ಪ್ರಯೋಗಾತ್ಮಕ ಚಿತ್ರಗಳಲ್ಲಿಯೂ ನಟಿಸುವ ಮೂಲಕ ಇದರಿಂದ ಹೊರಬರುವ ತವಕದಲ್ಲಿದ್ದಾರೆ.
**
ಹರಿಪ್ರಿಯಾ
ನಟಿ ಹರಿಪ್ರಿಯಾ ಅವರು ಬರಗೂರು ರಾಮಚಂದ್ರಪ್ಪ ನಿರ್ದೇಶನದ ‘ಅಮೃತಮತಿ’ಯಲ್ಲಿ ನಟಿಸುವ ಮೂಲಕ ಪ್ರಯೋಗಕ್ಕೆ ಒಡ್ಡಿಕೊಂಡಿದ್ದಾರೆ. ಹರಿ ಸಂತೋಷ್ ನಿರ್ದೇಶನದ ‘ಬಿಚ್ಚುಗತ್ತಿ ಚಾಪ್ಟರ್ 1’ ಚಿತ್ರಕ್ಕೂ ಅವರೇ ನಾಯಕಿ.
***
ರಶ್ಮಿಕಾ ಮಂದಣ್ಣ
ನಟಿ ರಶ್ಮಿಕಾ ಮಂದಣ್ಣಗೆ ಕನ್ನಡ ಚಿತ್ರರಂಗದಲ್ಲಿ ಖ್ಯಾತಿ ತಂದುಕೊಟ್ಟ ಚಿತ್ರ ‘ಕಿರಿಕ್ ಪಾರ್ಟಿ’. ಬಳಿಕ ಅವರು ‘ಅಂಜನಿಪುತ್ರ’, ‘ಚಮಕ್’ ಚಿತ್ರದಲ್ಲಿ ನಟಿಸಿದರು. ‘ಚಲೋ’ ಚಿತ್ರದ ಮೂಲಕ ತೆಲುಗಿಗೂ ಕಾಲಿಟ್ಟರು. ಈಗ ಅವರು ಟಾಲಿವುಡ್‌ನ ಬಹುಬೇಡಿಕೆಯ ನಟಿ. ಅಲ್ಲಿ ಅವರಿಗೆ ಒಳ್ಳೆಯ ಹೆಸರು ತಂದುಕೊಟ್ಟಿದ್ದು ವಿಜಯ್ ದೇವರಕೊಂಡ ಜೊತೆಗೆ ನಟಿಸಿದ ‘ಗೀತ ಗೋವಿಂದಂ’ ಚಿತ್ರ.
ಮಹೇಶ್‌ಬಾಬು ನಟನೆಯ ‘ಸರಿಲೇರು ನಿಕೇವ್ವೆರು’ ಚಿತ್ರಕ್ಕೂ ಅವರೇ ನಾಯಕಿ. ಜನವರಿಯಲ್ಲಿ ಇದು ತೆರೆ ಕಾಣಲಿದೆ. ಈ ಚಿತ್ರ ನಿರ್ದೇಶಿಸಿರುವುದು ಅನಿಲ್ ರವಿಪುಡಿ. ನಿತಿನ್ ನಾಯಕನಾಗಿರುವ ‘ಭೀಷ್ಮ’ ಚಿತ್ರದಲ್ಲೂ ಅವರು ನಟಿಸುತ್ತಿದ್ದಾರೆ. ಇದರಲ್ಲಿ ನಟ ಅನಂತ್‌ನಾಗ್ ಕೂಡ ಅಭಿನಯಿಸುತ್ತಿದ್ದಾರೆ. ಜೊತೆಗೆ, ಅಲ್ಲು ಅರ್ಜುನ್ ನಾಯಕನಾಗಿರುವ ಹೊಸ ಚಿತ್ರಕ್ಕೂ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಈ ನಡುವೆಯೇ ‘ಸುಲ್ತಾನ್’ ಚಿತ್ರದ ಮೂಲಕ ತಮಿಳು ಚಿತ್ರರಂಗಕ್ಕೂ ಪಾದಾರ್ಪಣೆ ಮಾಡುತ್ತಿದ್ದಾರೆ. ಕನ್ನಡದಲ್ಲಿ ಧ್ರುವ ಸರ್ಜಾ ನಟನೆಯ ‘ಪೊಗರು’ ಚಿತ್ರಕ್ಕೂ ರಶ್ಮಿಕಾ ಅವರೇ ನಾಯಕಿ.
***
ರಮೇಶ್ ಅರವಿಂದ್
ಕಳೆದ ಎರಡು ವರ್ಷದಲ್ಲಿ ನಟ ರಮೇಶ್ ಅರವಿಂದ್ ಸಿನಿಮಾ ಚಟುವಟಿಕೆಯಲ್ಲಿ ಬಿಡುವಿಲ್ಲದೆ ತೊಡಗಿಸಿಕೊಂಡಿದ್ದಾರೆ. ಆದರೆ, ಅವರು ನಿರ್ದೇಶಿಸಿರುವ ಮತ್ತು ನಟನೆಯ ಯಾವುದೇ ಚಿತ್ರವೂ ತೆರೆಕಂಡಿಲ್ಲ. ಹಿಂದಿಯ ‘ಕ್ವೀನ್ಸ್’ ಚಿತ್ರವು ಕನ್ನಡದಲ್ಲಿ ‘ಬಟರ್ ಫ್ಲೈ’ ಮತ್ತು ತಮಿಳಿನಲ್ಲಿ ‘ಪ್ಯಾರಿಸ್ ಪ್ಯಾರಿಸ್’ ಆಗಿ ರಿಮೇಕ್ ಆಗಿದೆ. ಇದಕ್ಕೆ ಅವರೇ ಆ್ಯಕ್ಷನ್ ಕಟ್ ಹೇಳಿದ್ದಾರೆ.
ಶೀರ್ಷಿಕೆಯಿಂದಲೇ ಕುತೂಹಲ ಕೆರಳಿಸಿರುವ ‘100’ ಚಿತ್ರವನ್ನೂ ಅವರೇ ನಿರ್ದೇಶಿಸಿದ್ದಾರೆ. ಇದರ ಶೂಟಿಂಗ್ ಕೂಡ ಪೂರ್ಣಗೊಂಡಿದೆ. ಇದರಲ್ಲಿ ಅವರದು ಸೈಬರ್ ಅಪರಾಧ ವಿಭಾಗದ ತನಿಖಾಧಿಕಾರಿ ಪಾತ್ರ. ಬಹುನಿರೀಕ್ಷಿತ ‘ಶಿವಾಜಿ ಸುರತ್ಕಲ್’ ಚಿತ್ರದಲ್ಲಿ ಪತ್ತೇದಾರಿಯಾಗಿ ಬಣ್ಣ ಹಚ್ಚಿದ್ದಾರೆ. ‘ಭೈರಾದೇವಿ’ಯಲ್ಲೂ ಅವರು ಅಪರಾಧ ವಿಭಾಗದ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ.
***
ಯೋಗರಾಜ್ ಭಟ್
ಯುವಜನರ ಕನಸುಗಳು ಮತ್ತು ಹತಾಶೆಯ ಸುತ್ತ ಹೆಣೆದಿರುವುದೇ ‘ಗಾಳಿಪಟ 2’ ಚಿತ್ರದ ಕಥಾವಸ್ತು. ಯೋಗರಾಜ್ ಭಟ್ ಮತ್ತು ಗಣೇಶ್ ಕಾಂಬಿನೇಷನ್‌ನಡಿ ಮೂಡಿಬರುತ್ತಿರುವುದು ಚಿತ್ರ ಇದು. ಹಳೆಯ ಗಾಳಿಪಟದ ಯಾವ ಎಲಿಮೆಂಟ್‌ಗಳನ್ನು ಮರುಬಳಕೆ ಮಾಡಿಕೊಳ್ಳದೆ ಭಟ್ಟರು ಇದರ ಕಥೆ ಹೊಸೆದಿದ್ದಾರಂತೆ. ‘ಗಾಳಿಪಟ’ದಲ್ಲಿ ಗಣೇಶ್ ಅವರೊಟ್ಟಿಗೆ ದಿಗಂತ್ ಮತ್ತು ರಾಜೇಶ್ ಕೃಷ್ಣನ್ ಜೋಡಿಯಾಗಿ ನಟಿಸಿದ್ದರು. ಭಾಗ 2ರಲ್ಲಿ ರಾಜೇನ್ ಕೃಷ್ಣನ್ ಜಾಗದಲ್ಲಿ ಪವನ್‌ಕುಮಾರ್ ನಟಿಸುತ್ತಿದ್ದಾರೆ. ಕುದುರೆಮುಖದಲ್ಲಿ ಚಿತ್ರದ ಶೂಟಿಂಗ್ ನಡೆಯುತ್ತಿದೆ.
***
ದುನಿಯಾ ವಿಜಯ್
‘ಸಲಗ’ ದುನಿಯಾ ವಿಜಯ್ ನಿರ್ದೇಶನದ ಮೊದಲ ಚಿತ್ರ. ಸಿನಿಮಾದ ಶೂಟಿಂಗ್ ಮುಗಿಸಿರುವ ಚಿತ್ರತಂಡ ಪೋಸ್ಟ್ ಪ್ರೊಡಕ್ಷನ್‌ನಲ್ಲಿ ತೊಡಗಿಸಿಕೊಂಡಿದೆ. ಸಂಜನಾ ಆನಂದ್ ಈ ಚಿತ್ರದ ನಾಯಕಿ. ಅಂದಹಾಗೆ ‘ಡಾಲಿ’ ಖ್ಯಾತಿಯ ಧನಂಜಯ್ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ. ಸಮಾಜದಲ್ಲಿನ ಒಂದಷ್ಟು ಕಟು ಸತ್ಯ ಬಿಚ್ಚಿಡಲು ಹಂಬಲ ವಿಜಿ ಅವರದ್ದು. ಭೂಗತ ಲೋಕದ ಸುತ್ತ ಚಿತ್ರದ ಕಥೆ ಹೊಸೆಯಲಾಗಿದೆ. ಅಮಾಯಕ ಕ್ರಿಮಿನಲ್ ಒಬ್ಬನ ಕಥೆ ಇದು. ಈ ಚಿತ್ರ ಬಳಿಕ ‘ಕುಸ್ತಿ’ ಚಿತ್ರವನ್ನು ಕೈಗೆತ್ತಿಗೊಳ್ಳುವ ಹಾದಿಯಲ್ಲಿದ್ದಾರೆ ವಿಜಯ್.
***
ಶ್ರೀಮುರಳಿ
ಟೈಟಲ್ ವಿವಾದದಿಂದಲೇ ಸಾಕಷ್ಟು ಸುದ್ದಿಯಲ್ಲಿರುವ ಚಿತ್ರ ‘ಮದಗಜ’. ಶ್ರೀಮುರಳಿ ನಟನೆಯ ಮಹೇಶ್‌ಕುಮಾರ್ ನಿರ್ದೇಶನದ ಈ ಚಿತ್ರಕ್ಕೆ ಜನವರಿ 15ರಂದು ಮುಹೂರ್ತ ನೆರವೇರಲಿದೆ. ಜೊತೆಗೆ, ಪ್ರಶಾಂತ್ ನೀಲ್ ಅವರು ಶ್ರೀಮುರಳಿಗಾಗಿ ‘ಉಗ್ರಂ 2’ ಚಿತ್ರವನ್ನೂ ನಿರ್ದೇಶಿಸಲಿದ್ದಾರಂತೆ.
***
ದುನಿಯಾ ಸೂರಿ
‘ಪಾಪ್ ಕಾರ್ನ್ ಮಂಕಿ ಟೈಗರ್’ ಚಿತ್ರದ ಮೂಲಕ ಜನರ ಬದುಕಿಗೆ ಕನ್ನಡಿ ಹಿಡಿಯಲು ಹೊರಟಿದ್ದಾರೆ ನಿರ್ದೇಶಕ ಸೂರಿ. ಚಿತ್ರದಲ್ಲಿ ಧನಂಜಯ್ ಅವರು ’ಮಂಕಿ ಸೀನ’ನಾಗಿ ಕಾಣಿಸಿಕೊಂಡಿದ್ದಾರೆ. ‘ಟಗರು’ ಚಿತ್ರದಲ್ಲಿ ಭಿನ್ನ ಶೈಲಿಯಲ್ಲಿ ಕಥೆ ಹೇಳಿದ್ದ ಸೂರಿಯದ್ದು ಇಲ್ಲಿಯೂ ಹೊಸತನದ ನಿರೂಪಣೆಯಂತೆ. ರೌಡಿಸಂ ಹಿನ್ನೆಲೆ ಮತ್ತು ಮನುಷ್ಯನ ಸಂಬಂಧ ಕುರಿತು ಚಿತ್ರ ಇದಾಗಿದೆ. ಹೀರೊನ ಎಂಟ್ರಿ, ಲುಕ್, ಬಿಲ್ಡಪ್ ಸಾಂಗ್‌ಗಳು ಇಲ್ಲದೆಯೇ ಹೀರೊಯಿಸಂ ತೋರಿಸುವ ಚಿತ್ರ ಇದು. ಜೀವನದ ಮುಖಗಳಿಗೆ ಸಾಣೆ ಹಿಡಿಯುವ ಪ್ರಯತ್ನ ನಿರ್ದೇಶಕರದ್ದು.
***
ಪ್ರಜ್ವಲ್ ದೇವರಾಜ್
ನಟ ಪ್ರಜ್ವಲ್ ದೇವರಾಜ್ ಕೈಯಲ್ಲಿ ಐದು ಸಿನಿಮಾಗಳಿವೆ. ‘ಸ್ಲಿಪಿಂಗ್ ಬ್ಯೂಟಿ ಸಿಂಡ್ರೋಮ್’ ಸುತ್ತ ಹೆಣೆದಿರುವ ‘ಜಂಟಲ್‌ಮನ್’ ಚಿತ್ರ ಜನವರಿಯಲ್ಲಿ ತೆರೆ ಬರಲಿದೆ. ‘ಇನ್‌ಸ್ಪೆಕ್ಟರ್ ವಿಕ್ರಂ’, ‘ಅರ್ಜುನ್‌ಗೌಡ’, ‘ವೀರಂ’ ಚಿತ್ರದಲ್ಲಿ ಅವರು ನಟಿಸುತ್ತಿದ್ದಾರೆ. ‘ದಿಲ್ ಕಾ ರಾಜಾ’ ಚಿತ್ರದಲ್ಲಿ ಪ್ರಜ್ವಲ್‌ಗೆ ಮೋಹಕ ತಾರೆ ರಮ್ಯಾ ನಟಿಸಲಿದ್ದಾರೆ ಎಂಬ ಸುದ್ದಿಯೂ ಹೊರಬಿದ್ದಿದೆ.
***
ಉಪೇಂದ್ರ
ಉಪೇಂದ್ರ ನಟನೆಯ ಬಹುನಿರೀಕ್ಷಿತ ಚಿತ್ರ ‘ಕಬ್ಜ’. ಏಳು ಭಾಷೆಯಲ್ಲಿ ಈ ಸಿನಿಮಾ ನಿರ್ಮಾಣವಾಗುತ್ತಿದೆ. ಆರ್. ಚಂದ್ರು ಇದನ್ನು ನಿರ್ದೇಶಿಸುತ್ತಿದ್ದಾರೆ.ಮೂರು ಭಾಷೆಗಳಲ್ಲಿ ಶೂಟಿಂಗ್ ಮಾಡಿ, ನಾಲ್ಕು ಭಾಷೆಗಳಿಗೆ ಡಬ್ ಮಾಡುವ ಆಲೋಚನೆ ನಿರ್ದೇಶಕರದ್ದು. ಉಪೇಂದ್ರ ಮತ್ತು ವೇದಿಕಾ ನಟನೆಯ ‘ಹೋಮ್ ಮಿನಿಸ್ಟರ್’ ಚಿತ್ರದ ಶೂಟಿಂಗ್ ಪೂರ್ಣಗೊಂಡಿದೆ. ‘ಬುದ್ಧಿವಂತ 2’ ಚಿತ್ರದಲ್ಲೂ ಅವರು ನಟಿಸುತ್ತಿದ್ದಾರೆ.
***
ಚಿರಂಜೀವಿ ಸರ್ಜಾ
‘ಖಾಕಿ’, ‘ರಣಂ’, ‘ಏಪ್ರಿಲ್’, ‘ಕ್ಷತ್ರಿಯ’, ‘ಜುಗಾರಿ ಕ್ರಾಸ್’ –ಇದು ನಟ ಚಿರಂಜೀವಿ ಸರ್ಜಾ ನಟಿಸುತ್ತಿರುವ ಸಿನಿಮಾಗಳ ಪಟ್ಟಿ. ಈ ವರ್ಷ ತೆರೆಕಂಡ ‘ಸಿಂಗ’ ಚಿತ್ರ ಬಾಕ್ಸ್‌ಆಫೀಸ್‌ನಲ್ಲಿ ಅಷ್ಟೊಂದು ಜೋರಾಗಿ ಸದ್ದು ಮಾಡಲಿಲ್ಲ. ಹಾಗೆಂದು ಚಿರುಗೆ ಬೇಡಿಕೆ ಕಡಿಮೆಯಾಗಿಲ್ಲ.
***
ವಸಿಷ್ಠ ಸಿಂಹ
ವಸಿಷ್ಠ ಸಿಂಹ ಖಳನಟನಾಗಿಯೇ ಚಿತ್ರರಂಗದಲ್ಲಿ ಮಿಂಚಿದ್ದು ಹೆಚ್ಚು. ಈಗ ‘ಇಂಡಿಯಾ ವರ್ಸಸ್ ಇಂಗ್ಲೆಂಡ್’ ಚಿತ್ರದ ಮೂಲಕ ನಾಯಕ ನಟನಾಗಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಈ ಚಿತ್ರ ನಿರ್ದೇಶಿಸುತ್ತಿರುವುದು ನಾಗತಿಹಳ್ಳಿ ಚಂದ್ರಶೇಖರ್.
ಸುಮಂತ್ ಕ್ರಾಂತಿ ನಿರ್ದೇಶನದ ‘ಕಾಲಚಕ್ರ’ ಚಿತ್ರಕ್ಕೂ ಅವರೇ ನಾಯಕ. ಇದರಲ್ಲಿ ಅವರದ್ದು ಎರಡು ಛಾಯೆಯ ಪಾತ್ರ. ‘ಯುವರತ್ನ’ ಮತ್ತು ‘ಮಾಯಬಜಾರ್’ ಚಿತ್ರದಲ್ಲೂ ಅವರು ನಟಿಸುತ್ತಿದ್ದಾರೆ.
***
ರವಿಚಂದ್ರನ್
ರವಿಚಂದ್ರನ್ ನಟನೆಯ ‘ರವಿ ಬೋಪಣ್ಣ’ ಮತ್ತು ‘ರಾಜೇಂದ್ರ ಪೊನ್ನಪ್ಪ’ ಚಿತ್ರಗಳು ನಿರೀಕ್ಷೆ ಹೆಚ್ಚಿಸಿವೆ. ‘ರವಿ ಬೋಪಣ್ಣ’ ಚಿತ್ರದಲ್ಲಿ ನಟ ಸುದೀಪ್ ಕೂಡ ನಟಿಸಿದ್ದಾರೆ. ಇದಾದ ಬಳಿಕ ಸಂಪೂರ್ಣ ಮ್ಯೂಸಿಕಲ್ ಚಿತ್ರವನ್ನು ಕೈಗೆತ್ತಿಕೊಳ್ಳುವ ತಯಾರಿಯಲ್ಲಿದ್ದಾರೆರವಿಚಂದ್ರನ್.
***
ನೀನಾಸಂ ಸತೀಶ್
ಸತೀಶ್ ನೀನಾಸಂ ನಟನೆಯ ‘ಗೋದ್ರಾ’ ಚಿತ್ರದ ಡಬ್ಬಿಂಗ್ ಪೂರ್ಣಗೊಂಡಿದೆ. ‘ಮೈ ನೇಮ್ ಈಸ್ ಸಿದ್ದೇಗೌಡ’, ‘ಪರಿಮಳ ಲಾಡ್ಜ್’ ಮತ್ತು ‘ವೈತರಣಿ’ ಚಿತ್ರದಲ್ಲಿ ಅವರು ನಟಿಸುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.