ADVERTISEMENT

ಹಬ್ಬಗಳಿಗಿಲ್ಲ ಸ್ಟಾರ್‌ ಚಿತ್ರಗಳ ಅಬ್ಬರ!

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2024, 23:45 IST
Last Updated 3 ಅಕ್ಟೋಬರ್ 2024, 23:45 IST
ui
ui   

ವರಮಹಾಲಕ್ಷ್ಮಿ, ದಸರಾ, ದೀಪಾವಳಿ ಮೊದಲಾದ ಹಬ್ಬಗಳಿಗೆ ಸ್ಟಾರ್‌ ನಟರ ಚಿತ್ರಗಳು ತೆರೆಗೆ ಬರುವ ವಾಡಿಕೆ ಹಿಂದಿನಿಂದಲೂ ಇತ್ತು. ಆದರೆ, ಇತ್ತೀಚಿನ ವರ್ಷಗಳಲ್ಲಿ ಪ್ರಮುಖ ಹಬ್ಬಗಳಂದು ಪರಭಾಷಾ ನಟರ ಚಿತ್ರಗಳೇ ನಮ್ಮಲ್ಲಿ ಹೆಚ್ಚು ಅಬ್ಬರಿಸುತ್ತಿವೆ...

ಒಂದು ಕಾಲದಲ್ಲಿ ಕನ್ನಡ ಚಿತ್ರರಂಗದವರು ಪ್ರಮುಖ ಹಬ್ಬಗಳು, ಸಾಲು–ಸಾಲು ರಜೆಗಳು ಬರುವ ದಿನಗಳನ್ನೇ ಕಾಯುತ್ತಿದ್ದರು. ಸಂಕ್ರಾಂತಿ, ಯುಗಾದಿ, ವರಮಹಾಲಕ್ಷ್ಮಿ, ಗೌರಿ–ಗಣೇಶ, ದಸರಾ, ದೀಪಾವಳಿ, ಕ್ರಿಸ್‌ಮಸ್‌ಗೆ ಸ್ಟಾರ್‌ ನಟರ ಒಂದಲ್ಲ ಒಂದು ಚಿತ್ರ ತೆರೆಯ ಮೇಲೆ ಇರುತ್ತಿತ್ತು. ಎಲ್ಲರಿಗೂ ರಜೆ ಇರುತ್ತದೆ. ಮನೆ ಮಂದಿಯೆಲ್ಲ ಒಟ್ಟಾಗಿ ಸೇರಿರುತ್ತಾರೆ. ಹೀಗಾಗಿ ಫ್ಯಾಮಿಲಿ ಆಡಿಯನ್ಸ್‌ನಿಂದ ದೊಡ್ಡ ಓಪನಿಂಗ್‌ ಸಿಗುತ್ತದೆ ಎಂಬ ಲೆಕ್ಕಾಚಾರವೂ ಇದರ ಹಿಂದೆ ಇತ್ತು.

ವರಮಹಾಲಕ್ಷ್ಮಿ, ಯುಗಾದಿ, ವಿಜಯದಶಮಿ ಮೊದಲಾದವು ಶುಭದ ಸಂಕೇತ. ಈ ಹಬ್ಬಗಳಲ್ಲಿ ಚಿತ್ರ ಬಿಡುಗಡೆ ಮಾಡಿದರೆ ಗೆಲ್ಲುತ್ತದೆ ಎಂಬ ನಂಬಿಕೆಯೂ ಕೆಲ ನಿರ್ಮಾಣ ಸಂಸ್ಥೆಗಳು, ನಿರ್ಮಾಪಕರಿಗೆ ಇತ್ತು. ಈ ವೇಳೆ ಸ್ಟಾರ್‌ ಚಿತ್ರಗಳು ಬಂದೇ ಬರುತ್ತವೆ ಎಂಬ ನಂಬಿಕೆಯಿಂದ ಉಳಿದ ಸಣ್ಣ, ಹೊಸಬರ ಚಿತ್ರಗಳು ಬಿಡುಗಡೆಯಿಂದ ದೂರ ಉಳಿಯುತ್ತಿದ್ದವು.

ADVERTISEMENT

ಆದರೆ ಈಗ ದೊಡ್ಡ ಹಬ್ಬಗಳಂದು ಕನ್ನಡದ ಸ್ಟಾರ್‌ ನಟರ ಚಿತ್ರಗಳು ತೆರೆಗೆ ಬರುತ್ತಿಲ್ಲ. ಬದಲಿಗೆ ತಮಿಳು, ತೆಲುಗು ಸ್ಟಾರ್‌ ನಟರ ಸಿನಿಮಾಗಳು ಆ ಜಾಗವನ್ನು ಆಕ್ರಮಿಸುತ್ತಿವೆ. ಕಳೆದ ವರ್ಷದ ದಸರಾಕ್ಕೆ ಶಿವರಾಜ್‌ಕುಮಾರ್‌ ನಟನೆಯ ‘ಘೋಸ್ಟ್‌’ ತೆರೆಯ ಮೇಲಿತ್ತು. ಅದೇ ವಾರ ಚಿರಂಜೀವಿ ನಟನೆಯ ‘ಗಾಡ್‌ಫಾದರ್‌’ ಬಿಡುಗಡೆಗೊಂಡಿತ್ತು. ಈ ಸಲ ಧ್ರುವಾ ಸರ್ಜಾ ಅಭಿನಯದ ‘ಮಾರ್ಟಿನ್‌’ ತೆರೆಗೆ ಬರುತ್ತಿದೆ. ಅದರ ಜೊತೆಗೆ ರಜನಿಕಾಂತ್‌, ಅಮಿತಾಭ್‌ ಬಚ್ಚನ್‌ ಮೊದಲಾದ ಸ್ಟಾರ್‌ ನಟರ ದಂಡನ್ನೇ ಹೊಂದಿರುವ ‘ವೆಟ್ಟೈಯನ್‌’ ರಾಜ್ಯದ ಬಹುಪಾಲು ಚಿತ್ರಮಂದಿರಗಳನ್ನು ಆಕ್ರಮಿಸಲಿದೆ. 

‘ಹಿಂದೆ ಒಂದು ಸಿನಿಮಾ ಶುರುವಾಗುವ ಸಮಯದಲ್ಲೇ ಬಿಡುಗಡೆಯ ದಿನಾಂಕವೂ ತಿಳಿದಿರುತ್ತಿತ್ತು. ವರಮಹಾಲಕ್ಷ್ಮಿ, ದಸರಾ, ಸಂಕ್ರಾಂತಿಗೆ ಕೆಲ ನಟರ ಅಥವಾ ನಿರ್ಮಾಣ ಸಂಸ್ಥೆಯ ಸಿನಿಮಾಗಳು ನಿಶ್ಚಿತ ಎನ್ನುವಂತೆ ಇತ್ತು. ಆಗ ಹಲವಾರು ಸ್ಟಾರ್‌ಗಳಿದ್ದರು. ಯಾರದಾದರೂ ಸಿನಿಮಾ ಹಬ್ಬಕ್ಕೆ ತೆರೆಗೆ ಬರುತ್ತಿತ್ತು’ ಎನ್ನುತ್ತಾರೆ ಸಿನಿಮಾ ವಿತರಕ ಮಾರ್ಸ್‌ ಸುರೇಶ್‌.

ಸ್ಟಾರ್‌ ಸಿನಿಮಾಗಳ ಕೊರತೆ:

ಕೋವಿಡ್‌ ನಂತರ ಹಬ್ಬಗಳಂದು ಸ್ಟಾರ್‌ ಸಿನಿಮಾಗಳು ತೆರೆಗೆ ಬರುವುದು ಗಣನೀಯವಾಗಿ ಕುಸಿದಿದೆ. ಸಂಕ್ರಾಂತಿ ಹಬ್ಬಕ್ಕಂತೂ ರಾಜ್ಯದಲ್ಲಿಯೂ ತಮಿಳಿನ ದೊಡ್ಡ ಸಿನಿಮಾ ನಿಶ್ಚಿತ ಎಂಬಂತಾಗಿದೆ. ದಸರಾಗೆ ತೆಲುಗು ಸ್ಟಾರ್‌ಗಳ ಪೈಪೋಟಿ ಪ್ರಾರಂಭವಾಗಿದೆ. 2024ರಲ್ಲಿ ಕನ್ನಡದಲ್ಲಿ ತೆರೆಕಂಡ ಸ್ಟಾರ್‌ಗಳ ಚಿತ್ರವೇ ಕಡಿಮೆ ಇದೆ. ಸಂಕ್ರಾಂತಿ, ಯುಗಾದಿಗೆ ಸ್ಟಾರ್‌ ಸಿನಿಮಾಗಳು ಇರಲಿಲ್ಲ. ಗಣೇಶ್‌ ನಟನೆಯ ‘ಕೃಷ್ಣಂ ಪ್ರಣಯ ಸಖಿ’ ವರಮಹಾಲಕ್ಷ್ಮಿ ಹಬ್ಬದಂದು ತೆರೆಕಂಡು ಗೆಲುವಿನ ನಗೆ ಬೀರಿತ್ತು. ದುನಿಯಾ ವಿಜಯ್‌ ನಟನೆಯ ‘ಭೀಮ’, ಶಿವರಾಜ್‌ಕುಮಾರ್‌ ಅಭಿನಯದ ‘ಕರಟಕ ದಮನಕ’, ಧನಂಜಯ ನಟನೆಯ ‘ಕೋಟಿ’ ಬಿಡುಗಡೆಗೊಂಡಿವೆ. 

ಈಗ ತೆರೆ ಕಾಣುತ್ತಿರುವ ‘ಮಾರ್ಟಿನ್‌’ ಪ್ರಾರಂಭವಾಗಿ ಬಹಳ ಕಾಲವಾಗಿದೆ. ಉಪೇಂದ್ರ ನಟನೆಯ ‘ಯುಐ’ಗೆ ಬಿಡುಗಡೆ ಮುಹೂರ್ತ ಕೂಡಿ ಬಂದಿಲ್ಲ. ಶಿವರಾಜ್‌ಕುಮಾರ್‌ ‘ಭೈರತಿ ರಣಗಲ್‌’  ಆಗಸ್ಟ್‌ನಲ್ಲಿಯೇ ತೆರೆ ಕಾಣಬೇಕಿತ್ತು. ಸುದೀಪ್‌ ‘ಮ್ಯಾಕ್ಸ್‌’ ಚಿತ್ರ ಇನ್ನೂ ಪೋಸ್ಟ್‌ ಪ್ರೊಡಕ್ಷನ್‌ನಲ್ಲಿದೆ. ಶ್ರೀಮುರುಳಿ ನಟನೆಯ ‘ಬಘೀರ’ ಕೂಡ ಬಹಳ ಹಿಂದೆಯೇ ತೆರೆ ಕಾಣಬೇಕಿದ್ದ ಚಿತ್ರ. ದರ್ಶನ್‌ ನಟನೆಯ ‘ಡೇವಿಲ್‌’ ಕೂಡ ಈ ವರ್ಷ ತೆರೆಗೆ ಬರುವುದು ಅನುಮಾನ. 

dhruva sarja
dhuruva sarja
‘ಯುಐ’ ಚಿತ್ರದ ಗ್ರಾಫಿಕ್ಸ್‌ ಕೆಲಸ ಈಗಷ್ಟೇ ಮುಗಿದಿದೆ. ನಟ ನಿರ್ದೇಶಕ ಉಪೇಂದ್ರ ಸಿನಿಮಾ ನೋಡುವುದು ಬಾಕಿ ಇದೆ. ಅವರು ನೋಡಿ ಅಂತಿಮಗೊಳಿಸಿದ ಬಳಿಕ ಸಿನಿಮಾ ಬಿಡುಗಡೆ ದಿನಾಂಕ ಘೋಷಿಸುತ್ತೇವೆ. ಶೀಘ್ರದಲ್ಲಿಯೇ ತೆರೆಗೆ ಬರುವುದು ಖಚಿತ.
ಕೆ.ಪಿ. ಶ್ರೀಕಾಂತ್‌ ನಿರ್ಮಾಪಕ
ಬಿಡುಗಡೆಯಾದ ದಿನವೇ ಹಬ್ಬ!
‘ಕನ್ನಡದಲ್ಲಿ ಸದ್ಯ ಇರುವುದೇ ನಾಲ್ಕಾರು ಸ್ಟಾರ್‌ಗಳು. ಅವರು ವರ್ಷಕ್ಕೆರಡು ಸಿನಿಮಾ ಮಾಡುತ್ತಿಲ್ಲ. ಕೆಲ ನಟರು ಎರಡು ವರ್ಷಕ್ಕೊಂದು ಸಿನಿಮಾ ಮಾಡುತ್ತಿದ್ದಾರೆ! ಸಿನಿಮಾಗಳೇ ಇಲ್ಲದಿದ್ದರೆ ಬಿಡುಗಡೆ ಮಾತು ಎಲ್ಲಿಂದ? ಹಿಂದೆ ವರ್ಷಕ್ಕೆ ಸ್ಟಾರ್‌ಗಳದ್ದೇ 15–20 ಸಿನಿಮಾಗಳು ಇರುತ್ತಿದ್ದವು. ಹೀಗಾಗಿ ಹಬ್ಬವೆಂಬುದು ಚಿತ್ರರಂಗಕ್ಕೂ ಹಬ್ಬವಾಗಿತ್ತು. ಈಗ ತಮ್ಮ ಸಿನಿಮಾ ಬಿಡುಗಡೆಯಾದ ದಿನವೇ ಹಬ್ಬ ಎಂದು ಸ್ಟಾರ್‌ ನಟರು ಭಾವಿಸಿದಂತಿದೆ. ಹೀಗಾಗಿ ಆ ಜಾಗಕ್ಕೆ ಬೇರೆ ಭಾಷೆಯ ಸ್ಟಾರ್‌ಗಳು ಬಂದು ಕುಳಿತುಕೊಳ್ಳುವುದು ಸಹಜ’ ಎನ್ನುತ್ತಾರೆ ಮಾರ್ಸ್‌ ಸುರೇಶ್‌. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.