ಬೆಂಗಳೂರು: ಕನ್ನಡದನಟ ಶಿವರಾಂ (84) ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಬೆಂಗಳೂರಿನ ಸೀತಾ ಸರ್ಕಲ್ ಸಮೀಪದ ಪ್ರಶಾಂತ್ ಆಸ್ಪತ್ರೆಯಲ್ಲಿ ಶಿವರಾಂ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ಅವರ ಮಿದುಳಿಗೆ ಹಾನಿಯಾಗಿರುವುದಾಗಿ ವೈದ್ಯರು ತಿಳಿಸಿದ್ದು, ಜೀವ ರಕ್ಷಕದ ನೆರವಿನಿಂದ ಚಿಕಿತ್ಸೆ ನೀಡಲಾಗುತ್ತಿದೆ.
ಶಿವರಾಂ ಅವರು ಕನ್ನಡದ ಹಲವು ಸಿನಿಮಾ ಮತ್ತು ಕಿರುತೆರೆಯ ಕಾರ್ಯಕ್ರಮಗಳಲ್ಲಿ ನಟಿಸಿದ್ದರು.
ಇತ್ತೀಚೆಗೆ ಕೆ.ಆರ್. ರಸ್ತೆಯ ಬಳಿ ಕಾರು ಅಪಘಾತ ಸಂಭವಿಸಿತ್ತು. ಅದಾದ ನಂತರ ಆಘಾತಕ್ಕೊಳಗಾಗಿದ್ದ ಶಿವರಾಂ, ಬನಶಂಕರಿಯ ತಮ್ಮ ನಿವಾಸದ ಕೊಠಡಿ ಸೇರಿ ಏಕಾಂತದಲ್ಲಿದ್ದ ಅವರು, ಬಹಳ ಹೊತ್ತಾದರೂ ಹೊರಬಂದಿರಲಿಲ್ಲ. ಜತೆಗೆ ಕೊಠಡಿಯ ಒಳ ಭಾಗದಲ್ಲಿ ಬೀಗ ಹಾಕಿಕೊಂಡಿದ್ದರು.
ಅವರು ಬೀಗ ತೆಗೆಯದೇ ಇದ್ದಾಗ, ನಕಲಿ ಕೀಲಿ ಬಳಸಿ ಕುಟುಂಬದ ಸದಸ್ಯರು ಬೀಗ ತೆರೆದು ನೋಡಿದಾಗ, ಶಿವರಾಂ ಕುಸಿದು ಬಿದ್ದ ಸ್ಥಿತಿಯಲ್ಲಿ ಇದ್ದರು. ತಲೆಗೆ ಏಟಾಗಿ, ಮೂಗಿನಿಂದ ರಕ್ತ ಸೋರುತ್ತಿತ್ತು.
ತಕ್ಷಣವೇ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಚಿಕಿತ್ಸೆ ಮುಂದುವರಿದಿದೆ. ಅವರ ಆರೋಗ್ಯ ಸ್ಥಿತಿ ಗಂಭೀರವಾಗಿಯೇ ಇದೆ. ಹಿರಿಯ ನಟರು ಈಗಾಗಲೇ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ.
ಶಸ್ತ್ರ ಚಿಕಿತ್ಸೆ ಅಸಾಧ್ಯ ಎಂದ ವೈದ್ಯರು
ಮೂರು ದಿನಗಳ ಹಿಂದೆ ಅಯ್ಯಪ್ಪ ಸ್ವಾಮಿ ಪೂಜೆ ಮಾಡುತ್ತಿದ್ದಾಗ ಶಿವರಾಂಕುಸಿದುಬಿದ್ದಿದ್ದರು. ಪ್ರತಿಷ್ಠಿತ ಆಸ್ಪತ್ರೆಯ ವೈದ್ಯರೂ,ಮಿದುಳು ಸಂಕುಚಿತಗೊಂಡಿರುವುದರಿಂದ ಮತ್ತು ವಯಸ್ಸಿನ ಕಾರಣದಿಂದ ಶಸ್ತ್ರಚಿಕಿತ್ಸೆ ಅಸಾಧ್ಯ ಎಂದಿದ್ದಾರೆ. ಹೀಗಾಗಿ ಪ್ರಶಾಂತ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಮುಂದುವರಿದಿದೆ ಎಂದು ಅವರ ವೈದ್ಯ, ಕುಟುಂಬದ ಆತ್ಮೀಯರಾದ ಡಾ.ಮೋಹನ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.