2022 ಕನ್ನಡ ಚಿತ್ರರಂಗ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಹಲವು ಹಿಟ್ ಚಿತ್ರಗಳನ್ನು ನೀಡಿದ ವರ್ಷ. ಕೋವಿಡ್‌ನಿಂದ ಕಳೆದುಕೊಂಡ ಎರಡು ವರ್ಷಗಳನ್ನು ಸ್ಯಾಂಡಲ್‌ವುಡ್ ಈ ವರ್ಷ ಸಂಪೂರ್ಣ ಬಳಕೆ ಮಾಡಿಕೊಂಡಿದೆ. ‘ಕೆ.ಜಿ.ಎಫ್–2’, ‘777 ಚಾರ್ಲಿ’, ‘ಕಾಂತಾರ’ ಹೀಗೆ ಕೆಲವು ಸಿನಿಮಾಗಳ ಓಟಕ್ಕೆ ಚಿತ್ರರಂಗವೇ ಮೈಕೊಡವಿ ಎದ್ದುನಿಂತಿದೆ. ಇದೀಗ ವರ್ಷಾಂತ್ಯಕ್ಕೂ ಸಾಲು ಸಾಲು ಸಿನಿಮಾಗಳು ಬಿಡುಗಡೆಗೆ ಸಜ್ಜಾಗಿವೆ.
ಡಿಸೆಂಬರ್ ವಾರಾಂತ್ಯ ಸಿನಿಮಾ ಬಿಡುಗಡೆಗೆ ಲಕ್ಕಿವೀಕ್ ಎನ್ನುವ ಮಾತು ಗಾಂಧಿನಗರದಲ್ಲಿದೆ. ಅದರಂತೆ ಈಗಾಗಲೇ ಎರಡು ಸಿನಿಮಾಗಳು ಈ ದಿನಾಂಕಗಳನ್ನು ಫಿಕ್ಸ್ ಮಾಡಿಕೊಂಡಿವೆ.
ಯೋಗರಾಜ್ ಭಟ್ ಅವರ ಮಾರ್ಗದರ್ಶನದಲ್ಲಿ, ಅವರದ್ದೇ ನಿರ್ಮಾಣ ಸಂಸ್ಥೆ ಯೋಗರಾಜ್ ಸಿನಿಮಾಸ್ ಹಾಗೂ ರವಿ ಶಾಮನೂರ್ ಫಿಲಂಸ್ ಬ್ಯಾನರ್‌ನಲ್ಲಿ ಸಿದ್ಧವಾಗಿರುವ ಯೂಥ್‌ಫುಲ್ ಲವ್ ಸ್ಟೋರಿ ‘ಪದವಿ ಪೂರ್ವ’ ಡಿ.30ಕ್ಕೆ ರಿಲೀಸ್ ಆಗಲಿದೆ. ಯೋಗರಾಜ್ ಭಟ್ ಅವರ ಗರಡಿಯಲ್ಲಿ ಪಳಿಗಿದ ಹರಿಪ್ರಸಾದ್ ಜಯಣ್ಣ ಮೊದಲ ಬಾರಿಗೆ ನಿರ್ದೇಶಕರ ಕ್ಯಾಪ್ ತೊಟ್ಟು ಈ ಸಿನಿಮಾಗೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ.
ಹೊಸಬರ ದಂಡೇ ಇರುವ ಈ ಚಿತ್ರಕ್ಕೆ ಪೃಥ್ವಿ ಶಾಮನೂರು ನಾಯಕನಾದರೆ, ಅಂಜಲಿ ಅನೀಶ್ ಮತ್ತು ಯಶ ಶಿವಕುಮಾರ್ ನಾಯಕಿಯಾಗಿ ಅಭಿನಯಿಸಿದ್ದಾರೆ. ಉಳಿದಂತೆ ಶರತ್ ಲೋಹಿತಾಶ್ವ, ರಂಗಾಯಣ ರಘು, ‘ರಾಮಾರಾಮಾರೇ’ ಖ್ಯಾತಿಯ ನಟರಾಜ್ ಭಟ್ ತಾರಾಗಣದಲ್ಲಿದ್ದು, ಯೋಗರಾಜ್ ಭಟ್, ನಟಿ ಅದಿತಿ ಪ್ರಭುದೇವ, ದಿವ್ಯ ಉರುಡುಗ, ‘ಕಾಮಿಡಿ ಕಿಲಾಡಿ’ ನಯನ, ಶ್ರೀ ಮಹದೇವ್ ಅತಿಥಿ ಪಾತ್ರದಲ್ಲಿ ಈ ಚಿತ್ರದಲ್ಲಿದ್ದಾರೆ.
‘ಪದವಿಪೂರ್ವ’ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನಿರ್ದೇಶನವಿದ್ದು, ಯೋಗರಾಜ್ ಭಟ್ ಸಾಹಿತ್ಯವಿದೆ. ಛಾಯಾಗ್ರಾಹಕ ಸಂತೋಷ್ ರೈ ಪಾತಾಜೆ ಛಾಯಾಗ್ರಹಣ, ಮಧು ತುಂಬಕೆರೆಯ ಸಂಕಲನ ಚಿತ್ರಕ್ಕಿದೆ.
‘ಜಮಾಲಿಗುಡ್ಡ’ದಲ್ಲಿ ಸಿಗ್ತಾರೆ ‘ಡಾಲಿ’!
ಸ್ಯಾಂಡಲ್‌ವುಡ್‌ನಲ್ಲಿ ಅತಿ ಹೆಚ್ಚು ಸಿನಿಮಾ ಬ್ಯಾಂಕ್ ಹೊಂದಿರುವ ನಟರ ಪೈಕಿ ‘ಡಾಲಿ’ ಧನಂಜಯ ಮುಂಚೂಣಿಯಲ್ಲಿದ್ದಾರೆ. ‘ಬೈರಾಗಿ’, ‘ಮಾನ್ಸೂನ್ ರಾಗ’, ‘ತೋತಾಪುರಿ’, ‘ಹೆಡ್‌ಬುಷ್’ ಸಿನಿಮಾಗಳ ಬಳಿಕ ಇದೇ ವರ್ಷ ಧನಂಜಯ ನಟನೆಯ ‘Once upon a time in ಜಮಾಲಿಗುಡ್ಡ’ ಕೂಡಾ ಬಿಡುಗಡೆಗೆ ಸಜ್ಜಾಗಿದೆ. ಈ ಸಿನಿಮಾವೂ ಡಿ.30ರಂದು ತೆರೆಕಾಣಲಿದೆ.
ತನ್ನ ವಿಭಿನ್ನ ಮೇಕಿಂಗ್, ಹಾಡು ಹಾಗೂ ಶೀರ್ಷಿಕೆಯಿಂದಲೇ ಈ ಸಿನಿಮಾ ಸದ್ದು ಮಾಡುತ್ತಿದೆ. ಸಾಲು ಸಾಲು ಆ್ಯಕ್ಷನ್ ಹಾಗೂ ರೊಮ್ಯಾಂಟಿಕ್ ಸಿನಿಮಾಗಳಲ್ಲಿ ಕಾಣಿಸಿಕೊಂಡಿರುವ ಧನಂಜಯ, ವಿಭಿನ್ನ ಪಾತ್ರದಲ್ಲಿ ಇಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದಿದೆ ಚಿತ್ರತಂಡ. ಚಿನ್ನದ ಹಲ್ಲೊಂದನ್ನು ಇಟ್ಟುಕೊಂಡು ನಗುತ್ತಿರುವ ಅವರ ವಿಭಿನ್ನ ಗೆಟ್‌ಅಪ್ ಈಗಾಗಲೇ ವೈರಲ್ ಆಗಿದೆ. ಚಿತ್ರದ ಟೀಸರ್ ನ.29ರಂದು ಸಂಜೆ ಬಿಡುಗಡೆಯಾಗಲಿದೆ.
ಕನ್ನಡ ಹಾಗೂ ತೆಲುಗಿನಲ್ಲಿ ತೆರೆಗೆ ಬರುತ್ತಿರುವ ಈ ಸಿನಿಮಾದಲ್ಲಿ ಧನಂಜಯ ಅವರಿಗೆ ನಟಿ ಅದಿತಿ ಪ್ರಭುದೇವ ಜೋಡಿಯಾಗಿದ್ದಾರೆ. ಬಾಲ ಕಲಾವಿದೆ ಪ್ರಾಣ್ಯ ರಾವ್, ಭಾವನಾ ರಾಮಯ್ಯ ಮುಂತಾದವರು ತಾರಾಬಳಗದಲ್ಲಿದ್ದಾರೆ. ಕುಶಾಲ್ ಗೌಡ ನಿರ್ದೇಶನದಲ್ಲಿ ಸಿದ್ಧವಾಗಿರುವ ಈ ಸಿನಿಮಾಕ್ಕೆ ಅರ್ಜುನ್ ಜನ್ಯ ಸಂಗೀತ ನಿರ್ದೇಶನವಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.