ADVERTISEMENT

ಚಂದನವನಕ್ಕೆ ಶ್ರೀಲಂಕಾ ಬೆಡಗಿ ಜಾಕ್ವೆಲಿನ್ ಫರ್ನಾಂಡಿಸ್

ಅಭಿಲಾಷ್ ಪಿ.ಎಸ್‌.
Published 23 ಜುಲೈ 2021, 2:22 IST
Last Updated 23 ಜುಲೈ 2021, 2:22 IST
ಜಾಕ್ವೆಲಿನ್ ಫರ್ನಾಂಡಿಸ್ ಹಾಗೂ ಸುದೀಪ್‌
ಜಾಕ್ವೆಲಿನ್ ಫರ್ನಾಂಡಿಸ್ ಹಾಗೂ ಸುದೀಪ್‌   

ಬಾಲಿವುಡ್‌ನಲ್ಲಿ ‘ಏಕ್‌ ದೊ ತೀನ್‌’...‘ಚಿಟಿಯಾ ಕಲೈಂಯಾವೆ’ ಎನ್ನುತ್ತಾ ಹೆಜ್ಜೆಹಾಕಿ ಪ್ರೇಕ್ಷಕರ ಮನಗೆದ್ದಿದ್ದ ಶ್ರೀಲಂಕಾ ಬೆಡಗಿ ಜಾಕ್ವೆಲಿನ್ ಫರ್ನಾಂಡಿಸ್, ‘ವಿಕ್ರಾಂತ್‌ ರೋಣ’ ಮುಖಾಂತರ ಚಂದನವನಕ್ಕೆ ಹೆಜ್ಜೆ ಇಟ್ಟಿದ್ದಾರೆ. ಬಂದಿದ್ದು ಏಳು ದಿನಗಳ ಚಿತ್ರೀಕರಣಕ್ಕಾದರೂ ಕನ್ನಡವನ್ನು ಕಲಿತು, ‘ಕನ್ನಡಿಗರಿಗೆ ನಮಸ್ಕಾರ’ ಎಂದಿದ್ದಾರೆ.

ನಟ ಕಿಚ್ಚ ಸುದೀಪ್‌ ನಟನೆಯ ಪ್ಯಾನ್ ಇಂಡಿಯಾ ಬಿಗ್‌ಬಜೆಟ್‌ ಚಿತ್ರ ‘ವಿಕ್ರಾಂತ್‌ ರೋಣ’ ಅದ್ಧೂರಿಯಾಗಿ ತೆರೆಯ ಮೇಲೆ ಬರಲು ಸಜ್ಜಾಗಿದೆ. ಅನೂಪ್‌ ಭಂಡಾರಿ ನಿರ್ದೇಶನದ ಈ ಚಿತ್ರದಲ್ಲಿ ನಿರೂಪ್‌ ಭಂಡಾರಿ ಹಾಗೂ ನೀತಾ ಅಶೋಕ್‌ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ಈಗಾಗಲೇ ಚಿತ್ರೀಕರಣ ಪೂರ್ಣಗೊಂಡು, ಸುದೀಪ್‌ ಅವರ ಡಬ್ಬಿಂಗ್‌ ಕೂಡಾ ಮುಗಿದಿದೆ. ಚಿತ್ರೀಕರಣದ ಕೊನೆಯ ಹಂತದಲ್ಲಿ ಜಾಕ್ವೆಲಿನ್ ಹಾಗೂ ಸುದೀಪ್‌ ಅವರ ನೃತ್ಯದ ಭಾಗವನ್ನು ಇತ್ತೀಚೆಗೆ ಚಿತ್ರತಂಡವು ಚಿತ್ರೀಕರಿಸಿಕೊಂಡಿದ್ದು, ಅದ್ಧೂರಿಯಾಗಿ ಇದು ಮೂಡಿಬಂದಿದೆ.

₹5 ಕೋಟಿ ವೆಚ್ಚ: ಜಾನಿ ಮಾಸ್ಟರ್‌ ನೃತ್ಯ ನಿರ್ದೇಶನದಲ್ಲಿ 300 ಡ್ಯಾನ್ಸರ್‌ ನಡುವೆ, ಬೃಹತ್‌ ಸೆಟ್‌ನಲ್ಲಿ ಜಾಕ್ವೆಲಿನ್ ಹಾಗೂ ಸುದೀಪ್‌ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಈ ಅದ್ಧೂರಿ ಹಾಡಿನ ಚಿತ್ರೀಕರಣಕ್ಕೇ ₹5 ಕೋಟಿ ವ್ಯಯಿಸಲಾಗಿದೆ ಎನ್ನುತ್ತಾರೆ ನಿರ್ಮಾಪಕ ಜಾಕ್‌ ಮಂಜು.

ADVERTISEMENT

‘ಹೌಸ್‌ಫುಲ್‌’ ಸರಣಿ, ‘ರಾಯ್‌’, ‘ರೇಸ್‌–2’, ‘ಡಿಶ್ಯುಂ’ ಮುಂತಾದ ಹಿಟ್‌ ಚಿತ್ರಗಳಲ್ಲಿ ನಾಯಕಿಯಾಗಿ ನಟಿಸಿದ್ದ ಜಾಕ್ವೆಲಿನ್, ‘ಭಾಗಿ–2’ ಚಿತ್ರದಲ್ಲಿ ‘ಏಕ್‌ ದೊ ತೀನ್‌’, ‘ಹೌಸ್‌ಫುಲ್‌’ನಲ್ಲಿ ‘ಆಪ್‌ ಕ್ಯಾ ಹೋಗ’ ಮುಂತಾದ ಐಟಂ ಹಾಡಿನಲ್ಲಿ ಮೈಬಳುಕಿಸಿದ್ದರು. ಚಂದನವನಕ್ಕೆ ಕಾಲಿಟ್ಟ ಬಗ್ಗೆ ಮನದಾಳ ಹಂಚಿಕೊಂಡಿರುವ ಜಾಕ್ವೆಲಿನ್, ‘ಊರಲ್ಲಿ ಇವತ್ತು ಇವರೊಬ್ಬರದ್ದೇ ಹೆಸರು ಚಾಲ್ತಿಯಲ್ಲಿದೆ. ವಿಕ್ರಾಂತ್‌ ರೋಣ. ನನ್ನನ್ನು ಆತ್ಮೀಯವಾಗಿ ಬರಮಾಡಿಕೊಂಡ ಕನ್ನಡ ಪ್ರೇಕ್ಷಕರಿಗೆ ಧನ್ಯವಾದ. ನಾನು ಮತ್ತೊಮ್ಮೆ ಭೇಟಿ ನೀಡಲು ಇಚ್ಛಿಸುವ ಸ್ಥಳ ಬೆಂಗಳೂರು. ಹೌದು, ನಾನು ವಿಕ್ರಾಂತ್‌ ರೋಣ ಸಿನಿಮಾದಲ್ಲಿ ವಿಶೇಷ ಪಾತ್ರವೊಂದನ್ನು ಮಾಡುತ್ತಿದ್ದೇನೆ. ಚಿತ್ರದಲ್ಲಿ ನಾನು ಹೇಗೆ ಕಾಣಿಸಿಕೊಳ್ಳುತ್ತಿದ್ದೇನೆ ಎನ್ನುವುದನ್ನು ಪ್ರೇಕ್ಷಕರ ಮುಂದಿಡಲು ಕಾತುರದಿಂದಿದ್ದೇನೆ. ಸುದೀಪ್‌ ಅವರ ಜೊತೆಗಿನ ನಟನೆಯ ಅನುಭವ ಬಹುಕಾಲ ನೆನಪಿನಲ್ಲಿ ಉಳಿಯುವಂತಹದು’ ಎಂದಿದ್ದಾರೆ.

ಪಾತ್ರಕ್ಕೂ ಒಪ್ಪಿಕೊಂಡಿದ್ದ ಜಾಕ್ವೆಲಿನ್: ‘ಪಾತ್ರ ಹಾಗೂ ನೃತ್ಯ ಎರಡನ್ನೂ ಒಳಗೊಂಡು ಯಾರನ್ನು ಕರೆತರಬಹುದು ಎಂದು ಯೋಚಿಸಿದಾಗ ಹಲವು ಹೆಸರುಗಳು ನಮ್ಮ ಮುಂದೆ ಇದ್ದವು. ಒಂದಿಬ್ಬರು ಕೇವಲ ನೃತ್ಯಕ್ಕಷ್ಟೇ ಬರಲು ಸಿದ್ಧವಿದ್ದರು. ಇಲ್ಲಿಯವರೆಗೂ ದಕ್ಷಿಣ ಭಾರತದ ಚಿತ್ರಗಳಲ್ಲಿ ನಟಿಸದೇ ಇರುವವರ ಪೈಕಿ ಯಾರು ಆಗಬಹುದು ಎಂದು ಚಿಂತಿಸಿ ಜಾಕ್ವೆಲಿನ್ ಫರ್ನಾಂಡಿಸ್‌ ಅವರನ್ನು ಅಂತಿಮಗೊಳಿಸಿದೆವು. ಪ್ಯಾನ್‌ ಇಂಡಿಯಾ ಸಿನಿಮಾ ಆಗಿರುವುದರಿಂದ ಎಲ್ಲ ರೀತಿಯಲ್ಲೂ ಇವರು ಸೂಕ್ತ ಎಂದುಕೊಂಡೆವು. ಚಿತ್ರೀಕರಣಕ್ಕೆ ಆಗಮಿಸುವ ಮುನ್ನವೇ ತಮ್ಮ ಸಂಭಾಷಣೆಗಳನ್ನು ಕಲಿತು, ಚಾಚೂ ತಪ್ಪದೆ ನಟಿಸಿದವರು ಜ್ಯಾಕಲೀನ್‌. ಚಿತ್ರಕ್ಕೆ ಡಬ್ಬಿಂಗ್‌ ಕೂಡಾ ಅವರೇ ಮಾಡಲಿದ್ದಾರೆ’ ಎಂದು ಮಂಜು ಹೇಳುತ್ತಾರೆ.

‘ಕನ್ನಡ ಚಿತ್ರರಂಗ ಇವತ್ತು ಬಹಳಷ್ಟು ಬೆಳೆದಿದೆ. ಇದಕ್ಕೆ ಎಲ್ಲರೂ ಕೊಡುಗೆ ನೀಡುತ್ತಿದ್ದೇವೆ. ನಾವು ಅದ್ಧೂರಿಯಾಗಿ ಸಿನಿಮಾ ಮಾಡದೇ ಹೋದಲ್ಲಿ, ಜನರು ಬೇರೆಯ ಹಿಂದಿ, ತೆಲುಗು ಚಿತ್ರಕ್ಕೆ ಹೋಲಿಸಲು ಆರಂಭಿಸುತ್ತಾರೆ. ಇದಕ್ಕಾಗಿ ‘ವಿಕ್ರಾಂತ್‌ ರೋಣ’ದಂತಹ ಒಳ್ಳೆ ಕಥೆ ಸಿಕ್ಕಿದಾಗ ಬಂಡವಾಳದ ಬಗ್ಗೆ ನಾನು ಯೋಚಿಸಲಿಲ್ಲ’ ಎಂದು ವಿವರಿಸುತ್ತಾರೆ.

‘ಚಿತ್ರೀಕರಣ ಮುಗಿಸಿ ತೆರಳುವಾಗ ನಮ್ಮ ಬ್ಯಾನರ್‌ನಲ್ಲಿ ಮತ್ತೊಂದು ಪ್ಯಾನ್‌ ಇಂಡಿಯಾ ಸಿನಿಮಾ ಅಥವಾ ಕನ್ನಡ ಸಿನಿಮಾವಷ್ಟೇ ಇದ್ದರೂ ನಟಿಸುವ ಅಭಿಲಾಷೆಯನ್ನೂ ಜಾಕ್ವೆಲಿನ್ ವ್ಯಕ್ತಪಡಿಸಿದ್ದಾರೆ. ಯಾವುದೇ ಅಹಂಕಾರ ಇಲ್ಲದೇ, ಐದು ದಿನ ನೃತ್ಯದ ಚಿತ್ರೀಕರಣ ಹಾಗೂ ಎರಡು ದಿನ ಪಾತ್ರದ ಚಿತ್ರೀಕರಣದಲ್ಲಿ ಬೆಳಗ್ಗೆ 9 ರಿಂದ ರಾತ್ರಿ 9.30ರವರೆಗೂ ದಣಿವಿಲ್ಲದೆ ಸತತವಾಗಿ ಭಾಗವಹಿಸಿದವರು ಜಾಕ್ವೆಲಿನ್’ ಎಂದು ಮಂಜು ನೆನಪಿಸಿಕೊಳ್ಳುತ್ತಾರೆ.

ಮೂರು ತಿಂಗಳು ವಿಳಂಬ: ‘ವಿಕ್ರಾಂತ್‌ ರೋಣ’ ಆಗಸ್ಟ್‌ 19ಕ್ಕೆ ಬಿಡುಗಡೆಯಾಗಲಿದೆ ಎಂದು ನಾವು ತೀರ್ಮಾನಿಸಿದ ಸಂದರ್ಭದಲ್ಲಿ ‘ಕೋಟಿಗೊಬ್ಬ–3’ ಏಪ್ರಿಲ್‌ನಲ್ಲಿ ಬಿಡುಗಡೆಯಾಗಬೇಕಿತ್ತು. ಲಾಕ್‌ಡೌನ್‌ ಬಂದ ಕಾರಣ, ‘ಕೋಟಿಗೊಬ್ಬ–3’ ಬಿಡುಗಡೆ ವಿಳಂಬವಾಗಿದೆ. ಈಗಾಗಲೇ ಸುದೀಪ್‌ ಅವರು ಈ ಚಿತ್ರದ ಡಬ್ಬಿಂಗ್‌ನಲ್ಲಿ ಇದ್ದಾರೆ. ‘ಕೋಟಿಗೊಬ್ಬ–3’ ಬಿಡುಗಡೆಯಾದ 2–3 ತಿಂಗಳ ನಂತರ ‘ವಿಕ್ರಾಂತ್‌ ರೋಣ’ ತೆರೆ ಕಾಣಲಿದೆ. ಈ ಚಿತ್ರ 2ಡಿ ಹಾಗೂ 3ಡಿಯಲ್ಲಿ ಪ್ರೇಕ್ಷಕರ ಮುಂದೆ ಬರಲಿದ್ದು, ಸ್ವತಃ ಸುದೀಪ್‌ ಅವರೇ ಕನ್ನಡದ ಜೊತೆಗೆ, ಹಿಂದಿ, ತಮಿಳು, ತೆಲುಗು ಹಾಗೂ ಇಂಗ್ಲಿಷ್‌ನ ಡಬ್ಬಿಂಗ್‌ ಮಾಡಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.