ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸುತ್ತಿರುವ ‘ಕಾಂತಾರ–ಒಂದು ದಂತಕಥೆ’ಯ ಮೊದಲ ಅಧ್ಯಾಯದ (ಪ್ರೀಕ್ವೆಲ್) ಚಿತ್ರೀಕರಣ ಭರದಿಂದ ಸಾಗಿದೆ. ರಿಷಬ್ ಕರಾವಳಿಯಲ್ಲಿ ಬೀಡುಬಿಟ್ಟಿದ್ದಾರೆ. ಸಿನಿಮಾ ರಿಲೀಸ್‌ಗೂ ಮುನ್ನವೇ ದೊಡ್ಡ ಮೊತ್ತಕ್ಕೆ ಪ್ರೈಂ ವಿಡಿಯೊಗೆ ಮಾರಾಟವಾಗಿದೆ. ಆ ಕುರಿತು ಅವರು ಮಾತಿಗೆ ಸಿಕ್ಕರು...
ರಿಷಬ್ ಶೆಟ್ಟಿ ನಟಿಸಿ ನಿರ್ದೇಶಿಸುತ್ತಿರುವ ‘ಕಾಂತಾರ–ಒಂದು ದಂತಕಥೆ’ಯ ಮೊದಲ ಅಧ್ಯಾಯದ (ಪ್ರೀಕ್ವೆಲ್) ಚಿತ್ರೀಕರಣ ಭರದಿಂದ ಸಾಗಿದೆ. ರಿಷಬ್ ಕರಾವಳಿಯಲ್ಲಿ ಬೀಡುಬಿಟ್ಟಿದ್ದಾರೆ. ಸಿನಿಮಾ ರಿಲೀಸ್‌ಗೂ ಮುನ್ನವೇ ದೊಡ್ಡ ಮೊತ್ತಕ್ಕೆ ಪ್ರೈಂ ವಿಡಿಯೊಗೆ ಮಾರಾಟವಾಗಿದೆ. ‘ಶಿವಮ್ಮ’ ಚಿತ್ರದ ಪ್ರಚಾರಕ್ಕಾಗಿ ಕರಾವಳಿಯಿಂದ ಬೆಂಗಳೂರಿಗೆ ಮರಳಿದ್ದ ರಿಷಬ್, ಚಿತ್ರೀಕರಣದ ಅನುಭವಗಳನ್ನು ಹಂಚಿಕೊಂಡರು.
‘ಕಾಂತಾರ’ ರೀತಿಯ ಕಥೆ ಇದ್ದಾಗ ಅದನ್ನು ಬರೆದು ಮುಗಿಸಲು ಒಂದು ವರ್ಷ ತೆಗೆದುಕೊಂಡೆ. ಮೊದಲ ಸಿನಿಮಾಗಿಂತ ಹೆಚ್ಚು ಸಂಶೋಧನೆ ಇದಕ್ಕೆ ಬೇಕಿತ್ತು. ಇದೊಂದು ದೊಡ್ಡ ಪ್ರಾಜೆಕ್ಟ್. ಪ್ರತಿದಿನದ ಸಭೆಗಳು, ಅದರಲ್ಲಿನ ಹಲವು ಸಲಹೆಗಳು, ಚರ್ಚೆಗಳು, ಬೃಹತ್ ಸೆಟ್‌ಗಳು..ಹೀಗೆ ಸಮಯ ಹೆಚ್ಚು ಹಿಡಿಯುತ್ತಿದೆ. ‘ಕಾಂತಾರ’ ಮೊದಲ ಭಾಗ ಮಾಡುವಾಗ ಮೂರ್ನಾಲ್ಕು ತಿಂಗಳಲ್ಲಿ ಬರೆದು ಮುಗಿಸಿದ್ದೆ. 2021ರ ಆಗಸ್ಟ್‌ನಲ್ಲಿ ಮುಹೂರ್ತ ನಡೆಸಿ, 2021ರ ಸೆಪ್ಟೆಂಬರ್‌ನಲ್ಲಿ ಶೂಟಿಂಗ್ ಆರಂಭಿಸಿ 2022ರ ಸೆಪ್ಟೆಂಬರ್‌ನಲ್ಲಿ ಅದನ್ನು ಬಿಡುಗಡೆಗೊಳಿಸಿದ್ದೆವು. ಪ್ರೀಕ್ವೆಲ್‌ನಂತಹ ಪ್ರಾಜೆಕ್ಟ್ ನನಗೂ ಹೊಸ ಅನುಭವ. ದೈಹಿಕವಾಗಿಯೂ ಹಲವು ಮಾರ್ಪಾಡುಗಳನ್ನು ಮಾಡಿಕೊಳ್ಳಬೇಕಿತ್ತು. ಸಿನಿಮಾಗಾಗಿ ಹತ್ತು ಕೆ.ಜಿ. ಏರಿಸಿಕೊಂಡು, ಎಂಟು ಕೆ.ಜಿ. ಇಳಿಸಿಕೊಂಡಿದ್ದೇನೆ. ಸಿನಿಮಾದಲ್ಲಿ ಹೆಚ್ಚಿನ ಪ್ರಮಾಣದ ಆ್ಯಕ್ಷನ್ಸ್ ಇದ್ದು, ಕಳೆದೊಂದು ವರ್ಷದಿಂದ ಕಳರಿಪಯಟ್ಟು ತರಬೇತಿ ಪಡೆದಿದ್ದೇನೆ. ಈ ಆವೃತ್ತಿಯಲ್ಲಿ ಕಂಬಳ ಇರುವುದಿಲ್ಲ. ಒಂದೊಂದು ಫ್ಯಾಕ್ಟರಿ ರೀತಿ ಸೆಟ್‌ನೊಳಗೆ ಕೆಲಸ ನಡೆಯುತ್ತಿದೆ. ಪತ್ನಿ ಪ್ರಗತಿ ತನ್ನದೇ ಆದ ವಸ್ತ್ರವಿನ್ಯಾಸದ ಫ್ಯಾಕ್ಟರಿ ನಡೆಸುತ್ತಿದ್ದಾಳೆ’ ಎಂದರು ರಿಷಬ್.
‘ಸದ್ಯ ‘ಕಾಂತಾರ’ ಪ್ರೀಕ್ವೆಲ್‌ನ ಚಿತ್ರೀಕರಣ ಆರಂಭಿಸಿದ್ದೇವೆ. ಒಂದು ಹಂತದ ಚಿತ್ರೀಕರಣ ಪೂರ್ಣಗೊಂಡಿದೆ. ಕೆಲ ದಿನಗಳ ಹಿಂದಷ್ಟೇ ಒಂದು ಪ್ರಮುಖ ಫೈಟ್ ಶೂಟಿಂಗ್ ಆಗಿದೆ. ಬೆಳಗಿನ ಜಾವ 3.30ಕ್ಕೆ ಮನೆ ಬಿಟ್ಟು ಸೆಟ್ ಸೇರಿಕೊಂಡು, ಮೇಕಪ್ ಬಳಿಕ 6 ರಿಂದ ಶೂಟಿಂಗ್ ಆರಂಭಿಸಿ ರಾತ್ರಿ 9ಕ್ಕೆ ಮನೆಗೆ ಮರಳುತ್ತಿದ್ದೇನೆ. ಶೂಟಿಂಗ್‌ಗೇ ನೂರಕ್ಕೂ ಅಧಿಕ ದಿನ ಬೇಕು’ ಎಂದು ಮಾಹಿತಿ ನೀಡಿದರು.
‘ಒತ್ತಡವಿಲ್ಲ’:
‘ನಾನು ಪ್ಯಾನ್ ಇಂಡಿಯಾ ಸಿನಿಮಾ ಮಾಡುತ್ತಿದ್ದೇನೆ ಎಂದು ತಲೆಕೆಡಿಸಿಕೊಳ್ಳುತ್ತಿಲ್ಲ. ಒತ್ತಡವಿಲ್ಲದೆ ಕೆಲಸ ಮಾಡುತ್ತಿದ್ದೇನೆ. ಪ್ಯಾನ್ ಇಂಡಿಯಾ ಎಂದರೆ ಬೇರೆ ಬೇರೆ ರಾಜ್ಯದ ನಟರನ್ನು ಹಾಕಿಕೊಳ್ಳಲೇಬೇಕು ಎನ್ನುವುದರಲ್ಲಿ ನನಗೆ ನಂಬಿಕೆ ಇಲ್ಲ. ಪ್ರೇಕ್ಷಕರು ಸಿನಿಮಾ ನೋಡುವಾಗ ಅಲ್ಲಿ ಯಾವ ನಟರಿದ್ದರೇನು, ಆ ಪಾತ್ರ ಹೇಗೆ ನಟಿಸುತ್ತಿದೆ ಎನ್ನುವುದಷ್ಟೇ ಮುಖ್ಯ. ‘ಸರ್ಕಾರಿ..’ ಸಿನಿಮಾಗೆ ದುಡ್ಡು ಹಾಕುವವರೇ ಇರಲಿಲ್ಲ. ಅದು ಚಿತ್ರಮಂದಿರದಲ್ಲಿ ₹20 ಕೋಟಿ ಕಲೆಕ್ಷನ್ ಮಾಡಿತು. ರಾಷ್ಟ್ರ ಪ್ರಶಸ್ತಿಯೂ ಬಂತು. ಹೀಗಾಗಿ ಎಲ್ಲ ಸಿನಿಮಾಗಳೂ ದೊಡ್ಡ ಸಿನಿಮಾಗಳೇ’ ಎನ್ನುತ್ತಾರೆ ರಿಷಬ್.
‘ನೂರು ಕೋಟಿಗೂ ಅಧಿಕ ಮೊತ್ತಕ್ಕೆ ಪ್ರೈಂಗೆ ಕಾಂತಾರ ಪ್ರೀಕ್ವೆಲ್ ಮಾರಾಟವಾಗಿದೆಯೇ’ ಎಂಬ ಪ್ರಶ್ನೆಗೆ, ‘ಆ ನಂಬರ್ ಸುದ್ದಿಗೆ ನಾನು ಹೋಗುವುದಿಲ್ಲ. ದೊಡ್ಡ ಮೊತ್ತಕ್ಕೆ ಮಾರಾಟವಾಗಿದೆ ಎಂದಷ್ಟೇ ಹೇಳಬಲ್ಲೆ. ಈ ಮೊತ್ತವನ್ನು ನಾನು ಕನಸಿನಲ್ಲೂ ಊಹಿಸಿರಲಿಲ್ಲ’ ಎಂದರು ರಿಷಬ್.
‘ಒಟಿಟಿಗಳೇಕೆ ಕನ್ನಡ ಸಿನಿಮಾ ಖರೀದಿಸುತ್ತಿಲ್ಲ’ ಎಂಬ ಪ್ರಶ್ನೆಗೆ, ‘ಕಾಂತಾರ ಸಿನಿಮಾ ಬಿಡುಗಡೆಗೆ ಮುನ್ನವೇ ‘ಪೆದ್ರೊ’, ‘ಶಿವಮ್ಮ’ ಸಿದ್ಧವಾಗಿತ್ತು. ಇವೆರಡನ್ನೂ ಒಟಿಟಿಗೆ ಮಾರಾಟ ಮಾಡಲು ಆವಾಗಿನಿಂದಲೇ ಪ್ರಯತ್ನಿಸುತ್ತಿದ್ದೇನೆ. ಎಲ್ಲ ವೇದಿಕೆಗಳೂ ದೊಡ್ಡ ಕಮರ್ಷಿಯಲ್ ಸಿನಿಮಾಗಳನ್ನೇ ತೆಗೆದುಕೊಳ್ಳುತ್ತಿದ್ದವು. ವ್ಯವಹಾರದ ಕ್ಷೇತ್ರವಾಗಿರುವ ಕಾರಣ, ಸಿನಿಮಾ ತೆಗೆದುಕೊಳ್ಳಿ ಎಂದಷ್ಟೇ ಕೇಳಬಹುದು. ಮಲಯಾಳದವರು ಕನ್ನಡಕ್ಕಿಂತ ಮುನ್ನ ಒಟಿಟಿ ಮಾರುಕಟ್ಟೆಯನ್ನು ಸೆಟ್ ಮಾಡಿಕೊಂಡರು. ಕೇರಳದಲ್ಲಿ ಸರ್ಕಾರವೇ ಒಟಿಟಿ ಮಾಡುತ್ತಿದೆ. ಇದರಲ್ಲಿ ಮುಂದೆ ದೊಡ್ಡ ಕಮರ್ಷಿಯಲ್ ಸಿನಿಮಾಗಳೂ ಬರಬಹುದು. ನಮ್ಮಲ್ಲಿ ಈ ರೀತಿ ಮಾಡಲು ಶಂಕರ್‌ನಾಗ್ ಅವರು ಇದ್ದಿದ್ದರೆ ಸಾಧ್ಯವಿತ್ತೆನೋ’ ಎಂದರು.
‘ಚಂದನವನದಲ್ಲಿ ಹಲವು ಬಾರಿ ಈ ರೀತಿ ಲೋಫೇಸ್‌ಗಳನ್ನು ನೋಡಿದ್ದೇವೆ. ‘ಓಂ’, ‘ಜೋಗಿ’, ‘ಮುಂಗಾರು ಮಳೆ’ ಬರುವುದಕ್ಕೂ ಮುನ್ನ ಸ್ಥಿತಿ ಹೇಗಿತ್ತು ಎಂದು ಎಲ್ಲರಿಗೂ ಗೊತ್ತು. ‘ಶಿವಮ್ಮ’ನಿಗೆ ಬೆಂಗಳೂರು ಚಿತ್ರೋತ್ಸವದಲ್ಲಿ ಸಿಕ್ಕ ಪ್ರತಿಕ್ರಿಯೆ ನೋಡಿ ಸಿನಿಮಾ ಬಗ್ಗೆ ನಂಬಿಕೆ ಮೂಡಿಸಿದೆ. ಇದು ಹೆಚ್ಚು ತಲುಪಿದರೆ ಇಂತಹ ಸಿನಿಮಾಗಳು ಮತ್ತಷ್ಟು ಬರಬಹುದು’ ಎಂಬ ಭರವಸೆ ರಿಷಬ್ ಅವರದ್ದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.