ನಟ ರಿಷಬ್ ಶೆಟ್ಟಿ ನಟಿಸಿ ನಿರ್ದೇಶಿಸುತ್ತಿರುವ ‘ಕಾಂತಾರ’ ಸಿನಿಮಾ ಪ್ರೀಕ್ವೆಲ್ ಚಿತ್ರೀಕರಣ ಕುಂದಾಪುರದಲ್ಲಿ ನಡೆಯುತ್ತಿದ್ದು, ಸಿನಿಮಾ 2025ರ ಅಕ್ಟೋಬರ್ 2ರಂದು ಸಿನಿಮಾ ಬಿಡುಗಡೆಯಾಗಲಿದೆ ಎಂದು ಹೊಂಬಾಳೆ ಫಿಲಂಸ್ ತಿಳಿಸಿದೆ.
‘ಕಾಂತಾರ ಚಾಪ್ಟರ್ 1’ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ ಸೇರಿ ಇನ್ನೂ ಹಲವು ಭಾಷೆಗಳಲ್ಲಿ ಈ ಸಿನಿಮಾ ರಿಲೀಸ್ ಆಗಲಿದೆ. ‘ಕುಂದಾಪುರದಲ್ಲಿ ಐತಿಹಾಸಿಕ ಕದಂಬ ಸಾಮ್ರಾಜ್ಯವನ್ನು ಮರುಸೃಷ್ಟಿಸಿ, ಶೂಟಿಂಗ್ ನಡೆಸಲಾಗುತ್ತಿದೆ. ಈ ಸಿನಿಮಾ ಮೂಲಕ ಪ್ರೇಕ್ಷಕನನ್ನು ಶೌರ್ಯ, ಸಂಸ್ಕೃತಿ ಮತ್ತು ಅತೀಂದ್ರಿಯ ಯುಗಕ್ಕೆ ಕರೆದೊಯ್ಯಲಿದ್ದೇವೆ’ ಎಂದಿದೆ ಚಿತ್ರತಂಡ. ಈ ಸಿನಿಮಾ ಮತ್ತು ತಮ್ಮ ಪಾತ್ರದ ಸಲುವಾಗಿ ರಿಷಬ್ ಶೆಟ್ಟಿ ವಿಶೇಷ ತಯಾರಿಯನ್ನೇ ಮಾಡಿಕೊಂಡಿದ್ದಾರೆ. ಕೇರಳದ ಅತ್ಯಂತ ಹಳೆಯ ಸಮರ ಕಲೆಯ ಪ್ರಕಾರಗಳಲ್ಲಿ ಒಂದಾದ ಕಳರಿಪಯಟ್ಟು ತರಬೇತಿ ಪಡೆದಿದ್ದಾರೆ. ಕಲೆಯನ್ನು ಕರಗತ ಮಾಡಿಕೊಳ್ಳಲು ಸಾಕಷ್ಟು ಶ್ರಮಿಸಿದ್ದಾರೆ. ಈಗಾಗಲೇ ಆ್ಯಕ್ಷನ್ ದೃಶ್ಯಗಳನ್ನು ನಿರ್ದೇಶಿಸಲು ತೆಲುಗಿನ ಹಿಟ್ ಸಿನಿಮಾ ‘ಆರ್ಆರ್ಆರ್’ನ ಆ್ಯಕ್ಷನ್ ನಿರ್ದೇಶಕರಾಗಿದ್ದ ಟೊಡರ್ ಲ್ಯಾಜರೋವ್ ‘ಕಾಂತಾರ’ ತಂಡ ಸೇರಿಕೊಂಡಿದ್ದಾರೆ. ಇದಕ್ಕಾಗಿ ಬಲ್ಗೇರಿಯಾದಿಂದ ಟೊಡರ್ ಕುಂದಾಪುರಕ್ಕೆ ಬಂದಿದ್ದಾರೆ.
ಪ್ರೀಕ್ವೆಲ್ ಅನ್ನು ಈಗಾಗಲೇ ಪ್ರೈಂ ವಿಡಿಯೊ ದೊಡ್ಡ ಮೊತ್ತಕ್ಕೆ ಖರೀದಿಸಿದೆ. ಕದಂಬರ ಆಳ್ವಿಕೆಯ ಕಾಲದಲ್ಲಿ ಹುಟ್ಟಿದ ದಂತಕಥೆಯ ಕಥಾಹಂದರ ಇದಾಗಿದ್ದು, ಅಜನೀಶ್ ಲೋಕನಾಥ್ ಸಂಗೀತ ನಿರ್ದೇಶನ, ಅರವಿಂದ್ ಎಸ್.ಕಶ್ಯಪ್ ಅವರ ಛಾಯಾಚಿತ್ರಗ್ರಹಣ ಸೇರಿದಂತೆ ಮೊದಲ ಭಾಗದಲ್ಲಿ ಕಾರ್ಯನಿರ್ವಹಿಸಿದ್ದ ತಾಂತ್ರಿಕ ತಂಡವೇ ಪ್ರೀಕ್ವೆಲ್ನಲ್ಲೂ ಕೆಲಸ ಮಾಡುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.