ಬೇರೆ ರಾಜ್ಯಗಳಲ್ಲಿಯೂ ಬೇಡಿಕೆ ಹೆಚ್ಚಿರುವುದರಿಂದ ಕಾಂತಾರ ಸಿನಿಮಾವನ್ನು ಹಿಂದಿ ಭಾಷೆಯಲ್ಲಿಯೂ ಬಿಡುಗಡೆಗೊಳಿಸಲು ಹೊಂಬಾಳೆ ಫಿಲಂಸ್ ಮುಂದಾಗಿದೆ. ಚಿತ್ರ ಹಿಂದಿಗೆ ಡಬ್ ಆಗುತ್ತಿದ್ದು, ಅ.9ರಂದು ಚಿತ್ರದ ಹಿಂದಿ ಟ್ರೇಲರ್ ಬಿಡುಗಡೆಯಾಗಲಿದೆ ಎಂದು ಚಿತ್ರದ ನಟ, ನಿರ್ದೇಶಕ ರಿಷಭ್ ಶೆಟ್ಟಿ ಸಾಮಾಜಿಕ ಜಾಲತಾಣದಲ್ಲಿ ಹೇಳಿದ್ದಾರೆ.
ರಾಜ್ಯದಲ್ಲಿ ವ್ಯಾಪಕ ಪ್ರಶಂಸೆ ಪಡೆಯುತ್ತಿರುವ ಕಾಂತಾರ, ತೆರೆಗೆ ಬಂದ ವಾರದ ಬಳಿಕವೂ ಉತ್ತಮ ಗಳಿಕೆ ಕಾಣುತ್ತಿದೆ. ಜೊತೆ ಅನ್ಯಭಾಷಿಕರಿಂದ ಚಿತ್ರಕ್ಕೆ ಬೇಡಿಕೆ ಹೆಚ್ಚುತ್ತಿದೆ. ಪ್ಯಾನ್ ಇಂಡಿಯಾ ಸಿನಿಮಾವೆಂದರೆ ನಮ್ಮ ಸಿನಿಮಾಗಳು ಭಾಷೆಯ ಗಡಿ ದಾಟಿ ಬೇರೆ ಭಾಷೆಗಳಿಗೆ ಹೋಗುವುದು. ಇದು ನಮ್ಮ ಸಂಸ್ಕೃತಿ, ಸೊಗಡಿನ ಸಿನಿಮಾ. ಹೀಗಾಗಿ ಚಿತ್ರವನ್ನು ಬೇರೆ ಭಾಷೆಗಳಲ್ಲಿ ಬಿಡುಗಡೆ ಮಾಡುವ ಆಲೋಚನೆಯಿಲ್ಲ ಎಂದು ರಿಷಭ್ ಶೆಟ್ಟಿ ಚಿತ್ರದ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದರು.
ಆದರೆ ದಿಢೀರ್ ಬೆಳವಣಿಗೆಯಲ್ಲಿ ಕಾಂತಾರ ಹಿಂದೆ ಭಾಷೆಗೆ ಡಬ್ ಆಗಲಿದೆ ಎಂಬ ಸುದ್ದಿ ಹೊರಬಂದಿದೆ. ಚಿತ್ರ ಹಿಂದಿ ವಲಯದಲ್ಲಿ ಚಿತ್ರಮಂದಿರದಲ್ಲಿಯೇ ಬಿಡುಗಡೆಗೊಳ್ಳಲಿದೆಯಾ, ಯಾವಾಗ ಬಿಡುಗಡೆ ಎಂಬಿತ್ಯಾದಿ ಮಾಹಿತಿಗಳು ಟ್ರೇಲರ್ ಬಳಿಕ ಹೊರಬೀಳಲಿದೆ.
ನಟ ರಕ್ಷಿತ್ ಶೆಟ್ಟಿ, ನಟಿ ರಮ್ಯಾ ಕಾಂತಾರದ ಕುರಿತು ಮೆಚ್ಚುಗೆ ಮಾತುಗಳನ್ನಾಡಿದ್ದರು. ತೆಲುಗು ನಟ ಪ್ರಭಾಸ್ ಚಿತ್ರವನ್ನು ಮೆಚ್ಚಿದ್ದರು. ಚಿತ್ರರಂಗದ ಅನೇಕರು ಕಾಂತಾರದ ಬಗ್ಗೆ ಉತ್ತಮ ಮಾತುಗಳನ್ನಾಡಿದ್ದಾರೆ. ದಕ್ಷಿಣ ಕನ್ನಡದ ದೇಸಿ ಸೊಗಡಿನ, ದೈವ, ಭೂತ ಕೋಲಗಳ ಸೊಬಗನ್ನು ಹೊಂದಿರುವ ಚಿತ್ರಕ್ಕೆ ನೆಟ್ಟಿಗರಿಂದಲೂ ವ್ಯಾಪಕ ಪ್ರಶಂಸೆ ವ್ಯಕ್ತವಾಗಿತ್ತು.
‘ಕಾಂತಾರ’, ಮನುಷ್ಯ ಮತ್ತು ಪ್ರಕೃತಿಯ ನಡುವಿನ ಸಂಘರ್ಷದ ಕಥೆಯಾಗಿದ್ದು, ಈ ಚಿತ್ರದಲ್ಲಿ ರಿಷಭ್ ಶೆಟ್ಟಿ ಜೊತೆಗೆ ಸಪ್ತಮಿ ಗೌಡ, ಕಿಶೋರ್, ಅಚ್ಯುತ್ ಕುಮಾರ್, ಪ್ರಮೋದ್ ಶೆಟ್ಟಿ ಸೇರಿದಂತೆ ಹಲವು ಪ್ರತಿಭಾವಂತ ಕಲಾವಿದರು ನಟಿಸಿದ್ದಾರೆ. ಹೊಂಬಾಳೆ ಫಿಲಂಸ್ ಚಿತ್ರವನ್ನು ನಿರ್ಮಿಸಿದೆ. ಚಿತ್ರಕ್ಕೆ ಅಜನೀಶ್ ಲೋಕನಾಥ್ ಅವರ ಸಂಗೀತ ಮತ್ತು ಅರವಿಂದ್ ಕಶ್ಯಪ್ ಛಾಯಾಗ್ರಹಣವಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.