ADVERTISEMENT

ಕಾಂತಾರದ ‘ವರಾಹ ರೂಪಂ‘: ತೈಕುಡಂ ಬ್ರಿಡ್ಜ್‌ ಅರ್ಜಿ ತಳ್ಳಿಹಾಕಿದ ಕೇರಳ ಕೋರ್ಟ್

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2022, 13:11 IST
Last Updated 25 ನವೆಂಬರ್ 2022, 13:11 IST
ಕಾಂತಾರ ಚಿತ್ರದ ಪೋಸ್ಟರ್‌
ಕಾಂತಾರ ಚಿತ್ರದ ಪೋಸ್ಟರ್‌   

‘ಕಾಂತಾರ’ ಚಿತ್ರದಲ್ಲಿ ಬಳಸಲಾದ ‘ವರಾಹ ರೂಪಂ...’ ಹಾಡಿನ ರಾಗಕ್ಕೆ ಸಂಬಂಧಿಸಿ ಕೇರಳದ ಮ್ಯೂಸಿಕ್‌ ಬ್ಯಾಂಡ್‌ ತೈಕುಡಂ ಬ್ರಿಡ್ಜ್‌ ಸಲ್ಲಿಸಿದ ಆಕ್ಷೇಪವನ್ನು ಕೇರಳದ ಕೋಯಿಕ್ಕೋಡ್‌ನ ಜಿಲ್ಲಾ ನ್ಯಾಯಾಲಯ ತಳ್ಳಿ ಹಾಕಿದೆ.

ಹಾಡಿನ ರಾಗವನ್ನು ತಮ್ಮ ಆಲ್ಬಂ ‘ನವರಸನ್‌’ನಿಂದ ನಕಲು ಮಾಡಲಾಗಿದೆ ಎಂದು ಆಕ್ಷೇಪಿಸಿ ತೈಕುಡಂ ಬ್ರಿಡ್ಜ್‌ ಅರ್ಜಿ ಸಲ್ಲಿಸಿತ್ತು. ಕೋಯಿಕ್ಕೋಡ್‌ ಮತ್ತು ಪಾಲಕ್ಕಾಡ್‌ನ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯಗಳಲ್ಲಿ ಪ್ರಕರಣ ದಾಖಲಾಗಿತ್ತು. ಜಿಲ್ಲಾ ನ್ಯಾಯಾಲಯಗಳು ವಿಧಿಸಿದ್ದ ಆಕ್ಷೇಪ ಪ್ರಶ್ನಿಸಿ ‘ಕಾಂತಾರ’ ತಂಡ ಕೇರಳ ಹೈಕೋರ್ಟ್‌ ಮೆಟ್ಟಿಲೇರಿತ್ತು.ವಿಚಾರಣೆ ನಡೆಸಿದ ಕೇರಳ ಹೈಕೋರ್ಟ್‌ ವಿವಾದವನ್ನು ಕೆಳ ನ್ಯಾಯಾಲಯಗಳಲ್ಲೇ ಬಗೆಹರಿಸಿಕೊಳ್ಳುವಂತೆ ನಿರ್ದೇಶನ ನೀಡಿತ್ತು. ಅದರಂತೆ ಇಂದು (ನ. 25) ‘ಕಾಂತಾರ’ ಚಿತ್ರತಂಡ ಮತ್ತು ತೈಕುಡಂ ಬ್ರಿಡ್ಜ್‌ನ ವಾದವನ್ನು ಆಲಿಸಿದ ಕೆಳ ನ್ಯಾಯಾಲಯ ಹಾಡಿಗೆ ವಿಧಿಸಿದ್ದ ತಡೆಯಾಜ್ಞೆ ತೆರವುಗೊಳಿಸಿತು.

ಚಿತ್ರತಂಡದ ಪರವಾಗಿ ‘ವರಾಹ ರೂಪಂ’ ಗೀತರಚನೆಕಾರ ಶಶಿರಾಜ್‌ ಕಾವೂರು ವಾದ ಮಂಡಿಸಿದ್ದರು. ‘ಕಾಂತಾರ’ ಚಿತ್ರಕ್ಕೆ ಅಜನೀಶ್‌ ಲೋಕನಾಥ್‌ ಸಂಗೀತ ನೀಡಿದ್ದಾರೆ. ಚಿತ್ರ ಭರ್ಜರಿ ಪ್ರದರ್ಶನ ಕಾಣುತ್ತಿರುವ ಹೊತ್ತಿನಲ್ಲೇ ತೈಕುಡಂ ಬ್ರಿಡ್ಜ್‌ ಈ ತಡೆಯಾಜ್ಞೆ ತಂದಿತ್ತು. ಈ ಸನ್ನಿವೇಶಕ್ಕೆ ಚಿತ್ರತಂಡ ಯಾವುದೇ ಪ್ರತಿಕ್ರಿಯೆ ನೀಡದೆ ಕಾನೂನು ಹೋರಾಟ ಮುಂದುವರಿಸಿತ್ತು.ತೈಕುಡಂ ಬ್ರಿಡ್ಜ್‌ ಪರವಾಗಿ ಸುಪ್ರೀಂ ಕೋರ್ಟ್‌ ವಕೀಲ ಸತೀಶ್‌ ಮೂರ್ತಿ ವಾದ ಮಂಡಿಸಿದ್ದರು.

ADVERTISEMENT

ನ. 24ರಂದು ಅಮೆಜಾನ್‌ ಪ್ರೈಮ್‌ನಲ್ಲಿ ಬಿಡುಗಡೆಯಾದ ಒಟಿಟಿ ಆವೃತ್ತಿಯಲ್ಲಿ ‘ವರಾಹರೂಪಂ...’ ಹಾಡಿನ ರಾಗ ಬದಲಿಸಿ ಪ್ರಸಾರ ಮಾಡಲಾಗುತ್ತಿತ್ತು. ಈ ಬದಲಾವಣೆಗೆ ಚಿತ್ರದ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಆಕ್ಷೇಪ ಹಾಗೂ ಸಹಮತ ವ್ಯಕ್ತಪಡಿಸಿದ್ದರು. ಈಗ ಹಳೇ ಆವೃತ್ತಿಯೇ ಚಿತ್ರದಲ್ಲಿ ಮೂಡಿಬರಲಿರುವುದು ಪ್ರೇಕ್ಷಕರಿಗೆ ಖುಷಿ ತಂದಿದೆ. ಚಿತ್ರದ ತುಳು ಆವೃತ್ತಿಯೂ ವಿದೇಶಗಳಲ್ಲಿ ನ. 25ರಂದೇ ಬಿಡುಗಡೆಯಾಗಿದೆ. ರಾಜ್ಯದಲ್ಲಿ ಡಿ. 2ರಂದು ತುಳು ಆವೃತ್ತಿ ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣಲಿದೆ. ತುಳು ಆವೃತ್ತಿಗೆ ಸ್ಥಳೀಯ ರಂಗ ಭೂಮಿ ಹಾಗೂ ಚಲನಚಿತ್ರ ಕಲಾವಿದರು ಕಂಠದಾನ ಮಾಡಿದ್ದಾರೆ.

ಗೀತ ರಚನೆಕಾರ ಶಶಿರಾಜ್‌ ರಾವ್‌ ಕಾವೂರು ಅವರ ಟ್ವೀಟ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.