ಕಥಕ್ ನೃತ್ಯ, ರಂಗಭೂಮಿ, ಯೋಗ, ಸಿನಿಮಾ ಹೀಗೆ ವಿವಿಧ ಕ್ಷೇತ್ರಗಳಲ್ಲಿ ಸಕ್ರಿಯರಾಗಿರುವವರು ರಾಧಿಕಾ ನಾರಾಯಣ್. ರಂಗಿ ತರಂಗದಿಂದ ಈಗ ಶಿವಾಜಿ ಸುರತ್ಕಲ್ – 2 ವರೆಗೆ ರಾಧಿಕಾ ಸಾಗಿ ಬಂದ ಹಾದಿ ತೆರೆದಿಟ್ಟದ್ದು ಹೀಗೆ.
ಎಂಜಿನಿಯರ್, ರಂಗಭೂಮಿ ಕಲಾವಿದೆ, ಯೋಗ ಪರಿಣಿತೆ, ಸಿನಿಮಾ ನಟಿ ಈ ಪೈಕಿ ನೀವು ಯಾರು?
ಒಂದನ್ನು ಬಿಟ್ಟರೂ ನಾನು ಅಪೂರ್ಣ. ಮೈಸೂರಿನಲ್ಲಿ ಎಂಜಿನಿಯರಿಂಗ್ ಓದಿ ಕಾರ್ಪೊರೇಟ್ ಕ್ಷೇತ್ರದಲ್ಲಿಯೂ ಕೆಲಸ ಮಾಡಿದ್ದೇನೆ. ನಮ್ಮ ಊರು ಉಡುಪಿ ಜಿಲ್ಲೆ ಕಾಪು ಸಮೀಪದ ಉಳಿಯಾರು. ರಂಗಭೂಮಿ, ಕಲೆ ಎಲ್ಲವೂ ನನ್ನನ್ನು ಬಾಲ್ಯದಿಂದಲೇ ಸೆಳೆದಿತ್ತು. ಅದೇ ನನ್ನನ್ನು ಪೂರ್ಣ ಪ್ರಮಾಣದಲ್ಲಿ ತೊಡಗಿಕೊಳ್ಳುವಂತೆ ಮಾಡಿದೆ. ನನ್ನ ಅಜ್ಜ ಯೋಗ ಕಲಿಸುತ್ತಿದ್ದರು. ಅವರು ಮುಂದೆ ಕೊಳ್ಳೆಗಾಲದಲ್ಲಿ ನೆಲೆಯಾದರು. ರಜಾ ದಿನಗಳಲ್ಲಿ ನಾನು ಅಲ್ಲಿಗೆ ಹೋಗುತ್ತಿದ್ದೆ. ಅವರು ಯೋಗ ಶಿಬಿರಗಳನ್ನೂ ನಡೆಸುತ್ತಿದ್ದರು. ನಾನೂ ಪಾಲ್ಗೊಳ್ಳುತ್ತಿದ್ದೆ. ಯೋಗ ಶಿಕ್ಷಣದಲ್ಲಿ ಡಿಪ್ಲೊಮಾ ಮಾಡಿದೆ. ದೈಹಿಕ, ಮಾನಸಿಕ ಸ್ಥಿರತೆ ಕಾಪಾಡಲು ಯೋಗ ಸಹಕಾರಿ. ನಿರುಪಮಾ ರಾಜೇಂದ್ರ ಅವರ ಜೊತೆ ಕಥಕ್ ನೃತ್ಯ ಪ್ರದರ್ಶನಕ್ಕಾಗಿ ದೇಶವೆಲ್ಲಾ ಸುತ್ತಿದ್ದೇನೆ. ವಿಮೂವ್ ಎಂಬ ರಂಗತಂಡದಲ್ಲಿಯೂ ಕೆಲಸ ಮಾಡಿದ್ದೇನೆ. ಹೀಗಾಗಿ ನಾನು ಎಲ್ಲವೂ ಹೌದು.
l ತುಂಬಾ ನೆನಪಿಟ್ಟುಕೊಳ್ಳುವ, ಖುಷಿಕೊಟ್ಟ ಚಿತ್ರ?
ಖಂಡಿತವಾಗಿಯೂ ‘ರಂಗಿತರಂಗ’. ಅತ್ಯುತ್ತಮ ತಂಡದೊಂದಿಗೆ ನಾನು ಕಲಿತಿದ್ದೇನೆ. ಅಲ್ಲಿ ಒಳ್ಳೆಯ ತರಬೇತಿ ಸಿಕ್ಕಿದೆ. ಹಾಗೆಯೇ ನನ್ನ ವೃತ್ತಿ ಬದುಕಿಗೆ ದೊಡ್ಡ ಗುರುತು ಕೊಟ್ಟ ಸಿನಿಮಾ ಅದು. ಈಗಲೂ ಅನೂಪ್ ಭಂಡಾರಿ ಮತ್ತು ತಂಡದೊಂದಿಗೆ ಒಡನಾಟದಲ್ಲಿದ್ದೇನೆ.
l ಚಿತ್ರಗಳನ್ನು ಆಯ್ದುಕೊಳ್ಳುವಲ್ಲಿ ನೀವು ತುಂಬಾ ಚೂಸಿ ಎಂದು ಕೇಳಿದ್ದೇವೆ.
ಹೌದು. ನನಗೆ ಹೆಚ್ಚು ಸಂಬಂಧಿಸುವ, ಹತ್ತಿರವಾಗುವ ವಿಷಯವು ಚಿತ್ರದಲ್ಲಿದೆಯೇ ಎಂದು ನೋಡುತ್ತೇನೆ. ಅದು ಮನಸ್ಸಿಗೆ ಹತ್ತಿರವಾದರೆ ಮಾತ್ರ ಚಿತ್ರವನ್ನು ಒಪ್ಪಿಕೊಳ್ಳುತ್ತೇನೆ. ಮಾಡಿದ ಚಿತ್ರ ಅಚ್ಚುಕಟ್ಟಾಗಿರಬೇಕು. ಚಿತ್ರದ ನಿರ್ದೇಶಕರು ಯಾರು, ತಂಡದಲ್ಲಿ ಯಾರಿದ್ದಾರೆ? ಅಲ್ಲಿ ಕಲಿಕೆಯ ಸಾಧ್ಯತೆ ಇವೆಲ್ಲವನ್ನೂ ನೋಡುತ್ತೇನೆ. ಆಯ್ಕೆ ಯಾವತ್ತೂ ಒಳ್ಳೆಯದೇ ಆಗಿರಬೇಕು.
l ತುಳು ಚಿತ್ರಗಳಲ್ಲಿ ನಿಮ್ಮನ್ನು ನೋಡುವುದು ಯಾವಾಗ?
ಈಗ ನಡೆಯುತ್ತಿರುವ ‘ವೀರ ಕಂಬಳ’ ಕನ್ನಡ–ತುಳು ದ್ವಿಭಾಷಾ ಚಿತ್ರ. ಇದರಲ್ಲಿ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದೇನೆ. ತುಳುವಿನಲ್ಲಿ ಅಭಿನಯಿಸುವ ಆಸೆಯಂತೂ ಖಂಡಿತಾ ಇದೆ. ಕಾದು ನೋಡೋಣ.
l ರಮೇಶ್ ಅರವಿಂದ್ ಜೊತೆ ತೆರೆ ಹಂಚಿಕೊಂಡ ಅನುಭವ?
ಅದು ತುಂಬಾ ಅದ್ಭುತವಾದದ್ದು. ಅವರಿರುವಲ್ಲಿ ಒಂದು ಪಾಸಿಟಿವಿಟಿ ಇದೆ. ನಮ್ಮೆಲ್ಲರಿಗೆ ಶಕ್ತಿ ತುಂಬುತ್ತಲೇ ಇರುತ್ತಾರೆ. ಶಿವಾಜಿ ಸುರತ್ಕಲ್ ಮೊದಲ ಭಾಗದಲ್ಲಿಯೂ ನಾನಿದ್ದೆ. ಇದರಲ್ಲಿಯೂ ಇದ್ದೇನೆ.
l ಶಿವಾಜಿ ಸುರತ್ಕಲ್ ನೋಡಲು ಪ್ರಮುಖ ಕಾರಣಗಳು?
ಶಿವಾಜಿ ಸುರತ್ಕಲ್ ಮೊದಲ ಭಾಗಕ್ಕಿಂತ ಐದು ಪಟ್ಟು ಹೆಚ್ಚು ಮನರಂಜನೆ, ಕುತೂಹಲ, ಕಥನ ಶೈಲಿ, ನಿರೂಪಣೆ ಇದೆ. ನನ್ನದು ಶಿವಾಜಿಯ ಪತ್ನಿ ಜನನಿ ಎಂಬ ಪಾತ್ರ. ಶಿವಾಜಿಯ ಸುಪ್ತ ಮನಸ್ಸಿನಲ್ಲಿರುವುದನ್ನು ವ್ಯಕ್ತಪಡಿಸುವ ಪಾತ್ರವಾಗಿದ್ದೇನೆ. ಒಳ್ಳೆಯ ಚಿತ್ರ. ಎರಡೂವರೆ ಗಂಟೆ ನಿಮ್ಮನ್ನು ಹಿಡಿದಿಡುವುದು ಪಕ್ಕಾ.
l ರಾಧಿಕಾ ಅವರ ‘ಮುಂದಿನ ನಿಲ್ದಾಣ’ ಯಾವುದು?
ಒಳ್ಳೆಯ ಚಿತ್ರಗಳನ್ನು ಮಾಡಬೇಕು. ಬೇರೆ ಭಾಷೆಗಳಲ್ಲೂ ಅಭಿನಯಿಸಬೇಕು. ಸದ್ಯಕ್ಕೆ ದಿಗಂತ್ ಅವರ ಜೊತೆ ‘ಎಡಗೈ ಅಪಘಾತಕ್ಕೆ ಕಾರಣ’ ಚಿತ್ರದಲ್ಲಿ ಅಭಿನಯಿಸುತ್ತಿದ್ದೇನೆ. ಹೀಗೆ ಹಲವು ಚಿತ್ರಗಳು ನನ್ನ ಮುಂದಿನ ದಾರಿಯ ಪಟ್ಟಿಯಲ್ಲಿ ಇವೆ. ಒಳ್ಳೆಯ ‘ನಿಲ್ದಾಣ’ವನ್ನಷ್ಟೇ ಆಯ್ದುಕೊಳ್ಳುತ್ತೇನೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.