ಬೆಂಗಳೂರು: ‘ಬಾಹುಬಲಿ’ ಖ್ಯಾತಿಯ ಪ್ರಭಾಸ್ ಅಭಿನಯದ ‘ಸ್ಪಿರಿಟ್’ ಚಿತ್ರದಲ್ಲಿ ಬಾಲಿವುಡ್ ನಟಿ ಕರೀನಾ ಕಪೂರ್ ಅಭಿನಯಿಸಲಿದ್ದಾರೆ ಎಂದು ವರದಿಯಾಗಿದೆ.
'ಅರ್ಜುನ್ ರೆಡ್ಡಿ' ಹಾಗೂ 'ಕಬೀರ್ ಸಿಂಗ್' ಖ್ಯಾತಿಯ ನಿರ್ದೇಶಕ ಸಂದೀಪ್ ರೆಡ್ಡಿ ವಾಂಗಾ ಅವರು ಆ್ಯಕ್ಷನ್ ಕಟ್ ಹೇಳುತ್ತಿರುವ ‘ಸ್ಪಿರಿಟ್’ ಸಿನಿಮಾದಲ್ಲಿ ಪ್ರಭಾಸ್ ನಟಿಸುವುದು ಬಹುತೇಕ ಪಕ್ಕಾ ಆಗಿದೆ. ಇದೀಗ ಪ್ರಭಾಸ್‌ಗೆ ಜೋಡಿಯಾಗಿ ಕರೀನಾ ಕಪೂರ್ ಕಾಣಿಸಿಕೊಳ್ಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಭದ್ರಕಾಳಿ ಬ್ಯಾನರ್ ಅಡಿ ಬಹುಕೋಟಿ ವೆಚ್ಚದಲ್ಲಿ ತಯಾರಾಗುತ್ತಿರುವ ಈ ಚಿತ್ರಕ್ಕೆ ‘ಟೀ ಸಿರೀಸ್’ನ ಭೂಷಣ್ ಕುಮಾರ್ ಬಂಡವಾಳ ಹೂಡಿದ್ದಾರೆ.
‘ಸ್ಪಿರಿಟ್’ ಚಿತ್ರ ತೆಲುಗು, ತಮಿಳು, ಕನ್ನಡ, ಮಲಯಾಳಂ, ಹಿಂದಿ ಸೇರಿದಂತೆ ಭಾರತದ ಎಂಟು ಪ್ರಮುಖ ಭಾಷೆಗಳಲ್ಲಿ ಬಿಡುಗಡೆಯಾಗಲಿದ್ದು, ನಾಲ್ಕು ಏಷಿಯನ್ ಭಾಷೆಗಳಲ್ಲೂ ಚಿತ್ರಮಂದಿರಗಳಿಗೆ ಕಾಲಿಡಲಿದೆ ಎನ್ನಲಾಗಿದೆ.
ಸದ್ಯ ಪ್ರಭಾಸ್, ಪ್ರಶಾಂತ್ ನೀಲ್ ನಿರ್ದೇಶನದ ‘ಸಲಾರ್’, ಓಂ ರಾವತ್ ನಿರ್ದೇಶನದ ‘ಆದಿಪುರುಷ್’, `ಮಹಾನಟಿ’ ಖ್ಯಾತಿಯ ನಾಗ್ ಅಶ್ವಿನ್ ನಿರ್ದೇಶನದ `ಪ್ರಾಜೆಕ್ಟ್ ಕೆ’ ಚಿತ್ರಗಳಲ್ಲಿ ಬ್ಯುಸಿ ಆಗಿದ್ದಾರೆ.
ಪ್ರಭಾಸ್ ಕೊನೆಯದಾಗಿ ಪೂಜಾ ಹೆಗ್ಡೆ ಅವರೊಂದಿಗೆ ‘ರಾಧೆ ಶ್ಯಾಮ್’ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಈ ಚಿತ್ರಕ್ಕೆ ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು.
ಓದಿ...
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.