ADVERTISEMENT

’ಕಳ್ಳು ಮಾರುತ್ತಾರಂತೆ’ ನಟಿ ಶ್ರುತಿ

​ಪ್ರಜಾವಾಣಿ ವಾರ್ತೆ
Published 15 ಜನವರಿ 2023, 7:38 IST
Last Updated 15 ಜನವರಿ 2023, 7:38 IST
‘ಕರಿ ಹೈದ ಕರಿ ಅಜ್ಜ’ ಚಿತ್ರತಂಡ
‘ಕರಿ ಹೈದ ಕರಿ ಅಜ್ಜ’ ಚಿತ್ರತಂಡ   

ಪವಾಡ ಪುರುಷ ಕೊರಗಜ್ಜ ಜೀವನಾಧಾರಿತ ಸುಧೀರ್‌ ಅತ್ತಾವರ ನಿರ್ದೇಶನದ ಸಿನಿಮಾ ‘ಕರಿ ಹೈದ ಕರಿ ಅಜ್ಜ’ದದಲ್ಲಿ ಕಳ್ಳು (ಸೇಂದಿ) ಮಾರುತ್ತಾರಂತೆ ನಟಿ ಶ್ರುತಿ. ಅವರೇಕೆ ಕಳ್ಳು ಮಾರುತ್ತಾರೆ. ಏಕೆ? ಇಲ್ಲಿದೆ ವಿವರ.

ಭೈರಕ್ಕಿಯಾಗಿ ಶ್ರುತಿ

‘ಈ ಚಿತ್ರದಲ್ಲಿ ಭೈರಕ್ಕಿ ಪಾತ್ರ ಮುಖ್ಯ. ಭೈರಕ್ಕಿ ಕೊರಗಜ್ಜನ ಸಾಕು ತಾಯಿ. ಈ ಪಾತ್ರವನ್ನು ನಟಿ ಶ್ರುತಿ ನಿರ್ವಹಿಸಿದ್ದಾರೆ. ಅದರಲ್ಲಿ ಅವರು ಕಳ್ಳು ಮಾರುವ ಹೆಣ್ಣು ಮಗಳು. ಜನ ವಿಸ್ಕಿ, ಬ್ರಾಂದಿಯನ್ನು ಕೊರಗಜ್ಜಗೆ ನೀಡುತ್ತಿದ್ದಾರೆ. ದೇವರಿಗೆ ನಾವು ಏನೂ ಬೇಕಾದರೂ ಕೊಡಬಹುದು. ಹಾಗೆಂದು ಇಂದಿನ ಜನ ವಿಸ್ಕಿ, ಬ್ರಾಂದಿ ಕೊಡುತ್ತಿರುವುದು ಕೊರಗ ಜನಾಂಗಕ್ಕೆ ಬೇಸರ ತಂದಿದೆ. ಈ ಚಿತ್ರದಲ್ಲಿ ಕೊರಗಜ್ಜನ ನೈಜ ಕಥೆ ಹೇಳಲಾಗಿದೆ. ಕಥೆಯನ್ನು ಕೊರಗ ಜನಾಂಗದಿಂದ ಸಂಗ್ರಹಿಸಿ ಸಿನಿಮಾ ಮಾಡಲಾಗಿದೆ’ ಎಂದಿದೆ ಚಿತ್ರತಂಡ.

ADVERTISEMENT

ಚಿತ್ರದ ಶೂಟಿಂಗ್ ಇತ್ತೀಚೆಗೆ ಮುಕ್ತಾಯವಾಗಿದೆ. ಭರತ್ ಸೂರ್ಯ ನಟನೆ ನಾಯಕನಾಗಿ ನಟಿಸಿದ್ದಾರೆ. ಹಾಲಿವುಡ್, ಬಾಲಿವುಡ್ ಹಾಗೂ ಫ್ರೆಂಚ್ ಸಿನಿಮಾಗಳ ನೃತ್ಯ ನಿರ್ದೇಶಕ, ನಟ ಸಂದೀಪ್ ಸೋಪರ್ಕರ್ ನಟಿಸಿದ್ದಾರೆ. ಈ ಚಿತ್ರದಲ್ಲಿ ಇವರು ಕೊರಗಜ್ಜನ ಜೊತೆ ಬರುವ ಗುಳಿಗ ದೈವದ ಪಾತ್ರ ನಿರ್ವಹಿಸಿದ್ದಾರೆ. ಈ ಪಾತ್ರ ನೃತ್ಯ ರೂಪದಲ್ಲಿ ಮೂಡಿಬಂದಿದೆ.

ಸುಧೀರ್ ಅತ್ತಾವರ್ ಪ್ರತಿಕ್ರಿಯಿಸಿ ‘ಕೊರಗಜ್ಜ ಕೋಲು ಕೊಡುವ ಮೂಲಕ ‘ಕರಿ ಹೈದ ಕರಿ ಅಜ್ಜ’ ಚಿತ್ರದ ಶೂಟಿಂಗ್ ಮುಗಿಸಲಾಯಿತು. ಚಿತ್ರೀಕರಣ ಸಂದರ್ಭದಲ್ಲಿ ಸಾಕಷ್ಟು ಪವಾಡಗಳು ನಡೆದಿವೆ. ಇದು ಕೊರಗಜ್ಜ ಎಂದು ಕರೆಯುವ 22, 23 ವರ್ಷ ಬದುಕಿದ್ದ ಹುಡುಗನ ಕಥೆ. 12ನೇ ಶತಮಾನದ ಕಥೆ ಇದಾಗಿದೆ. ನಮಗೆಲ್ಲ ಶೂಟಿಂಗ್ ಸಂದರ್ಭದಲ್ಲಿ ಒಂದಿಷ್ಟು ಅನುಭವ ಆಗಿವೆ’ ಎಂದರು.

ಹಾಲಿವುಡ್ ನಟ ಸಂದೀಪ್ ಸೋಪರ್ಕರ್ ಮಾತನಾಡಿ, ‘ಈ ಚಿತ್ರ ನನಗೆ ಒಳ್ಳೆ ಅನುಭವ ನೀಡಿದೆ. ಈ ತಂಡ ಹಾಗೂ ಸಿನಿಮಾದಲ್ಲಿ ಕೆಲಸ ಮಾಡಿದ್ದು ತುಂಬಾ ಖುಷಿ ಕೊಟ್ಟಿದೆ. ಒಳ್ಳೆಯ ತಂಡ ಇದಾಗಿದ್ದು ಅದ್ಭುತ ಕೆಲಸ ಮಾಡಿದೆ. ನಾನು ಮಾಡಿರುವ ಪಾತ್ರ ಅದ್ಭುತವಾಗಿದ್ದು ಹೊಸ ರೀತಿಯಲ್ಲಿ ಅನುಭವ ನೀಡಿತು. ಈ ಪಾತ್ರದಲ್ಲಿ ನಟನೆ, ನೃತ್ಯ ಎರಡೂ ಇವೆ. ಒಮ್ಮೆ ಸಾಕಷ್ಟು ಜನ ಗಲಾಟೆ ಮಾಡಿ 2 ದಿನ ಶೂಟಿಂಗ್ ನಿಂತಿತು. ನಂತರ ನಿರ್ದೇಶಕ, ನಿರ್ಮಾಪಕರು ಕಷ್ಟಪಟ್ಟು ಶೂಟಿಂಗ್ ಮಾಡಿಸಿದರು. ಮೊದಲಬಾರಿಗೆ ಜಾನಪದ ಶೈಲಿಯಲ್ಲಿ ನೃತ್ಯ ಮಾಡಿದ್ದು ಶಿವನ ನೃತ್ಯ ಮಾಡಿರುವುದು ಒಳ್ಳೆಯ ಅನುಭವ. ಮರೆಯಲಾಗದು’ ಎಂದರು.

ನಟಿ ಶ್ರುತಿ ಮಾತನಾಡಿ, ‘ಈ ಸಿನಿಮಾ ನನ್ನ ಮನಸ್ಸಿನಲ್ಲಿ ವಿಶೇಷವಾದ ಸ್ಥಾನ ಪಡೆಯುತ್ತದೆ. ನಾನಿಲ್ಲಿ ಭೈರಕ್ಕಿ ಪಾತ್ರ ಮಾಡಿದ್ದೇನೆ. ದೈವದ ಕಥೆ ಅದ್ಭುತವಾಗಿ ಇದ್ದು ಈ ಕಥೆಯನ್ನು ಹೆಕ್ಕಿ ತೆಗೆದಿದ್ದು ನಿರ್ದೇಶಕರ ಧೈರ್ಯ ಮೆಚ್ಚಬೇಕು. ಚಿತ್ರಕ್ಕಾಗಿ ನಿರ್ಮಾಪಕರು ಕೋಟಿ ಕೋಟಿ ಹಣ ಖರ್ಚು ಮಾಡಿದ್ದಾರೆ. ಯಾರಿಗೂ ಸಿಗದೆ ಇರುವ ಅವಕಾಶ ಈ ತಂಡಕ್ಕೆ ಸಿಕ್ಕಿದೆ. ಇದರಲ್ಲಿ ಬರುವ ಪ್ರತಿಯೊಬ್ಬರ ಪಾತ್ರ ವರ್ಣಚಿತ್ರದಂತೆಯೇ ಇದ್ದು ನಿರ್ದೇಶಕರು ಅಷ್ಟು ತಯಾರಿ ಮಾಡಿಕೊಂಡು ಸಿನಿಮಾ ಮಾಡಿದ್ದಾರೆ. ಇದರಲ್ಲಿ ತಾಯಿ ಮಗನ ಬಾಂಧವ್ಯವನ್ನು ಅದ್ಭುತವಾಗಿ ತೋರಿಸಲಾಗಿದೆ. ನಮ್ಮ ಜೊತೆ ಸಾಕಷ್ಟು ರಂಗಭೂಮಿ ಕಲಾವಿದರು ಇದರಲ್ಲಿ ನಟನೆ ಮಾಡಿದ್ದಾರೆ. ನಾನು ಈ ಸಿನಿಮಾ ಮಾಡಿದ್ದು ಧನ್ಯತಾ ಭಾವ ಇದೆ' ಎಂದರು.

ನಟಿ ಭವ್ಯಾ ಈ ಚಿತ್ರದಲ್ಲಿ ಗ್ಲಿಸರಿನ್‌ ಇಲ್ಲದೇ ಅತ್ತಿದ್ದಾರಂತೆ. ಚಿತ್ರದ ನಿರ್ಮಾಪಕ ತ್ರಿವಿಕ್ರಮ ಸಫಲ್ಯ ‘ತುಳುನಾಡ ಜನರ ಸಂಸ್ಕೃತಿ ತೋರಿಸುವ ಆಸೆ ಇತ್ತು. ಅದು ಈ ಚಿತ್ರದ ಮೂಲಕ ಈಡೇರಿದೆ. ಸೋಮೇಶ್ವರ, ಉಳ್ಳಾಲ, ಮಡಂತ್ಯಾರ್ ಮುಂತಾದ ಸ್ಥಳದಲ್ಲಿ ಶೂಟಿಂಗ್ ಮಾಡಲಾಗಿದ್ದು ಚಿತ್ರೀಕರಣ ಮುಕ್ತಾಯವಾಗಿದೆ. ಚಿತ್ರವನ್ನು ಮೇಯಲ್ಲಿ ಬಿಡುಗಡೆ ಮಾಡುವ ಯೋಜನೆ ಇದೆ’ ಎಂದರು. ಚಿತ್ರದಲ್ಲಿ ಪ್ರಮುಖ ಪ್ರಾತ್ರವೊಂದರಲ್ಲಿ ಬಾಲಿವುಡ್ ನಟ ಕಬೀರ್ ಬೇಡಿ ನಟಿಸಿದ್ದಾರೆ. ನಾಯಕಿಯಾಗಿ ವೃತಿಕಾ ಅಭಿನಯಿಸಿದ್ದಾರೆ. ಚಿತ್ರವನ್ನು ಏಕಕಾಲದಲ್ಲಿ ಕನ್ನಡ, ತುಳು ಹಾಗೂ ಮಲಯಾಳಂ ಭಾಷೆಯಲ್ಲಿ ತಯಾರಿಸಲಾಗುತ್ತಿದೆ. ಧೃತಿ ಕ್ರಿಯೇಷನ್ಸ್ ಹಾಗೂ ಸಕ್ಸಸ್ ಫಿಲಂಸ್ ಬ್ಯಾನರ್‌ನಲ್ಲಿ ಈ ನಿರ್ಮಾಣ ನಡೆದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.