ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಆಡಳಿತ ಮಂಡಳಿಗೆ ಚುನಾವಣೆ ಹತ್ತಿರವಾಗಿದ್ದು, ಈಗಲೇ ಅಖಾಡ ರಂಗೇರಲಾರಂಭಿಸಿದೆ. 2021ರ ಜನವರಿಯಲ್ಲಿ ಆಡಳಿತ ಮಂಡಳಿಯ ಸಾಮಾನ್ಯ ಸಭೆ ನಡೆಸಲು ಮಂಡಳಿಯ ಕಾರ್ಯಕಾರಿ ಸಮಿತಿ ತೀರ್ಮಾನಿಸಿದೆ. ಚುನಾವಣೆಯನ್ನು ಜನವರಿಯಲ್ಲೇ ನಡೆಸುವ ನಿರೀಕ್ಷೆ ಇದ್ದು, ಗುರುರಾಜ ಕಲ್ಯಾಣ ಮಂಟಪದಲ್ಲಿ ಚುನಾವಣೆ ನಡೆಸಲು ಚರ್ಚೆ ನಡೆಯುತ್ತಿದೆ ಎನ್ನುತ್ತವೆ ವಾಣಿಜ್ಯ ಮಂಡಳಿಯ ಮೂಲಗಳು.
ಮಂಡಳಿಯ ಅಧ್ಯಕ್ಷ ಸ್ಥಾನಕ್ಕೆ ಮಾಜಿ ಅಧ್ಯಕ್ಷ ಸಾ.ರಾ. ಗೋವಿಂದು, ನಿರ್ಮಾಪಕರಾದ ಬಾ.ಮ. ಹರೀಶ್, ಕೆ.ಸಿ.ಎನ್. ಚಂದ್ರಶೇಖರ್, ಕೆ.ಸಿ. ವೆಂಕಟೇಶ್, ಎನ್.ಎಂ. ಸುರೇಶ್ ಅವರ ಹೆಸರು ಆಕಾಂಕ್ಷಿಗಳ ಸಾಲಿನಲ್ಲಿ ಸದ್ಯಕ್ಕೆ ಕೇಳಿಬರುತ್ತಿದೆ. ಡಿಸೆಂಬರ್ ಕೊನೆಯ ವೇಳೆಗೆ ಇನ್ನಷ್ಟು ಮಂದಿ ಆಕಾಂಕ್ಷಿಗಳಾಗುವ ನಿರೀಕ್ಷೆ ಇದೆ ಎನ್ನುವ ಮಾತು ಚಿತ್ರರಂಗದಲ್ಲಿ ಕೇಳಿಬರುತ್ತಿದೆ. ಈಗಾಗಲೇ ಆಕಾಂಕ್ಷಿತರಲ್ಲಿ ಕೆಲವರು ಸದಸ್ಯ ಮತದಾರರ ಒಲವು ಗಿಟ್ಟಿಸುವ ಕಸರತ್ತು ಶುರು ಮಾಡಿದ್ದಾರೆ. ಪ್ರಭಾವಿ ನಿರ್ಮಾಪಕರು ಹಾಗೂ ಮಾಜಿ ಅಧ್ಯಕ್ಷರುಗಳ ಬೆಂಬಲವನ್ನು ಗಿಟ್ಟಿಸುವ ಕಾರ್ಯತಂತ್ರಗಳನ್ನು ಅನುಸರಿಸಿದ್ದಾರೆ.
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯು 1,595 ಸದಸ್ಯ ಮತದಾರರನ್ನು ಹೊಂದಿದೆ. ಅಧ್ಯಕ್ಷರು, ಉಪಾಧ್ಯಕ್ಷರು, ಕಾರ್ಯದರ್ಶಿ, ಖಜಾಂಚಿ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರನ್ನು ಈ ಮತದಾರರು ಆಯ್ಕೆ ಮಾಡಲಿದ್ದಾರೆ.
ಸದ್ಯ ಚಿತ್ರ ಪ್ರದರ್ಶಕ ಡಿ.ಆರ್. ಜೈರಾಜ್ ಅವರು ಮಂಡಳಿಯ ಅಧ್ಯಕ್ಷರಾಗಿದ್ದು, 2020ರ ಜೂನ್‌ಗೆ ಅವರ ಅಧಿಕಾರಾವಧಿ ಪೂರ್ಣಗೊಂಡಿತ್ತು. ಆದರೆ, ಕೋವಿಡ್ 19 ಕಾರಣಕ್ಕೆ ಆಡಳಿತ ಮಂಡಳಿಯ ಅಧಿಕಾರಾವಧಿಯನ್ನು ಮುಂದೂಡಲಾಗಿತ್ತು. ಈಗ ಚುನಾವಣೆ ನಡೆಸಲು ಕಾರ್ಯಕಾರಿ ಸಮಿತಿಯು ಚುನಾವಣಾಧಿಕಾರಿಯಾಗಿ ವಾಣಿಜ್ಯ ಮಂಡಳಿಯ ಮಾಜಿ ಅಧ್ಯಕ್ಷ ಥಾಮಸ್ ಡಿಸೋಜಾ ಅವರನ್ನು ನೇಮಿಸಿದೆ.
‘ಚುನಾವಣೆ ನಡೆಸಲು ತೀರ್ಮಾನವಾಗಿದ್ದು, ಕಾರ್ಯಕಾರಿ ಸಮಿತಿಯು ಈ ವಾರದಲ್ಲಿ ಮತ್ತೊಮ್ಮೆ ಸಭೆ ಸೇರಿ ಸಾಮಾನ್ಯ ಸಭೆ ಮತ್ತು ಚುನಾವಣಾ ದಿನಾಂಕವನ್ನು ನಿಗದಿಪಡಿಸಲಿದೆ. ಸದ್ಯದಲ್ಲೇ ಸದಸ್ಯರಿಗೆಲ್ಲರಿಗೂ ತಿಳಿವಳಿಕೆ ಸೂಚನಾ ಪತ್ರ ರವಾನಿಸಲಾಗುತ್ತಿದೆ’ ಎಂದು ಮಂಡಳಿಯ ಚುನಾವಣಾಧಿಕಾರಿ ಥಾಮಸ್ ಡಿಸೋಜಾ ಪ್ರತಿಕ್ರಿಯಿಸಿದ್ದಾರೆ.
‘ಚುನಾವಣೆ ನಡೆಸಬೇಕೆನ್ನುವ ಪ್ರಸ್ತಾಪ ಬಂದಿದೆ. ಇನ್ನೂ ಯಾವುದೇ ತೀರ್ಮಾನವಾಗಿಲ್ಲ. ಕಾರ್ಯಕಾರಿ ಸಮಿತಿ ಸಭೆಯಲ್ಲಿ ಚುನಾವಣಾ ದಿನಾಂಕ ನಿಗದಿಪಡಿಸಿ, ವೇಳಾಪಟ್ಟಿ ಹೊರಡಿಸಬೇಕು. ಸಭೆ ಯಾವಾಗ ನಡೆಯುತ್ತದೆ ನೋಡಬೇಕು’ ಎನ್ನುತ್ತಾರೆ ಹಾಲಿ ಅಧ್ಯಕ್ಷ ಡಿ.ಆರ್. ಜೈರಾಜ್.
‘ಕೊರೊನಾ ಕಾರಣಕ್ಕೆ ಅಧಿಕಾರಾವಧಿ ವಿಸ್ತರಣೆಯಾಗುವುದಿಲ್ಲ. ಜತೆಗೆ ಅವಿರೋಧ ಆಯ್ಕೆಯೂ ನಡೆಯುವುದಿಲ್ಲ. ಈ ಬಾರಿಯ ಚುನಾವಣಾ ಅಖಾಡ ರಂಗೇರಲಿದೆ. ಯಾರೇ ಅಧ್ಯಕ್ಷರಾಗಲಿ ವಾಣಿಜ್ಯ ಮಂಡಳಿಯನ್ನು ಸಮರ್ಥವಾಗಿ ನಿಭಾಯಿಸುವಂತಿರಬೇಕು, ಕೋವಿಡ್ ಕಾಲದಲ್ಲಿ ಸಂಕಷ್ಟಕ್ಕೆ ಸಿಲುಕಿರುವ ನಿರ್ಮಾಪಕರು ಸೇರಿದಂತೆ ಚಿತ್ರೋದ್ಯಮದವರ ಬೇಡಿಕೆಗಳಿಗೆ ಧ್ವನಿಯಾಗುವಂತಹ ವ್ಯಕ್ತಿಯಾಗಿರಬೇಕೆನ್ನುವುದು ಹಲವು ನಿರ್ಮಾಪಕರು, ವಿತರಕರು ಹಾಗೂ ಪ್ರದರ್ಶಕರ ಒತ್ತಾಸೆ. ವಾಣಿಜ್ಯ ಮಂಡಳಿಯನ್ನು ಸ್ವಾರ್ಥಕ್ಕೆ ಬಳಸಿಕೊಳ್ಳುವವರಿಗೆ ಯಾವುದೇ ಕಾರಣಕ್ಕೂ ಮಣೆ ಹಾಕುವುದಿಲ್ಲ. ಚಿತ್ರ ನಿರ್ಮಾಪಕರು, ವಿತರಕರು ಹಾಗೂ ಪ್ರದರ್ಶಕರ ಹಿತ ಕಾಯುವಂತಹ ಸಮರ್ಥ ವ್ಯಕ್ತಿಯನ್ನು ಕಣಕ್ಕಿಳಿಸುತ್ತೇವೆ’ ಎನ್ನುತ್ತಾರೆ ಹೆಸರು ಹೇಳಲು ಬಯಸದ ಪ್ರಭಾವಿ ನಿರ್ಮಾಪಕರಿಬ್ಬರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.