ADVERTISEMENT

ಕೆಎಫ್‌ಸಿಸಿ: ಅಧ್ಯಕ್ಷರಾಗಿ ನಿರ್ಮಾಪಕ ಭಾ.ಮ.ಹರೀಶ್‌ ಆಯ್ಕೆ

​ಪ್ರಜಾವಾಣಿ ವಾರ್ತೆ
Published 29 ಮೇ 2022, 0:58 IST
Last Updated 29 ಮೇ 2022, 0:58 IST
ಕೆಎಫ್‌ಸಿಸಿ ಅಧ್ಯಕ್ಷರಾಗಿ ಚುನಾಯಿತರಾದ ಭಾ.ಮ.ಹರೀಶ್‌ ಅವರ ಬೆಂಬಲಿಗರ ಸಂಭ್ರಮಾಚರಣೆ. ನಟ ಸುಂದರ್‌ರಾಜ್‌ ಇದ್ದಾರೆ. 
ಕೆಎಫ್‌ಸಿಸಿ ಅಧ್ಯಕ್ಷರಾಗಿ ಚುನಾಯಿತರಾದ ಭಾ.ಮ.ಹರೀಶ್‌ ಅವರ ಬೆಂಬಲಿಗರ ಸಂಭ್ರಮಾಚರಣೆ. ನಟ ಸುಂದರ್‌ರಾಜ್‌ ಇದ್ದಾರೆ.    

ಬೆಂಗಳೂರು: ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ(ಕೆಎಫ್‌ಸಿಸಿ) ಅಧ್ಯಕ್ಷರಾಗಿ ನಿರ್ಮಾಪಕ ಭಾ.ಮ.ಹರೀಶ್‌ ಆಯ್ಕೆಯಾಗಿದ್ದಾರೆ.

ಶನಿವಾರ ಬೆಳಗ್ಗೆ ಮಂಡಳಿಯ ಸರ್ವಸದಸ್ಯರ ಸಭೆಯ ಬಳಿಕ, ಮಧ್ಯಾಹ್ನ 2ರಿಂದ ಸಂಜೆ 6ರವರೆಗೆ ರೇಸ್‌ ಕೋರ್ಸ್‌ ರಸ್ತೆಯಲ್ಲಿರುವ ಗುರುರಾಜ ಕಲ್ಯಾಣ ಮಂಟಪದಲ್ಲಿ 2022–23ನೇ ಸಾಲಿನ 64ನೇ ವರ್ಷದ ವಾರ್ಷಿಕ ಚುನಾವಣೆ ನಡೆಯಿತು. ಶೇ 62 ಮತದಾನವಾಗಿತ್ತು. ಅಧ್ಯಕ್ಷ ಸ್ಥಾನಕ್ಕೆ ನಿರ್ಮಾಪಕರಾದ ಸಾ.ರಾ.ಗೋವಿಂದು ಹಾಗೂ ಭಾ.ಮ.ಹರೀಶ್‌ ಅವರ ನಡುವೆ ತೀವ್ರ ಪೈಪೋಟಿಯಿತ್ತು. ಅತ್ಯಧಿಕ ಮತಗಳಿಂದ ಭಾ.ಮ.ಹರೀಶ್‌ ಗೆಲುವು ಸಾಧಿಸಿದರು.

ಉಪಾಧ್ಯಕ್ಷ ಸ್ಥಾನಕ್ಕೆ ನಿರ್ಮಾಪಕ ವಲಯದಿಂದ ನಟ ಜೈಜಗದೀಶ್‌, ವಿತರಕ ವಲಯದಿಂದ ಶ್ರೀನಿವಾಸ್‌ ಎಚ್‌.ಸಿ(ಶಿಲ್ಪಾ ಶ್ರೀನಿವಾಸ್‌) ಆಯ್ಕೆಯಾದರು. ಗೌರವ ಕಾರ್ಯದರ್ಶಿ ಸ್ಥಾನಕ್ಕೆ ನಿರ್ಮಾಪಕ ವಲಯದಿಂದ ಸುಂದರ್‌ ರಾಜನ್‌ ಎಂ.ಕೆ(ಸುಂದರ್‌ರಾಜ್‌), ವಿತರಕ ವಲಯದಿಂದಕುಮಾರ್‌ ಎಂ.ಎನ್‌.(ಕೆಸಿಎನ್‌ ಕುಮಾರ್‌) ಹಾಗೂ ಪ್ರದರ್ಶಕ ವಲಯದಿಂದ ಕುಶಾಲ್‌ ಎಲ್‌.ಸಿ. ಚುನಾಯಿತರಾದರು. ಖಜಾಂಚಿಯಾಗಿ ಟಿ.ಪಿ.ಸಿದ್ಧರಾಜು(ದುನಿಯಾ)ಆಯ್ಕೆಯಾದರು. ಪ್ರದರ್ಶಕರ ವಲಯದಿಂದ ಉಪಾಧ್ಯಕ್ಷ ಸ್ಥಾನಕ್ಕೆ ಇಬ್ಬರು ಸ್ಪರ್ಧಿಸಿದ್ದು, ಈ ಪೈಕಿ ರಂಗಪ್ಪ ಎನ್ನುವವರು ನ್ಯಾಯಾಲಯದಿಂದ ತಡೆ ತಂದಿರುವ ಕಾರಣ ಈ ಫಲಿತಾಂಶವನ್ನು ಘೋಷಿಸಿಲ್ಲ.

ADVERTISEMENT

ಕೋವಿಡ್‌ ಸಾಂಕ್ರಮಿಕ, ಲೆಕ್ಕಪತ್ರಗಳ ನಿರ್ವಹಣೆ, ಹಾಲಿ ಆಡಳಿತ ಮಂಡಳಿಯ ವಿರುದ್ಧದ ವಿವಿಧ ಆರೋಪಗಳ ತನಿಖೆ ಹಾಗೂ ಮತ್ತಿತರರ ಕಾರಣದಿಂದಾಗಿ ಕಳೆದ ಎರಡು ವರ್ಷದಿಂದ ಚುನಾವಣೆ ಮುಂದಕ್ಕೆ ಹೋಗಿತ್ತು. 2019ರಲ್ಲಿ ಪ್ರದರ್ಶಕರ ವಲಯಕ್ಕೆ ಮೀಸಲಾಗಿದ್ದ ಮಂಡಳಿಯ ಅಧ್ಯಕ್ಷ ಸ್ಥಾನಕ್ಕೆ ಡಿ.ಆರ್‌. ಜೈರಾಜ್ ಅವಿರೋಧವಾಗಿ ಆಯ್ಕೆಯಾಗಿದ್ದರು. ಈ ಬಾರಿಯ ಅಧ್ಯಕ್ಷ ಸ್ಥಾನ ನಿರ್ಮಾಪಕರ ವಲಯಕ್ಕೆ ಮೀಸಲಾಗಿತ್ತು.

ಚುನಾವಣಾಧಿಕಾರಿಯಾಗಿ ಮಂಡಳಿಯ ಮಾಜಿ ಅಧ್ಯಕ್ಷ ಥಾಮಸ್‌ ಡಿಸೋಜ ಮತದಾನ ಪ್ರಕ್ರಿಯೆಯನ್ನು ನಡೆಸಿದರು. ಬ್ಯಾಲೆಟ್‌ ಪೇಪರ್‌ನಲ್ಲಿಯೇ ಮತದಾನ ನಡೆಯಿತು.ನಟಿಯರಾದ ಲೀಲಾವತಿ, ಜಯಮಾಲ, ಶೃತಿ, ನಟ ರಾಘವೇಂದ್ರ ರಾಜ್‌ಕುಮಾರ್‌, ಸಚಿವ, ನಿರ್ಮಾಪಕ ಮುನಿರತ್ನ ಹೀಗೆ ಹಲವರು ಮತ ಚಲಾಯಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.