ADVERTISEMENT

ಶೀರ್ಷಿಕೆ ಮರುಬಳಕೆಗೆ ಆಕ್ಷೇಪ: ಕೊನೆಗೂ ಬದಲಾಯ್ತು ‘ಕಸ್ತೂರಿ ನಿವಾಸ’ಚಿತ್ರದ ಟೈಟಲ್

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2020, 13:35 IST
Last Updated 11 ಸೆಪ್ಟೆಂಬರ್ 2020, 13:35 IST
ನಿರ್ದೇಶಕ ಎಸ್‌.ಕೆ. ಭಗವಾನ್ ಅವರನ್ನು ಭೇಟಿ ಮಾಡಿದ ‘ಕಸ್ತೂರಿ ಮಹಲ್‌’ ಚಿತ್ರತಂಡ
ನಿರ್ದೇಶಕ ಎಸ್‌.ಕೆ. ಭಗವಾನ್ ಅವರನ್ನು ಭೇಟಿ ಮಾಡಿದ ‘ಕಸ್ತೂರಿ ಮಹಲ್‌’ ಚಿತ್ರತಂಡ   

ಜನಪ್ರಿಯ ಸಿನಿಮಾಗಳ ಟೈಟಲ್‌ ಅನ್ನು ಮರುಬಳಕೆ ಮಾಡುವುದು ಹೊಸದೇನಲ್ಲ. ಈಗಾಗಲೇ, ಚಂದನವನದಲ್ಲೂ ಸಾಕಷ್ಟು ಹಳೆಯ ಸಿನಿಮಾಗಳ ಟೈಟಲ್‌ ಮರುಬಳಕೆಯಾಗಿದೆ. ಕೆಲವೊಮ್ಮೆ ಇದಕ್ಕೆ ಅಭಿಮಾನಿಗಳಿಂದ ಆಕ್ಷೇಪ ವ್ಯಕ್ತವಾಗುವುದು ಉಂಟು. ದಿನೇಶ್‌ ಬಾಬು ನಿರ್ದೇಶನದ ‘ಕಸ್ತೂರಿ ನಿವಾಸ’ ಚಿತ್ರಕ್ಕೂ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು.ನಟಿ ರಚಿತಾ ರಾಮ್‌ ಮುಖ್ಯ ಭೂಮಿಕೆಯಲ್ಲಿರುವ ಈ ಚಿತ್ರದ ಮುಹೂರ್ತ ಇತ್ತೀಚೆಗೆ ನೆರವೇರಿತ್ತು.

ವರನಟ ಡಾ.ರಾಜ್‌ಕುಮಾರ್ ಅವರ ನಟನೆಯಲ್ಲಿ ಮೂಡಿಬಂದಿದ್ದ ‘ಕಸ್ತೂರಿ ನಿವಾಸ’ ಸಿನಿಮಾ ಇಂದಿಗೂ ಜನಮಾನಸದಲ್ಲಿ ವಿಶಿಷ್ಟ ಸ್ಥಾನ‍ ‍ಪಡೆದಿದೆ. ಹಾಗಾಗಿಯೇ, ಈ ಟೈಟಲ್‌ ಮರುಬಳಕೆ ಬಗ್ಗೆ ವಿರುದ್ಧ ವ್ಯಕ್ತವಾಗಿತ್ತು. ಶೀರ್ಷಿಕೆ ನಿಗದಿಯಾದ ದಿನದಿಂದಲೂ ರಾಜ್‌ಕುಮಾರ್‌ ಅವರ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಶೀರ್ಷಿಕೆ ಬದಲಾವಣೆಗೆ ಒತ್ತಾಯಿಸುತ್ತಿದ್ದರು.

‘ಹಲವು ಅಭಿಮಾನಿಗಳು ನಮ್ಮೊಂದಿಗೆ ಮಾತನಾಡಿ ಕಸ್ತೂರಿ ನಿವಾಸ ಎಂದಾಗ ರಾಜ್‌ಕುಮಾರ್ ನೆನಪಾಗುತ್ತಾರೆ. ಹಾಗಾಗಿ, ನಿಮ್ಮ ಚಿತ್ರದ ಶೀರ್ಷಿಕೆ ಬದಲಿಸಿಕೊಳ್ಳಿ ಎಂದು ಸಲಹೆ ನೀಡಿದ್ದು ಉಂಟು. ರಾಜ್‌ಕುಮಾರ್ ಕುಟುಂಬ ಹಾಗೂ ಅಭಿಮಾನಿಗಳ ಸಲಹೆ ಮೇರೆಗೆ ಚಿತ್ರಕ್ಕೆ ‘ಕಸ್ತೂರಿ ಮಹಲ್’ ಎಂದು ಹೆಸರಿಡಲಾಗಿದೆ. ನಿರ್ದೇಶಕ ಎಸ್.ಕೆ. ಭಗವಾನ್ ಅವರಿಗೂ ಶೀರ್ಷಿಕೆ ಬದಲಾವಣೆ ಬಗ್ಗೆ ತಿಳಿಸಿದ್ದು, ಅವರ ಆಶೀರ್ವಾದ ಪಡೆಯಲಾಗಿದೆ’ ಎಂದು ಚಿತ್ರದ ನಿರ್ಮಾಪಕ ರವೀಶ್ ಆರ್.ಸಿ. ತಿಳಿಸಿದ್ದಾರೆ.

ADVERTISEMENT

ಕೊಟ್ಟಿಗೆಹಾರದಲ್ಲಿ ಅಕ್ಟೋಬರ್ 5ರಿಂದ ‘ಕಸ್ತೂರಿ ಮಹಲ್‌’ ಸಿನಿಮಾದ ಮೊದಲ ಹಂತದ ಶೂಟಿಂಗ್‌ ಶುರುವಾಗಲಿದೆ. ಹಾರರ್, ಥ್ರಿಲ್ಲರ್ ಚಿತ್ರ ಇದು. ದಿನೇಶ್ ಬಾಬು ಅವರೇ ಕಥೆ, ಚಿತ್ರಕಥೆ, ಸಂಭಾಷಣೆಯ ನೊಗ ಹೊತ್ತಿದ್ದಾರೆ. ಅಂದಹಾಗೆ ಇದು ಅವರ ನಿರ್ದೇಶನದ 50ನೇ ಚಿತ್ರ.

ಪಿ.ಕೆ.ಹೆಚ್. ದಾಸ್ ಛಾಯಾಗ್ರಹಣ ಇರಲಿದೆ. ಸೌಂದರ್ ರಾಜ್ ಸಂಕಲನ ನಿರ್ವಹಿಸಲಿದ್ದಾರೆ. ಸ್ಕಂದ ಅಶೋಕ್, ರಂಗಾಯಣ ರಘು, ನಾರಾಯಣ ಸ್ವಾಮಿ ತಾರಾಗಣದಲ್ಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.