ADVERTISEMENT

ಕಣಗಾಲ್‌ ಹಾದಿಯಲ್ಲಿ ರಿಷಬ್‌: ತಿಂಗಳಾಂತ್ಯಕ್ಕೆ ಕಥಾ ಸಂಗಮ

ಕೆ.ಎಂ.ಸಂತೋಷ್‌ ಕುಮಾರ್‌
Published 1 ನವೆಂಬರ್ 2019, 10:45 IST
Last Updated 1 ನವೆಂಬರ್ 2019, 10:45 IST
ಕಥಾಸಂಗಮ ಚಿತ್ರದ ಪೋಸ್ಟರ್‌
ಕಥಾಸಂಗಮ ಚಿತ್ರದ ಪೋಸ್ಟರ್‌    

70ರ ದಶಕದಲ್ಲಿ ನಿರ್ದೇಶಕ ಪುಟ್ಟಣ್ಣ ಕಣಗಾಲ್‌ ನಾಲ್ಕು ಕಥೆಗಳನ್ನು ಒಳಗೊಂಡ ‘ಕಥಾ ಸಂಗಮ’ ಚಿತ್ರ ನಿರ್ದೇಶಿಸಿ ದಾಖಲೆ ನಿರ್ಮಿಸಿದ್ದರು. ಪ್ರಯೋಗಾತ್ಮಕವಾದ ಆ ಸಿನಿಮಾ ಯಶಸ್ಸನ್ನೂ ಕಂಡಿತ್ತು. ಕಣಗಾಲ್‌ ಹಾದಿಯಲ್ಲಿ ಸಾಗುತ್ತಿರುವ ನಟ, ನಿರ್ದೇಶಕ ಹಾಗೂ ನಿರ್ಮಾಪಕ ರಿಷಬ್‌ ಶೆಟ್ಟಿ ಅಂತಹುದೇ ಪ್ರಯೋಗಕ್ಕೆ ಕೈಹಾಕಿ ಮತ್ತೊಂದು ‘ಕಥಾ ಸಂಗಮ’ವನ್ನು ತೆರೆಗೆ ತರಲು ಸಜ್ಜುಗೊಳಿಸಿದ್ದಾರೆ. ಅದೂ ಅಲ್ಲದೇ ಈ ಚಿತ್ರವನ್ನು ಕನ್ನಡ ಚಿತ್ರರಂಗದ ದಂತಕಥೆಪುಟ್ಟಣ್ಣ ಕಣಗಾಲ್ ಅವರಿಗೆ ಅರ್ಪಿಸಿದ್ದಾರೆ.

ರಿಷಬ್‌ ಶೆಟ್ಟಿ ಸಾರಥ್ಯ, ಕಲ್ಪನೆಯಲ್ಲಿ ಮೂಡಿಬಂದಿರುವ‘ಕಥಾ ಸಂಗಮ’ ಚಿತ್ರದ ಮೊದಲ ಪೋಸ್ಟರ್‌ ಹೊರಬಂದಿದೆ. ಇದೇ 4ರಂದು ಚಿತ್ರದ ಟ್ರೈಲರನ್ನು ಕಣಗಾಲ್‌ ಅವರ ಪತ್ನಿ ನಾಗಲಕ್ಷ್ಮಿ ಕಣಗಾಲ್‌ ಅವರ ಕೈಯಿಂದ ಬಿಡುಗಡೆ ಮಾಡಿಸಲು ಚಿತ್ರತಂಡ ನಿರ್ಧರಿಸಿದೆ.

ಒಂದೂವರೆ ವರ್ಷದ ಹಿಂದೆ ಈ ಚಿತ್ರ ನಿರ್ಮಾಣ ಶುರುವಾಗಿದ್ದು, ಈಗ ಪೂರ್ಣಗೊಂಡಿದೆ. ಸೆನ್ಸಾರ್‌ ಮಂಡಳಿಯಿಂದ ಪ್ರಮಾಣ ಪತ್ರ ಸಿಗುವುದನ್ನುಎದುರು ನೋಡುತ್ತಿದ್ದು, ನವೆಂಬರ್‌ ಅಂತ್ಯಕ್ಕೆ ಚಿತ್ರ ಬಿಡುಗಡೆ ಮಾಡುವ ತಯಾರಿಯಲ್ಲಿದೆ ಚಿತ್ರತಂಡ.

ADVERTISEMENT

ಹಲವು ವಿಶೇಷತೆಯ ಚಿತ್ರ
‘ಪುಟ್ಟಣ್ಣ ಕಣಗಾಲ್‌ ಆರಂಭಿಸಿದ ಜಾನರ್‌ನಲ್ಲೇ ‘ಕಥಾ ಸಂಗಮ’ ಮುಂದುವರಿಸಿದ್ದೇವೆ. ಈ ಚಿತ್ರದಲ್ಲಿಏಳು ಸಣ್ಣ ಕಥೆಗಳು ಇವೆ. ಎಲ್ಲ ಕಥೆಗಳೂ ಅದ್ಭುತವಾಗಿವೆ. ಒಂದು ಕಥೆಯಲ್ಲಿ ಸಂಭಾಷಣೆ ಇರುವುದಿಲ್ಲ. ಆ ಕಥಾ ಭಾಗ ಮೂಕಿ ಚಿತ್ರದಂತೆ ಇದ್ದು, ಇದರಲ್ಲಿ ಹರಿಪ್ರಿಯಾ ಮತ್ತು ನನ್ನ ನಟನೆ ಇದೆ. ಇಡೀ ಚಿತ್ರವನ್ನು ಸುಮಾರು 50 ದಿನಗಳ ಕಾಲ ಚಿತ್ರೀಕರಿಸಲಾಗಿದೆ.ಪ್ರೇಕ್ಷಕರಿಗೆ ಎರಡೂವರೆ ತಾಸಿನಲ್ಲಿ ಏಳು ಸಿನಿಮಾಗಳನ್ನು ನೋಡಿದ ವಿಭಿನ್ನ ಅನುಭವ ಸಿಗಲಿದೆ’ ಎನ್ನುತ್ತಾರೆ ರಿಷಬ್‌ ಶೆಟ್ಟಿ.

ಚಿತ್ರದಲ್ಲಿಟಿಪಿಕಲ್‌ ಕಾಮಿಡಿ ಇಲ್ಲ. ಉತ್ತರ ಕರ್ನಾಟಕ, ಬೆಂಗಳೂರು ಭಾಗ, ಮೈಸೂರು ಹಾಗೂ ಮಂಗಳೂರು ಭಾಗದ ಸೊಗಡಿನ ಸಂಭಾಷಣೆ ಇರಲಿದೆ. ಅಲ್ಲದೇ ಈ ನಾಲ್ಕು ಭಾಗದ ಸಂಸ್ಕೃತಿಯ ಪರಿಚಯವೂ ಒಂದೇ ಸಿನಿಮಾದಲ್ಲಿ ಸಿಗಲಿದೆ.ಏಳು ಕಥೆಗಳು,ಏಳು ನಿರ್ದೇಶಕರು, ಏಳು ಸಂಗೀತ ನಿರ್ದೇಶಕರು, ಏಳು ಕ್ಯಾಮೆರಾಮನ್‌ಗಳ ಸಂಗಮವಿದು ಎನ್ನುತ್ತಾರೆ ಅವರು.

ಈ ಚಿತ್ರ ನಿರ್ಮಾಣಕ್ಕೆ ರಿಷಬ್‌ ಅವರಜತೆಗೆ ನಿರ್ಮಾಪಕರಾದ ಎಚ್‌.ಕೆ.ಪ್ರಕಾಶ್‌, ಪ್ರದೀಪ್‌ ಎನ್‌.ಆರ್‌. ಕೈಜೋಡಿಸಿದ್ದಾರೆ. ರಿಷಬ್‌ ಪರಿಕಲ್ಪನೆಯಲ್ಲಿನಿರ್ದೇಶಕರಾದ ಕಿರಣ್‌ರಾಜ್‌ ಕೆ., ಶಶಿಕುಮಾರ್‌ ಪಿ., ಚಂದ್ರಜಿತ್‌ ಎಲ್ಲಿಯಪ್ಪ, ರಾಹುಲ್‌ ಪಿ.ಕೆ., ಜೈಶಂಕರ್‌ ಎ., ಕರಣ್‌ ಅನಂತ್‌, ಜಮದಗ್ನಿ ಮನೋಜ್‌ ನಿರ್ದೇಶಿಸಿದ್ದಾರೆ.

ತಾರಾಗಣದಲ್ಲಿ ರಿಷಬ್‌ ಶೆಟ್ಟಿ, ಹರಿಪ್ರಿಯಾ, ಕಿಶೋರ್‌ ಕುಮಾರ್‌,ರಾಜ್‌ ಬಿ. ಶೆಟ್ಟಿ, ಯಜ್ಞಶೆಟ್ಟಿ, ಪ್ರಮೋದ್‌ ಶೆಟ್ಟಿ, ಪ್ರಕಾಶ್‌ ಬೆಳವಾಡಿ, ಸೌಮ್ಯ, ಬಾಲಾಜಿ ಮನೋಹರ್‌ ಇದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.