ADVERTISEMENT

ಕಥಾಸಂಗಮ: ಸಂಗಮದ ಸೂತ್ರ ಯಾವುದು?

ವಿಜಯ್ ಜೋಷಿ
Published 6 ಡಿಸೆಂಬರ್ 2019, 12:31 IST
Last Updated 6 ಡಿಸೆಂಬರ್ 2019, 12:31 IST
‘ಕಥಾ ಸಂಗಮ’ ಚಿತ್ರದಲ್ಲಿ ಹರಿಪ್ರಿಯಾ
‘ಕಥಾ ಸಂಗಮ’ ಚಿತ್ರದಲ್ಲಿ ಹರಿಪ್ರಿಯಾ   

ಏಳು ಕಥೆಗಳು, ಏಳು ನಿರ್ದೇಶಕರು, ಏಳು ಪ್ರಕಾರಗಳು, ಏಳು ಜಗತ್ತುಗಳು... ಇವೆಲ್ಲದರ ಸಂಗಮ ರಿಷಬ್ ಶೆಟ್ಟಿ ಪರಿಕಲ್ಪನೆಯ ‘ಕಥಾಸಂಗಮ’. ಚಿತ್ರದ ಹೆಸರಿನಲ್ಲಿ ‘ಸಂಗಮ’ ಎನ್ನುವ ಪದ ಇದ್ದರೂ, ಕಥೆಗಳೆಲ್ಲವೂ ಸಂಗಮ ಆಗಿಲ್ಲ. ಭಿನ್ನ ತೊರೆಗಳಾಗಿಯೇ ಹರಿಯುತ್ತವೆ.

‘ರೇನ್‌ಬೊ ಲ್ಯಾಂಡ್‌’, ‘ಸತ್ಯಕಥಾ ಪ್ರಸಂಗ’, ‘ಗಿರ್‌ಗಿಟ್ಲೆ’, ‘ಉತ್ತರ’, ‘ಪಡುವಾರಹಳ್ಳಿ’, ‘ಸಾಗರ ಸಂಗಮ’ ಮತ್ತು ‘ಲಚ್ಚವ್ವ’ – ಇವು ಒಂದು ಸಿನಿಮಾದೊಳಗಿನ ಏಳು ಸಿನಿಮಾಗಳು. ಇಷ್ಟೂ ಸಿನಿಮಾಗಳು ಬೇರೆ ಬೇರೆ ನಿರ್ದೇಶಕರ ಕೂಸುಗಳು. ಇವೆಲ್ಲವನ್ನೂ ಬಿಡಿ ಕಿರುಚಿತ್ರಗಳ ರೂಪದಲ್ಲಿ ಗ್ರಹಿಸಬಹುದು. ಹಲವು ಎಳೆಗಳನ್ನು ಸೃಷ್ಟಿಸಿ, ಚಿತ್ರದ ಕೊನೆಯಲ್ಲಿ ಅವೆಲ್ಲವನ್ನೂ ಜೋಡಿಸಿ, ಚಿತ್ರದ ಕಥೆಗೆ ಒಂದು ಅಂತ್ಯ ತಂದುಕೊಡುವ ಸಿನಿಮಾ ಇದಲ್ಲ. ಹೀಗಿರುವಾಗ ಇದಕ್ಕೆ ‘ಕಥಾಸಂಗಮ’ ಎಂಬ ಹೆಸರು ನೀಡಿದ್ದೇಕೆ ಎನ್ನುವ ಪ್ರಶ್ನೆ ಪ್ರೇಕ್ಷಕರಿಗೆ ಮೂಡುವುದು ಸಹಜ. ಏಳು ಕಥೆಗಳಿಗೂ ಇರುವ ಒಂದು ಸಾಮ್ಯತೆ ಎಂದರೆ, ಸಿನಿಮಾದ ವಾಸ್ತವವಾದಿ ನಿರೂಪಣೆ ಮಾತ್ರ.

ಮಗಳ ಖುಷಿಯಲ್ಲೇ ತಮ್ಮ ಖುಷಿಯನ್ನು ಕಾಣುವ ಮಿಲೆನಿಯಲ್‌ ಅಪ್ಪ–ಅಮ್ಮಂದಿರ ಕಥೆ ‘ರೇನ್‌ಬೊ ಲ್ಯಾಂಡ್‌’. ವೃತ್ತಿ ಬದುಕಿನ ಕೊನೆಯ ಹಂತದಲ್ಲಿ ತನ್ನತನ ಹುಡುಕಿಕೊಳ್ಳಲು ಯತ್ನಿಸುವ ಮಧ್ಯಮ ವರ್ಗದ ವ್ಯಕ್ತಿಯ ಕಥೆ ‘ಸತ್ಯಕಥಾ ಪ್ರಸಂಗ’. ‘ನೀನು ನನ್ನನ್ನು ಸಾಕಬಲ್ಲೆಯಾ’ ಎಂದು ಪ್ರೇಯಸಿ ಕೇಳುವ ಪ್ರಶ್ನೆಗೆ ಸಿಡುಕಿನ ಉತ್ತರ ನೀಡುತ್ತ, ಅನುಭವಿಸಿದ್ದನ್ನೇ ಮತ್ತೆ ಮತ್ತೆ ಅನುಭವಿಸುವ ಯುವಕನ ಕಥೆ ‘ಗಿರ್‌ಗಿಟ್ಲೆ’. ಮಾಧ್ಯಮ ಲೋಕದ ಬಿಕ್ಕಟ್ಟೊಂದರ ಬಗ್ಗೆ ಉತ್ತರ ಬಯಸುವ ಮಧ್ಯವಯಸ್ಕನ ಕಥೆ ‘ಉತ್ತರ’. ಸ್ವಾತಂತ್ರ್ಯಪೂರ್ವದಲ್ಲಿ ಕ್ರಾಂತಿಕಾರಿಗಳ ಪರ ಗುಪ್ತವಾಗಿ ಕೆಲಸ ಮಾಡುವ ಕ್ಷೌರಿಕನ ಅಂತರಂಗದ ವಿವರಣೆ ‘ಪಡುವಾರಹಳ್ಳಿ’. ಆಗಂತುಕನಿಂದ ಅಯಾಚಿತ ಸಹಾಯ ಪಡೆಯುವ ಮೂಕಿಚಿತ್ರ ‘ಸಾಗರ ಸಂಗಮ’. ಬೆಂಗಳೂರಿನ ಬದುಕಿನ ಸಿಕ್ಕುಗಳಿಗೆ ಸಿಲುಕಿದ ಹಿರಿ ವಯಸ್ಸಿನ ತಾಯಿಯ ಕಥೆ ‘ಲಚ್ಚವ್ವ’.

ADVERTISEMENT

ಪುಟ್ಟ ಪುಟ್ಟ ಕಥೆಗಳ ರೂಪದಲ್ಲಿ ಏಳೂ ಕಿರುಚಿತ್ರಗಳು ಕಾವ್ಯಾತ್ಮಕವಾಗಿ ಕಾಣಿಸುತ್ತವೆ. ಯಾವ ಅಬ್ಬರವೂ ಇಲ್ಲದ ಹಾಗೂ ಆ್ಯಂಥಾಲಜಿ ಪ್ರಕಾರದ ಸಿನಿಮಾಗಳನ್ನು ನೋಡಿ ಅಭ್ಯಾಸ ಇಲ್ಲದವರಿಗೆ, ಈ ಸಿನಿಮಾ ಇಷ್ಟವಾಗುವ ಬಗ್ಗೆ ಅನುಮಾನ ಇದೆ. ಈ ಹಿನ್ನೆಲೆಯಲ್ಲಿ, ಇದು ಒಂದು ಪ್ರಯೋಗಾತ್ಮಕ ಸಿನಿಮಾ ಮಾದರಿಯಲ್ಲಿ ಕಾಣಿಸುತ್ತದೆ.

‘ರೇನ್‌ಬೊ ಲ್ಯಾಂಡ್‌’, ‘ಉತ್ತರ’ ಮತ್ತು ‘ಲಚ್ಚವ್ವ’ ಕಥೆಗಳು ಮಿಲೆನಿಯಲ್ ವೀಕ್ಷಕರಿಗೆ ಹತ್ತಿರವಾಗಬಹುದು. ಆದರೆ, ಇನ್ನುಳಿದ ಕಥೆಗಳ ವಿಚಾರದಲ್ಲಿ ಇದೇ ಮಾತು ಹೇಳುವುದು ಕಷ್ಟ. ‘ಸತ್ಯಕಥಾ ಪ್ರಸಂಗ’, ‘ಗಿರ್‌ಗಿಟ್ಲೆ’ ಕಥೆಗಳು ಮನರಂಜನೆ ಕೊಡುವ ಅಥವಾ ಪ್ರಶ್ನೆಗಳನ್ನು ಸೃಷ್ಟಿಸುವುದಕ್ಕಿಂತಲೂ ಹೆಚ್ಚಾಗಿ ವೀಕ್ಷಕರ ಬುದ್ಧಿಗೆ ಕಸರತ್ತು ಕೊಡುವ ಕೆಲಸ ಮಾಡುತ್ತವೆ! ‘ಸಾಗರಸಂಗಮ’ ಮತ್ತು ‘ಪಡುವಾರಹಳ್ಳಿ’ ಕಥೆಗಳು ಒಂಚೂರು ರೋಚಕವಾಗಿ ಕಂಡರೂ, ಕೊನೆಯಲ್ಲಿ ನಿರಾಸೆ ಮೂಡಿಸುತ್ತವೆ. ಈ ಕಥೆಗಳ ಸಂಗಮಕ್ಕೆ ಸೂತ್ರ ಯಾವುದು ಎನ್ನುವುದು ಪ್ರಶ್ನೆಯಾಗಿಯೇ ಉಳಿಯುತ್ತದೆ. ಈ ಚಿತ್ರವು ಕಿರುಚಿತ್ರಗಳ ಗುಚ್ಛವಾಗಿ ಕಾಣಿಸುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.