ADVERTISEMENT

ಸಮವಸ್ತ್ರದವರಿಗೆ ಸಮರ್ಪಿತ

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2019, 19:39 IST
Last Updated 10 ಮಾರ್ಚ್ 2019, 19:39 IST
   

‘ಈ ಸಿನಿಮಾ ಸಮವಸ್ತ್ರದಲ್ಲಿ ಇರುವ ಎಲ್ಲರಿಗೂ ಸಮರ್ಪಿತ... ಈ ಚಿತ್ರ ವೀಕ್ಷಿಸಿದ ನಂತರ ಪೊಲೀಸರ ಬಗ್ಗೆ ಜನರಲ್ಲಿ ಇನ್ನಷ್ಟು ಹೆಚ್ಚು ಧನಾತ್ಮಕ ಭಾವ ಮೂಡುತ್ತದೆ...’

ಹೀಗೆ ಹೇಳಿದ್ದು ಹಿರಿಯ ನಟ ಅನಂತ ನಾಗ್. ಅವರು ಹೇಳಿದ್ದು ಪುನೀತ್ ರಾಜ್‌ಕುಮಾರ್‌ ನಿರ್ಮಾಣದ ‘ಕವಲುದಾರಿ’ ಚಿತ್ರದ ಬಗ್ಗೆ. ಚಿತ್ರದ ಮೊದಲ ಹಾಡಿನ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು.

ಮಾತಿನ ನಡುವೆ ಅವರ ನೆನಪುಗಳು ಮೂವತ್ತೈದು ವರ್ಷಗಳ ಹಿಂದಕ್ಕೆ ಜಾರಿದವು. ‘ಭಕ್ತ ಪ್ರಹ್ಲಾದ ಚಿತ್ರದಲ್ಲಿ ನಾರದನ ಪಾತ್ರ ಮಾಡುವಂತೆ ನನಗೆ ಪಾರ್ವತಮ್ಮ ಅವರು ಹೇಳಿದ್ದರು. ಚಿತ್ರದ ಸೆಟ್‌ಗೆ ಹೋದಾಗ ಪುಟ್ಟ ಅಪ್ಪು (ಪುನೀತ್) ಪ್ರಹ್ಲಾದನ ಪಾತ್ರ ನಿಭಾಯಿಸುತ್ತಿದ್ದ. ಅವನನ್ನು ನಾನು ಆಗ ಅಪ್ಪಿ ಮುದ್ದಾಡುತ್ತಿದ್ದೆ. ಈಗ ಪುನೀತ್ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ನಾನು ಅಭಿನಯಿಸುತ್ತಿದ್ದೇನೆ. ಇದು ನನ್ನ ಜೀವನದಲ್ಲಿ ಮೈಲುಗಲ್ಲು ಎನ್ನುವಂತಹ ಸಿನಿಮಾ’ ಎಂದು ಖುಷಿಯಿಂದ ಹೇಳಿಕೊಂಡರು ಅನಂತ್ ನಾಗ್.

ADVERTISEMENT

‘ಕವಲುದಾರಿ ಚಿತ್ರ ಸಿದ್ಧವಾಗಿದೆ. ಚಿತ್ರದಲ್ಲಿ ಐದು ಹಾಡುಗಳು ಇವೆ. ಪ್ರತಿ ಸೋಮವಾರ ಒಂದೊಂದು ಹಾಡು ಬಿಡುಗಡೆ ಮಾಡುತ್ತೇವೆ’ ಎಂದು ಪ್ರಕಟಿಸಿದರು ನಿರ್ದೇಶಕ ಹೇಮಂತ್ ರಾವ್.

‘ಅನಂತ್ ಅಭಿಮಾನಿ’

‘ನಾನು ಅನಂತ್ ನಾಗ್ ಅವರ ಅಭಿಮಾನಿ. ಅಷ್ಟೇ ಅಲ್ಲ, ನಾನು ಚಿಕ್ಕವನಾಗಿದ್ದಾಗ ಶಂಕರ್ ನಾಗ್ ಅವರ ಬಳಿ ಒಮ್ಮೆ, ನಾನು ಅನಂತ್ ನಾಗ್ ಅಭಿಮಾನಿ ಎಂದು ಹೇಳಿದ್ದೆನಂತೆ. ಇದನ್ನು ನನಗೆ ಅಮ್ಮ (ಪಾರ್ವತಮ್ಮ) ತಿಳಿಸಿದ್ದರು’ ಎನ್ನುತ್ತ ಮಾತಿಗೆ ನಿಂತರು ಪುನೀತ್.

‘ಈ ಸಿನಿಮಾದ ಕೆಲಸಗಳು ಆರಂಭವಾಗಿ ಹದಿನೈದು ತಿಂಗಳುಗಳು ಕಳೆದವು. ಗೋಧಿ ಬಣ್ಣ ಸಾಧಾರಣ ಮೈಕಟ್ಟು ಚಿತ್ರ ಮಾಡಿದ್ದ ಹೇಮಂತ್ ಅವರು ಈ ಚಿತ್ರ ಮಾಡಲು ನಮ್ಮ ಬಳಿ ಬಂದಾಗ ಖುಷಿ ಆಯಿತು’ ಎಂದು ಹಿಂದಿನ ದಿನಗಳ ನೆನಪು ಮಾಡಿಕೊಂಡರು.

ಸಸ್ಪೆನ್ಸ್ ಥ್ರಿಲ್ಲರ್ ಕಥಾಹಂದರ ಇರುವ ಈ ಚಿತ್ರದಲ್ಲಿ ರಿಷಿ ಅವರು ಟ್ರಾಫಿಕ್ ಪೊಲೀಸ್ ಪಾತ್ರ ನಿಭಾಯಿಸಿದ್ದಾರೆ. ಅವರ ಪಾತ್ರದ ಹೆಸರು ಇನ್‌ಸ್ಪೆಕ್ಟರ್‌ ಶ್ಯಾಂ.

‘ಅಪ್ಪು, ನಂಗೊಂದು ಚಾನ್ಸ್ ಕೊಡು’

ಹಾಡುಗಳ ಬಿಡುಗಡೆ ಕಾರ್ಯಕ್ರಮಕ್ಕೆ ನಟ, ನಿರ್ಮಾಪಕ ರಾಘವೇಂದ್ರ ರಾಜ್‌ಕುಮಾರ್ ಅವರೂ ಬಂದಿದ್ದರು. ‘ಅಪ್ಪು ನನಗೆ ದೊಡ್ಡ ಮಗ ಇದ್ದಂತೆ’ ಎಂದು ಮಾತು ಆರಂಭಿಸಿದರು.

ನಂತರ ಪುನೀತ್ ಅವರ ಕಡೆ ತಿರುಗಿ, ‘ನೀನು ನಿರ್ಮಾಣ ಕ್ಷೇತ್ರದಲ್ಲಿ ಬೆಳೆಯುತ್ತೀಯಾ...’ ಎಂದರು. ‘ಆಮೇಲೆ, ನಂಗೂ ಒಂದು ಚಾನ್ಸ್‌ ಕೊಡು ಮಾರಾಯಾ’ ಎಂದು ಪ್ರೀತಿಯಿಂದ ಹೇಳಿದರು.

‘ನಮ್ಮಲ್ಲಿ ಯಾರೂ ಕೂಡ ನಮ್ಮ ಅಮ್ಮನ (ಪಾರ್ವತಮ್ಮ) ಹೆಜ್ಜೆಯನ್ನು ತುಳಿಯಲಿಲ್ಲ. ನಾವೆಲ್ಲ ಅಪ್ಪಾಜಿ (ಡಾ. ರಾಜ್‌ಕುಮಾರ್) ನಡೆದ ಹಾದಿಯನ್ನು ಅನುಸರಿಸಿದೆವು. ಆದರೆ ಅಪ್ಪು ಮಾತ್ರ ಅಮ್ಮನನ್ನು ಅನುಸರಿಸುತ್ತಿದ್ದಾನೆ’ ಎಂದು ಮೆಚ್ಚುಗೆ ಸೂಚಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.