ADVERTISEMENT

‘ಕವಲುದಾರಿ’ ಚಿತ್ರದ ರಿಮೇಕ್‌ಗೆ ಡಿಮ್ಯಾಂಡ್‌

​ಪ್ರಜಾವಾಣಿ ವಾರ್ತೆ
Published 29 ಏಪ್ರಿಲ್ 2019, 9:25 IST
Last Updated 29 ಏಪ್ರಿಲ್ 2019, 9:25 IST
ಹೇಮಂತ್‌ ರಾವ್
ಹೇಮಂತ್‌ ರಾವ್   

ಹೇಮಂತ್‌ ರಾವ್‌ ನಿರ್ದೇಶನದ ಪಿಆರ್‌ಕೆ ಪ್ರೊಡಕ್ಷನ್‌ನ ಮೊದಲ ಸಿನಿಮಾ ‘ಕವಲುದಾರಿ’ಯ ರಿಮೇಕ್‌ಗೆ ಫುಲ್ ಡಿಮ್ಯಾಂಡ್ ಸೃಷ್ಟಿಯಾಗಿದೆ.

ಹಿಂದಿ, ತೆಲುಗು, ತಮಿಳು ಮತ್ತು ಮಲಯಾಳ ಭಾಷೆಯಲ್ಲಿ ಈ ಚಿತ್ರ‌ ನಿರ್ಮಿಸಲು ಬೇಡಿಕೆ ಬಂದಿದೆಯಂತೆ. ಇದು ಕಮರ್ಷಿಯಲ್ ಅಂಶಕ್ಕೆ ಹೆಚ್ಚು ಒತ್ತು ನೀಡದ ವಿಭಿನ್ನವಾದ ನಿರೂಪಣೆ ಇರುವ ಸಿನಿಮಾ. ತಾಂತ್ರಿಕವಾಗಿಯೂ ಗಟ್ಟಿತನದಿಂದ ಕೂಡಿದೆ.

ಕನ್ನಡದ ಪ್ರೇಕ್ಷಕರು ಈ ಸಿನಿಮಾವನ್ನು ಹೇಗೆ ಸ್ವೀಕರಿಸುತ್ತಾರೆ ಎಂಬ ಆತಂಕ ಹೇಮಂತ್‌ ರಾವ್‌ಗೆ‌ ಇತ್ತಂತೆ. ಈಗ ಚಿತ್ರವನ್ನು ಪ್ರೇಕ್ಷಕರು ಒಪ್ಪಿಕೊಂಡಿರುವುದಕ್ಕೆ ಅವರಿಗೆ ಖುಷಿಯಾಗಿದೆ. ಇದನ್ನು ಹಂಚಿಕೊಳ್ಳಲೆಂದೇ ಅವರು ಚಿತ್ರತಂಡದ ಸಮೇತ ಸುದ್ದಿಗೋಷ್ಠಿಗೆ ಹಾಜರಾಗಿದ್ದರು.

ADVERTISEMENT

‘ಪುನೀತ್ ರಾಜ್‌ಕುಮಾರ್ ಸರ್ ಮತ್ತು ಅಶ್ವಿನಿ ಮೇಡಂ ಅವರು ಯಾವುದೇ ಷರತ್ತು ವಿಧಿಸಿರಲಿಲ್ಲ. ನನಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿದ್ದರು. ಹಾಗಾಗಿ, ಇಂತಹ ಸಿನಿಮಾ ನಿರ್ದೇಶಿಸಲು ಸಾಧ್ಯವಾಯಿತು’ ಎಂದು ಸ್ಮರಿಸಿದರು.

‘ಗೋಧಿ ಬಣ್ಣ ಸಾಧಾರಣ ಮೈಕಟ್ಟು’ ಚಿತ್ರ ಮಾಡುವಾಗಲೂ ಪ್ರೇಕ್ಷಕರು ಈ ಸಿನಿಮಾವನ್ನು ಸ್ವೀಕರಿಸುತ್ತಾರೆಯೇ ಎಂಬ ಅಳುಕು ಅವರಿಗೆ ಇತ್ತಂತೆ. ಕೊನೆಗೆ, ಈ ಆತಂಕವನ್ನು ದೂರ ಸರಿಸಿದ್ದು ಅನಂತನಾಗ್. ಇದೇ ಆತಂಕದ ‘ಕವಲುದಾರಿ’ಯಲ್ಲಿ ಸಾಗಿದ್ದ ಅವರಿಗೆ ಮತ್ತೆ ಅನಂತನಾಗ್ ಅವರೇ ನೆರವಿಗೆ ಬಂದರಂತೆ. ಪ್ರಸ್ತುತ ಕವಲುದಾರಿ ಚಿತ್ರ ರಾಜ್ಯದ ವಿವಿಧೆಡೆ ಉತ್ತಮ ಪ್ರದರ್ಶನ ಕಾಣುತ್ತಿದೆ. ಅಮೆರಿಕದಲ್ಲಿಯೂ ತೆರೆಕಂಡಿದೆ. ಹಂತ ಹಂತವಾಗಿ ದುಬೈ, ಸಿಂಗಪುರ ಸೇರಿದಂತೆ ಯುರೋ‍ಪ್‌ನಲ್ಲಿ ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ.

ನಾಯಕ‌ ನಟ ರಿಷಿಗೆ ಇದು ಎರಡನೇ ಸಿನಿಮಾ. ‘ಆಪರೇಷನ್ ಅಲಮೇಲಮ್ಮ’ ಚಿತ್ರದ ಯಶಸ್ಸಿನ‌ ಬಳಿಕ ಮತ್ತೊಂದು ಗೆಲುವಿನ ಹೆಜ್ಜೆ ಇಟ್ಟಿರುವ ಅವರ ಮೊಗದಲ್ಲಿ ಖುಷಿ ಇತ್ತು. ಅವರ ಮಾತುಗಳಲ್ಲಿ ಅದು ವ್ಯಕ್ತವೂ ಆಯಿತು. ‘ಸಿನಿಮಾ ನಿರ್ದೇಶಕನ ಮಾಧ್ಯಮ. ರಂಗಭೂಮಿ ನಟರ ಮಾಧ್ಯಮ. ಕವಲುದಾರಿಯ ಸ್ಕ್ರಿಪ್ಟ್ ಬಗ್ಗೆ ಎಲ್ಲರೂ‌ ಮೆಚ್ಚುಗೆಯಿಂದ ಮಾತನಾಡುತ್ತಿದ್ದಾರೆ. ಇದು ಕಂಟೆಂಟ್ ಇರುವ ಸಿನಿಮಾ. ಐಪಿಎಲ್, ಎಲೆಕ್ಷನ್ ನಡುವೆಯೂ ಒಳ್ಳೆಯ ಕಲೆಕ್ಷನ್ ಸಿಕ್ಕಿದೆ’ ಎಂದರು ರಿಷಿ.

ನಟ ಅನಂತನಾಗ್, ‘ಕಥೆ ಚೆನ್ನಾಗಿದೆ. ತಾಂತ್ರಿಕವಾಗಿಯೂ ಗಟ್ಟಿತನವಿದೆ. ಇದೇ ಸಿನಿಮಾದ ಯಶಸ್ಸಿನ ಗುಟ್ಟು’ ಎಂದರು.

‘ಈ ಚಿತ್ರದಲ್ಲಿಯೂ ರಾಜಕಾರಣವಿದೆ. ರಾಜಕಾರಣ ಕುರಿತು ಚಿತ್ರ ಮಾಡಿ ಜನರಲ್ಲಿ‌ ಪರಿವರ್ತನೆ‌ ತರಬಹುದು ಎನ್ನುವುದು ಸುಳ್ಳು. ಈ ಹಾದಿಯಲ್ಲಿ ಸಾಗಿದ್ದ ನಾನು ಭ್ರಮನಿರಸನಗೊಂಡಿದ್ದು ಉಂಟು’ ಎಂದು‌ ನಕ್ಕರು.

ನಟ ನೀನಾಸಂ ಸಂಪತ್‌ ಈ ಚಿತ್ರದಲ್ಲಿನ ರಾಜಕಾರಣಿಯ ಪಾತ್ರಕ್ಕಾಗಿ ಹಲವು ಚಿತ್ರಗಳಲ್ಲಿ ನಟಿಸುವ ಅವಕಾಶಗಳನ್ನು ಅವರು ತಿರಸ್ಕರಿಸಿದರಂತೆ. ನಟ ಅಚ್ಯುತ್‌ ಕುಮಾರ್, ರೋಶಿನಿ ಪ್ರಕಾಶ್, ಚರಣ್ ರಾಜ್, ಅದ್ವೈತ ಗುರುಮೂರ್ತಿ ಅನುಭವ ಹಂಚಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.