ಪಿಆರ್‌ಕೆ ಪ್ರೊಡಕ್ಷನ್ಸ್ ನಿರ್ಮಾಣ ಸಂಸ್ಥೆಯ ಮೊದಲ ಚಿತ್ರ ‘ಕವಲುದಾರಿ’. ಇದು ಶುಕ್ರವಾರ ತೆರೆಗೆ ಬರುತ್ತಿದೆ. ಸಮವಸ್ತ್ರದಲ್ಲಿರುವ ಭಾರತೀಯರಿಗೆ ಇದು ಸಮರ್ಪಿತ ಎಂದು ಚಿತ್ರತಂಡ ಈಗಾಗಲೇ ಘೋಷಿಸಿಯಾಗಿದೆ.
ಚಿತ್ರದ ಬಿಡುಗಡೆ ಬಗ್ಗೆ ತಿಳಿಸಲು ಪುನೀತ್ ರಾಜ್‌ಕುಮಾರ್ ಅವರೇ ಪತ್ರಿಕಾಗೋಷ್ಠಿ ಕರೆದಿದ್ದರು. ಅವರ ಜೊತೆಯಲ್ಲಿ ನಾಯಕ ನಟ ರಿಷಿ, ನಟಿ ರೋಶನಿ, ಹಿರಿಯ ನಟ ಅನಂತ್ ನಾಗ್ ಮತ್ತು ನಿರ್ದೇಶಕ ಹೇಮಂತ್ ರಾವ್ ಇದ್ದರು.
ಚುನಾವಣೆಯ ಕಾವು ಏರಿದೆ, ಐಪಿಎಲ್ ಜ್ವರ ಆವರಿಸಿದೆ... ಇದರ ನಡುವೆಯೇ ‘ಕವಲುದಾರಿ’ ಚಿತ್ರ ಬಿಡುಗಡೆ ಆಗುತ್ತಿದೆ. ಆದರೆ, ಸಿನಿತಂಡದ ಯಾವ ಸದಸ್ಯರ ಮುಖದಲ್ಲೂ ಆತಂಕ ಕಾಣಿಸುತ್ತಿರಲಿಲ್ಲ. ಎಲ್ಲರೂ ಖುಷ್ ಆಗಿದ್ದರು.
‘ನಮ್ಮ ಚಿತ್ರ ಶುಕ್ರವಾರ ಬಿಡುಗಡೆ ಕಾಣುತ್ತಿದೆ. ಇಡೀ ದೇಶ ಕವಲು ದಾರಿಯಲ್ಲಿ ಇರುವ ಹೊತ್ತಲ್ಲಿ ಅದೇ ಹೆಸರು ಹೊತ್ತ ನಮ್ಮ ಸಿನಿಮಾ ಬಿಡುಗಡೆ ಆಗುತ್ತಿದೆ. ದೇಶದ ಈಗಿನ ಮನಃಸ್ಥಿತಿ ಚಿತ್ರದ ಹೂರಣಕ್ಕೆ ಹೊಂದಿಕೆ ಆಗುವಂತಿದೆ’ ಎಂದರು ರಿಷಿ. ಹೀಗೆ ಹೇಳುವ ಮೂಲಕ, ‘ದೇಶ ಕವಲುದಾರಿಯಲ್ಲಿ ಇದೆಯೇ, ಚಿತ್ರದಲ್ಲಿನ ಕಥೆ ಅದನ್ನು ಹೇಳುತ್ತಿದೆಯೇ’ ಎಂಬ ಪ್ರಶ್ನೆ ಹುಟ್ಟಿಸಿದರು.
ಹಾಗೆಯೇ, ‘ಚಿತ್ರಮಂದಿರಕ್ಕೆ ಬಂದು ಸಿನಿಮಾ ನೋಡಿ. ಟ್ರೇಲರ್ ವೀಕ್ಷಿಸಿದ ಸಿನಿ ಅಭಿಮಾನಿಗಳಿಂದ ನಮಗೆ ವಿಭಿನ್ನ ಪ್ರತಿಕ್ರಿಯೆಗಳು ಬಂದಿವೆ. ಸಿನಿಮಾ ತಾಜಾ ಆಗಿದೆ’ ಎಂಬುದನ್ನು ಹೇಳಲು ಅವರು ಮರೆಯಲಿಲ್ಲ.
ಸಂಗೀತಕ್ಕೆ ಸಂಬಂಧಿಸಿದ ಒಂದಿಷ್ಟು ಕೆಲಸಗಳನ್ನು ಹೇಮಂತ್ ಅವರು ಹೊರದೇಶದಲ್ಲಿ ಮಾಡಿಸಿದ್ದಾರೆ. ‘ಈ ಸಿನಿಮಾದಲ್ಲಿ ಒಂದು ಮರ್ಡರ್ ಮಿಸ್ಟರಿ ಇದ್ದಿರಬಹುದು. ಅದರ ಜೊತೆಯಲ್ಲೇ ಸಾಮಾಜಿಕವಾಗಿ ಪ್ರಸ್ತುತ ಆಗಿರುವ ವಿಚಾರವೊಂದನ್ನು ಹೇಳುವ ಕೆಲಸ ಮಾಡಿದ್ದೇವೆ. ಈ ಚಿತ್ರದಲ್ಲಿ ಮನರಂಜನೆಯ ಜೊತೆ ಉತ್ತಮ ಸಂದೇಶವೂ ಇದೆ’ ಎಂದರು ಹೇಮಂತ್.
ಛಾಯಾಗ್ರಹಣದಲ್ಲಿ ಕೆಲವು ಹೊಸ ಪ್ರಯತ್ನಗಳನ್ನು ಮಾಡಿರುವುದು ‘ಕವಲುದಾರಿ’ಯ ಹೆಗ್ಗಳಿಕೆ ಎಂದು ಚಿತ್ರತಂಡ ಹೇಳಿಕೊಂಡಿದೆ. ಚಿತ್ರವು ರಾಜ್ಯದೆಲ್ಲೆಡೆ ಮಾತ್ರವಲ್ಲದೆ, ದೇಶದ ಪ್ರಮುಖ ನಗರಗಳಲ್ಲಿ ಕೂಡ ಬಿಡುಗಡೆ ಆಗುತ್ತಿದೆ. ದೆಹಲಿ, ದಕ್ಷಿಣ ಭಾರತದ ಪ್ರಮುಖ ನಗರಗಳು ಚಿತ್ರ ತೆರೆ ಕಾಣುತ್ತಿರುವ ನಗರಗಳ ಪಟ್ಟಿಯಲ್ಲಿ ಇವೆ.
‘ಈ ಸಿನಿಮಾ ನೋಡಿದ ನಂತರ, ಸಮವಸ್ತ್ರದಲ್ಲಿ ಇರುವವರನ್ನು ಸಮಾಜ ಬೇರೊಂದು ದೃಷ್ಟಿಕೋನದಿಂದ ನೋಡಲಿದೆ ಎಂಬ ವಿಶ್ವಾಸ ನನ್ನದು’ ಎಂದರು ಅನಂತ್ ನಾಗ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.