ADVERTISEMENT

ಕವಿತಾ ಕೃಷ್ಣಮೂರ್ತಿ ಗಾಯನಕ್ಕೆ ಐದು ದಶಕ: ಸಂಭ್ರಮಕ್ಕಾಗಿ ಸಂಗೀತ ಸಂಜೆ ಆಯೋಜನೆ

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2024, 10:01 IST
Last Updated 22 ನವೆಂಬರ್ 2024, 10:01 IST
<div class="paragraphs"><p>ಕವಿತಾ ಕೃಷ್ಣಮೂರ್ತಿ ಸುಬ್ರಮಣಿಯಂ</p></div>

ಕವಿತಾ ಕೃಷ್ಣಮೂರ್ತಿ ಸುಬ್ರಮಣಿಯಂ

   

ಮುಂಬೈ: ಕನ್ನಡ, ಹಿಂದಿ ಸೇರಿದಂತೆ ಬಹುಭಾಷಾ ಹಿನ್ನೆಲೆ ಗಾಯಕಿ ಕವಿತಾ ಕೃಷ್ಣಮೂರ್ತಿ ಸುಬ್ರಮಣಿಯಂ ಅವರು ಗಾಯನ ಲೋಕಕ್ಕೆ ಕಾಲಿಟ್ಟು ಐದು ದಶಕಗಳು ಪೂರೈಸಿವೆ. ಇದೇ ಸಂದರ್ಭದಲ್ಲಿ ಮುಂಬೈನಲ್ಲಿ ವಿಶೇಷ ಸಂಗೀತ ಕಾರ್ಯಕ್ರಮವನ್ನು ಅವರು ಆಯೋಜಿಸಿದ್ದಾರೆ.

ಲಯಬದ್ಧ ಸಂಗೀತ ಹಾಗೂ ಮೋಹಕ ಧ್ವನಿಯ ಮೂಲಕ ಗೀತೆಗಳಿಗೆ ಜೀವ ತುಂಬಿದ ಕವಿತಾ ಅವರು ಈವರೆಗೂ 28 ಸಾವಿರ ಚಿತ್ರಗೀತೆಗಳನ್ನು ಹಾಡಿದ್ದಾರೆ. ಆ ಮೂಲಕ ಭಾರತೀಯ ಸಿನಿಮಾ ರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ.

ADVERTISEMENT

ಮುಂಬೈನ ಸಿಯಾನ್‌ನಲ್ಲಿರುವ ಷಣ್ಮುಖಾನಂದ ಸಭಾಂಗಣದಲ್ಲಿ ಶನಿವಾರ (ನ. 23) ಸಂಜೆ 7ಕ್ಕೆ ನಡೆಯಲಿರುವ ‘ದಿ ಕೆ ಫ್ಯಾಕ್ಟರ್‌’ ಎಂಬ ವಿಶಿಷ್ಟ ಬಗೆಯ ಸಂಗೀತ ಕಾರ್ಯಕ್ರಮವನ್ನು ಅವರು ಆಯೋಜಿಸಿದ್ದಾರೆ. ಬಾಲಿವುಡ್‌ನಲ್ಲಿ ಆಯಾ ಕಾಲಘಟ್ಟದಲ್ಲಿ ಅವರು ಹಾಡಿದ ಪ್ರಮುಖ ಹಾಡುಗಳನ್ನು ಕಾರ್ಯಕ್ರಮದಲ್ಲಿ ಮತ್ತೆ ಕೇಳುವ ಅವಕಾಶ, ಜತೆಗೆ ಅದಕ್ಕೆ ನೃತ್ಯದ ಲಯವೂ ಒಳಗೊಂಡಿರಲಿದೆ. ನಡುವೆ ಕೆಲ ಅಪರೂಪ ದೃಶ್ಯಗಳ ಪ್ರದರ್ಶನವೂ ಇರಲಿದೆ ಎಂದು ವರದಿಯಾಗಿದೆ.

ಹೇಮಾ ಮಾಲಿನಿ, ಮಾಧುರಿ ದೀಕ್ಷಿತ್, ಪ್ಯಾರೆಲಾಲ್ ಶರ್ಮಾ, ಎ.ಆರ್. ರೆಹಮಾನ್, ಜಾವೇದ್ ಅಖ್ತರ್ ಹಾಗೂ ಇತರ ಖ್ಯಾತನಾಮರು ಈ ಸಂಗೀತ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಕವಿತಾ ಅವರೊಂದಿಗಿನ ಬಾಂಧವ್ಯ ಹಾಗೂ ಕೆಲಸ ಕುರಿತು ಅವರು ತಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳಲಿದ್ದಾರೆ.

ಕನ್ನಡದಲ್ಲಿ ಹೂವೇ ಹೂವೇ, ಎಂದೋ ಕಂಡ ಕನಸು, ಭಾಲೊ ಬಾಷಿ ಬೆಂಗಾಲಿಲಿ, ಹಿಂದಿಯಲ್ಲಿ ಕೋಯಿ ಮಿಲ್‌ ಗಯಾ, ಧೀಮ್‌ ಧೀಮ್, ಇಷ್ಕ್‌ ಬಿನಾ, ಆಜ್‌ ಮೇ ಊಪರ್‌ ಗೀತೆಗಳು ಸೇರಿದಂತೆ ಹಲವು ಗೀತೆಗಳಿಗೆ ಭಾವ ತುಂಬಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.