ಲಕ್ಷ್ಮಿ ಬಾರಮ್ಮ ಮತ್ತು ವಿದ್ಯಾ ವಿನಾಯಕ ಧಾರಾವಾಹಿಗಳಲ್ಲಿ ಸಹಜ ನಟನೆಯ ಮೂಲಕ ಕಿರುತೆರೆಯ ವೀಕ್ಷಕರ ಮನಗೆದ್ದವರು ನಟಿ ಕವಿತಾ ಗೌಡ. ‘ಶ್ರೀನಿವಾಸ ಕಲ್ಯಾಣ’ ಸಿನಿಮಾದ ಮೂಲಕ ಹಿರಿತೆರೆಗೆ ಜಿಗಿದ ಕವಿತಾ ಕೈಯಲ್ಲಿ ಈಗ ಸಾಲು ಸಾಲು ಸಿನಿಮಾಗಳಿವೆ. ಅವರ ನಟನೆಯ ಎರಡನೇಯ ಸಿನಿಮಾ ‘ಗುಬ್ಬಿ ಮೇಲೆ ಬ್ರಹ್ಮಾಸ್ತ್ರ’ ಆಗಸ್ಟ್‌ನಲ್ಲಿ ತೆರೆಗೆ ಬರಲಿದೆ. ಈ ಸಿನಿಮಾದ ಮೇಲೆ ಬಹಳಷ್ಟು ನಿರೀಕ್ಷೆ ಇಟ್ಟುಕೊಂಡಿರುವ ಅವರು ತಮ್ಮ ಸಿನಿ ಬದುಕಿನ ಕುರಿತ ಅನಿಸಿಕೆಗಳನ್ನು ‘ಸಿನಿಮಾ ಪುರವಣಿ’ ಜತೆಗೆ ಹಂಚಿಕೊಂಡಿದ್ದಾರೆ.
‘ಟಿ.ವಿ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಾಗ ನಿರ್ದೇಶಕರೊಬ್ಬರು ಧಾರಾವಾಹಿಯಲ್ಲಿ ನಟಿಸಲುಅವಕಾಶ ನೀಡಿದರು. ನಟಿಸಿದ್ದರೆ ಪುನರ್ ವಿವಾಹ ಧಾರಾವಾಹಿಯಲ್ಲಿ ಮೊದಲುನಟಿಸಬೇಕಿತ್ತು. ಆದರೆ, ವಯಸ್ಸಿನಲ್ಲಿಚಿಕ್ಕವಳಾಗಿದ್ದು ಪಾತ್ರಕ್ಕೆ ಸರಿಹೋಗದ ಕಾರಣಕ್ಕೆ ಆ ಧಾರಾವಾಹಿ ಬಿಡಬೇಕಾಗಿ ಬಂತು. ಆ ನಂತರ ಕನ್ನಡದ ಎರಡು ಧಾರಾವಾಹಿಗಳ ಜತೆಗೆ ತೆಲುಗು ಮತ್ತು ತಮಿಳು ಧಾರಾವಾಹಿಗಳಲ್ಲಿ ನಟಿಸುವ ಅವಕಾಶ ಸಿಕ್ಕಿತು. ತೆಲುಗಿನ ‘ರಾಧಾಗೋಪಾಲ ಸ್ವಾತಿ ಚಿನುಕುಲು’, ತಮಿಳಿನ ‘ನೀಲಿ’ ಧಾರಾವಾಹಿಗಳಲ್ಲಿ ನಟಿಸಿದ್ದೇನೆ. ನಾನು ಯಾವುದೇ ನಟನಾ ಶಾಲೆಯಲ್ಲಿ ಅಭಿನಯ ಕಲಿಯಲಿಲ್ಲ. ಕಿರುತೆರೆಯೇ ನನಗೆ ನಟನೆ ಕಲಿಸಿದ ಮೊದಲ ಪಾಠ ಶಾಲೆ’ ಎನ್ನುತ್ತಾರೆ ನಟಿ ಕವಿತಾ.
‘ದಿಗಂತ್ ನಾಯಕನಾಗಿರುವ ‘ಹುಟ್ಟುಹಬ್ಬದ ಶುಭಾಷಯಗಳು’ ಚಿತ್ರದಲ್ಲಿ ನಾಯಕಿಯಾಗಿ ನಟಿಸುತ್ತಿದ್ದೇನೆ. ಶೇ 90ರಷ್ಟು ಚಿತ್ರೀಕರಣ ಮುಗಿದಿದೆ. ಈ ಸಿನಿಮಾದಲ್ಲಿ ನಮ್ಮದೊಂದು ಫ್ರೆಂಡ್ಸ್ ಗ್ರೂಪ್ ಇರುತ್ತದೆ.ಪಾರ್ಟಿಯೊಂದರಲ್ಲಿ ಕೊಲೆಯಾಗುತ್ತದೆ. ಆ ಕೊಲೆ ಪ್ರಕರಣದಿಂದ ದಿಗಂತ್ ಹೇಗೆ ಪಾರಾಗುತ್ತಾರೆ ಎನ್ನುವುದು ಚಿತ್ರದಕಥಾಹಂದರ. ಈ ಸಿನಿಮಾದಲ್ಲಿ ನನ್ನ ಪಾತ್ರದ ಬಗ್ಗೆ ಸ್ವಲ್ಪ ಹೇಳಿದರೂ, ಇಡೀ ಸಿನಿಮಾ ಕಥೆಯೇ ರಿವೀಲ್ ಆಗಿಬಿಡುತ್ತದೆ’ ಎನ್ನುವ ಮೂಲಕ ಕವಿತಾ ತಮ್ಮ ಪಾತ್ರದ ಬಗ್ಗೆ ಕುತೂಹಲ ಕಾಯ್ದುಕೊಂಡರು.
ಇದಲ್ಲದೇ ಇನ್ನೆರಡು ಹೊಸ ಚಿತ್ರಗಳು ಕೈಯಲ್ಲಿವೆ. ಒಂದು ಸಿನಿಮಾದಲ್ಲಿ ಕ್ರೀಟಾಪಟುವಿನ ಪಾತ್ರ, ಮತ್ತೊಂದು ಸಿನಿಮಾದಲ್ಲಿ ಮಂಗಳೂರಿನ ಹುಡುಗಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ. ಈ ಚಿತ್ರ ಆರು ಭಾಷೆಗಳಲ್ಲಿ ಬರಲಿದ್ದು, ದೊಡ್ಡ ಬಜೆಟ್ ಚಿತ್ರವಿದು. ಇದು ಮುಂದಿನ ವರ್ಷದಿಂದ ಚಿತ್ರೀಕರಣ ಶುರುವಾಗಲಿದೆ ಎಂದ ಅವರು, ತಮ್ಮ ಕೈಯಲ್ಲಿರುವ ಹೊಸ ಸಿನಿಮಾಗಳ ಬಗ್ಗೆಯೂ ಸುಳಿವು ನೀಡಿದರು.
ಕ್ರೀಡಾಪಟು ಪಾತ್ರದ ಸಿನಿಮಾಕ್ಕೆ ಸಾಕಷ್ಟು ತಯಾರಿ ನಡೆಸುತ್ತಿದ್ದೇನೆ. ಕ್ರೀಡಾಪಟುಗೆ ಇರಬೇಕಾದ ಫಿಟ್‌ನೆಸ್ ಕಾಯ್ದುಕೊಳ್ಳಲು ಕಸರತ್ತು ಮಾಡುತ್ತಿದ್ದೇನೆ ಎಂದು ಮಾತು ವಿಸ್ತರಿಸಿದರು.
‘ಗುಬ್ಬಿ ಮೇಲೆ ಬ್ರಹ್ಮಾಸ್ತ್ರ’ದಲ್ಲಿನ ಪಾತ್ರದ ಬಗ್ಗೆ ಕೇಳಿದರೆ, ಈಸಿನಿಮಾದಲ್ಲಿ ಪರ್ಪಲ್ ಬಣ್ಣ ಮೆಚ್ಚುವ ಹುಡುಗಿಯ ಪಾತ್ರ ನನ್ನದು. ನಾನು ಬಳಸುವ ಬ್ಯಾಗ್, ಬಟ್ಟೆ, ರೂಮ್ ಹೀಗೆ ಪ್ರತಿಯೊಂದುಪರ್ಪಲ್ ಕಲರ್ ಆಗಿರುತ್ತದೆ. ಅವಳ ಪಾಡಿಗೆ ಅವಳು ಖುಷಿಯಾಗಿರುವಂತಹ ಹುಡುಗಿ ನಾನು. ಇದರಲ್ಲಿ ನಾಯಕ ರಾಜ್ ಬಿ.ಶೆಟ್ಟಿಯವರು ಮದುವೆಯಾಗಲು ಹುಡುಗಿ ಹುಡುಕುವ ವರನ ಪಾತ್ರ. ಇದರಲ್ಲಿ ಅವರಿಗೆ ನಾನು ಹೇಗೆ ಇಷ್ಟವಾಗುತ್ತೇನೆ, ನಾನು ಅದಕ್ಕೆ ಹೇಗೆ ಸ್ಪಂದಿಸುತ್ತೇನೆ, ಕೊನೆಗೆ ಮದುವೆ ಆಗುತ್ತಾ, ಇಲ್ಲವೇ ಎನ್ನುವುದು ಚಿತ್ರದ ಕುತೂಹಲ. ಇದೊಂದು ರೊಮ್ಯಾಂಟಿಕ್ ಕಾಮಿಡಿ ಸಿನಿಮಾ. ನಾನು ಮೊದಲು ಅಭಿನಯಿಸಿದ್ದ ಶ್ರೀನಿವಾಸಪ್ಪ ನಟನೆ ಮತ್ತು ನಿರ್ದೇಶನದ ‘ಶ್ರೀನಿವಾಸ ಕಲ್ಯಾಣ’ ಕೂಡ ರೊಮ್ಯಾಂಟಿಕ್ ಕಾಮಿಡಿ ಸಿನಿಮಾವೇ ಆಗಿತ್ತು ಎಂದು ನೆನಪಿಸಿಕೊಂಡರು.
ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಸಿನಿಮಾದ ಚಿತ್ರೀಕರಣದ ಸೆಟ್‌ನಲ್ಲೂ, ಪ್ರೇಕ್ಷಕರು ತೆರೆ ಮೇಲೆ ಹಾಸ್ಯ ದೃಶ್ಯಗಳನ್ನು ನೋಡಿ ನಗುವಂತೆ ನಾವು ಕೂಡ ಎಂಜಾಯ್ ಮಾಡಿದ್ದೇವೆ.ನಿರ್ದೇಶಕ ಸುಜಯ್ ಶಾಸ್ತ್ರಿ ಜತೆಗೆ ಇದು ನನ್ನ ಮೊದಲ ಸಿನಿಮಾ. ಅವರಿಂದಲೂ ಸಾಕಷ್ಟು ಕಲಿತಿದ್ದೇನೆ ಎಂದು ಹೇಳಲು ಅವರು ಮರೆಯಲಿಲ್ಲ.
ಮನೆಯಲ್ಲಿ ಅಮ್ಮ ಯಾವುದಕ್ಕೂ ನಿರ್ಬಂಧ ಹೇರುವುದಿಲ್ಲ. ನಮಗೆ ಇಷ್ಟಬಂದದ್ದನ್ನು ಆಯ್ದುಕೊಳ್ಳಬಹುದು. ಆದರೆ, ಅದು ಒಳ್ಳೆಯದಾಗಿರಬೇಕು ಮತ್ತು ಬದುಕಿಗೆ ಒಳ್ಳೆಯದು ಮಾಡುವಂತಿರಬೇಕು. ನನ್ನ ವೃತ್ತಿ ಬದುಕಿಗೂ ಅಮ್ಮ ಮತ್ತು ತಂಗಿಯಿಂದ ಅಪಾರ ಪ್ರೋತ್ಸಾಹ ಇದೆ ಎನ್ನುವ ಮಾತು ಸೇರಿಸಿದರು ಈ ನಟಿ.
ಪಾತ್ರಗಳ ಆಯ್ಕೆ ಬಗ್ಗೆ ಮಾತು ಹೊರಳಿದಾಗ, ‘ಯಾವುದೇ ಸಿನಿಮಾ ಒಪ್ಪಿಕೊಳ್ಳುವ ಮೊದಲು ಸ್ಕ್ರಿಪ್ಟ್ ನೋಡುತ್ತೇನೆ. ಅದು ನಾನು ಮಾಡಬಹುದಾದ ಪಾತ್ರವಾಗಿದ್ದರೆ ಮಾತ್ರ ಒಪ್ಪಿಕೊಳ್ಳುತ್ತೇನೆ. ಕಲಾವಿದೆಯಾಗಿ ಆ ಪಾತ್ರಕ್ಕೆ ಸಂಪೂರ್ಣ ನ್ಯಾಯ ಒದಗಿಸಬೇಕೆನ್ನುವುದು ನನ್ನ ಉದ್ದೇಶ. ನಾನು ಈವರೆಗೆ ನಟಿಸಿದ ಪಾತ್ರಗಳಲ್ಲಿ ಯಾವೊಬ್ಬ ನಿರ್ದೇಶಕರು ನಾಟಕೀಯವಾದ ನಟನೆಯನ್ನು ಬಯಸಿಲ್ಲ. ಸಹಜ ಅಭಿನಯ ಸಾಕು ಎನ್ನುತ್ತಾರೆ. ಹಾಗಾಗಿಯೇ ಯಾವುದೇ ಪಾತ್ರವಿರಲಿ, ಸಹಜಾಭಿನಯಕ್ಕೆ ಒತ್ತು ನೀಡುತ್ತೇನೆ.ಹೆಚ್ಚು ಸಿನಿಮಾಗಳನ್ನು ನೋಡುವ ಅಭ್ಯಾಸ ಇಟ್ಟುಕೊಂಡಿದ್ದೇನೆ. ಇದು ಪಾತ್ರ ಪೋಷಣೆಗೂ ನನಗೆ ನೆರವಾಗುತ್ತದೆ’ ಎನ್ನುತ್ತಾರೆ ಅವರು.
ಕಿರುತೆರೆ ಮತ್ತು ಹಿರಿತೆರೆ ನಡುವೆ ಭೇದಭಾವ ಎಣಿಸುವುದಿಲ್ಲ. ನನಗೆ ನಟನೆ ಮೇಲೆ ಅಭಿಮಾನ ಮತ್ತು ಆಸಕ್ತಿ. ಈಗ ಬ್ಯಾಕ್ ಟು ಬ್ಯಾಕ್ ಸಿನಿಮಾಗಳು ಕೈಯಲ್ಲಿರುವುದರಿಂದ ಹಿರಿತೆರೆಯಲ್ಲಿ ಬ್ಯುಸಿ ಇದ್ದೇನೆ.ಅವಕಾಶ ಎಲ್ಲಿಯವರೆಗೆ ಇರುತ್ತವೆಯೋ ಅಲ್ಲಿವರೆಗೆ ಹಿರಿತೆರೆ. ಆ ನಂತರ ಇದ್ದೇ ಇದೆ ಮೊದಲ ಪಾಠಶಾಲೆ ಎನ್ನುವ ಮಾತು ಹೇಳಿದರು.
ಗ್ಲಾಮರ್, ಬೋಲ್ಡ್‌ನೆಸ್ ಬಗ್ಗೆಯೂ ಮುಕ್ತವಾಗಿ ಮಾತನಾಡಿದ ಈ ನಟಿ, ‘ಪಾತ್ರದ ಅಗತ್ಯಕ್ಕೆ ತಕ್ಕಷ್ಟು ಗ್ಲಾಮರಸ್, ಬೋಲ್ಡಾಗಿ ಕಾಣಿಸಿಕೊಳ್ಳಲು ಅಡ್ಡಿ ಇಲ್ಲ. ಅದು ಕೂಡ ಆ ಪಾತ್ರಕ್ಕೆ ಅಗತ್ಯವಿದೆ ಎನ್ನುವುದು ಮನವರಿಕೆಯಾದರಷ್ಟೇ ಮಾತ್ರ. ಅದಕ್ಕಿಂತ ಮೀರಿ ಓವರ್ ಎಕ್ಸ್‌ಪೋಸ್ ನನಗೆ ಹಿಡಿಸುವುದಿಲ್ಲ. ತುಂಬಾ ಬೋಲ್ಡ್ ಆಗಿ ಕಾಣಿಸಿಕೊಳ್ಳಲು ಹಿಂಜರಿಕೆ ಇದ್ದೇ ಇದೆ. ಏಕೆಂದರೆ ಪಾತ್ರವನ್ನು ಪ್ರೇಕ್ಷಕರಾದವರೂ ಫೀಲ್ ಮಾಡುತ್ತಾರಲ್ಲವೇ?’ ಎನ್ನುವುದು ಕವಿತಾ ನುಡಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.