‘ಮಹಾನಟಿ’ ಸಿನಿಮಾದ ಯಶಸ್ಸಿನ ನಂತರ ದಕ್ಷಿಣ ಭಾರತೀಯ ಸಿನಿರಂಗದಲ್ಲಿ ಬಹು ಬೇಡಿಕೆಯ ನಟಿಯಾಗಿರುವ ಕೀರ್ತಿ ಸುರೇಶ್ ಶೀಘ್ರದಲ್ಲೇ ‘ಸಖಿ’ಯಾಗಿ ಕಾಣಿಸಿಕೊಳ್ಳಲಿದ್ದಾರೆ.
ಮಾನವ ಕಳ್ಳಸಾಗಾಣಿಕೆಯ ಕಥಾ ಹಂದರ ಹೊಂದಿರುವ ‘ಸಖಿ’ಯಲ್ಲಿ ಕೀರ್ತಿಯದ್ದು ಪ್ರಧಾನ ಪಾತ್ರ. ನರೇಂದ್ರನಾಥ್ ನಿರ್ದೇಶಿಸಲಿರುವ ಈ ಸಿನಿಮಾದಲ್ಲಿ ಕೀರ್ತಿ ಧೈರ್ಯವಂತ ಹೆಣ್ಣುಮಗಳ ಪಾತ್ರ ಮಾಡುತ್ತಿರುವುದು ವಿಶೇಷ. ವೇಶ್ಯಾವಾಟಿಕೆಯ ಕೂಪದಲ್ಲಿ ಬಿದ್ದಿರುವ ಮಹಿಳೆಯರನ್ನು ಸಂರಕ್ಷಣೆ ಮಾಡುವ ಪಾತ್ರದಲ್ಲಿ ಕೀರ್ತಿ ಸುರೇಶ್ ತೆರೆಯ ಮೇಲೆ ಹೇಗೆ ಕಾಣಿಸಿಕೊಳ್ಳಲಿದ್ದಾರೆ ಎಂಬ ಬಗ್ಗೆ ಈಗಾಗಲೇ ಕೀರ್ತಿ ಅಭಿಮಾನಿಗಳಲ್ಲಿ ಲೆಕ್ಕಾಚಾರ ಶುರುವಾಗಿದೆ.
ಇತ್ತೀಚೆಗಷ್ಟೇ ಮಾಧ್ಯಮಗಳಲ್ಲಿ ವರದಿಯಾದ ಮಾನವ ಕಳ್ಳಸಾಗಾಣಿಕೆ ಕುರಿತ ನೈಜ ಘಟನೆಯನ್ನಾಧರಿಸಿದ ಸಿನಿಮಾ ಇದಾಗಿದೆ ಎನ್ನುತ್ತಾರೆ ನಿರ್ದೇಶಕ ನರೇಂದ್ರನಾಥ್. ಸಿನಿಮಾಕ್ಕೆ ತಕ್ಕಂತೆ ಅಲ್ಲಲ್ಲಿ ಕಥೆಯಲ್ಲಿ ಬದಲಾವಣೆ ಮಾಡಿಕೊಳ್ಳಲಾಗಿದ್ದು, ಚಿತ್ರದಲ್ಲಿ ನರೇಶ್, ನಾಡಿಯಾ, ರಾಜೇಂದ್ರ ಪ್ರಸಾದ್, ಭಾನು ಶ್ರೀಮೆಹ್ತಾ ಪಾತ್ರವರ್ಗದಲ್ಲಿದ್ದಾರೆ.
ಫೆಬ್ರುವರಿಯಲ್ಲಿ ‘ಸಖಿ’ ಚಿತ್ರೀಕರಣ ಆರಂಭವಾಗಿದ್ದು, ಹೈದರಾಬಾದ್ ಭಾಗದ ಚಿತ್ರೀಕರಣ ಮುಕ್ತಾಯವಾಗಿದೆ. ಸದ್ಯಕ್ಕೆ ಕೇರಳದಲ್ಲಿ ಚಿತ್ರೀಕರಣದಲ್ಲಿ ನಿರತವಾಗಿರುವ ಚಿತ್ರತಂಡ, ಶೀಘ್ರದಲ್ಲೇ ಯುರೋಪ್‌ಗೆ ತೆರಳಲಿದೆ. ಚಿತ್ರವನ್ನು ಈಸ್ಟ್ ಕೋಸ್ಟ್ ಪ್ರೊಡಕ್ಷನ್‌ನ ಮಹೇಶ್ ಕೊನೆರು ನಿರ್ಮಿಸುತ್ತಿದ್ದು, ‘ಮಹಾನಟಿ’ಯಲ್ಲಿ ಕ್ಯಾಮೆರಾ ಕೆಲಸ ಮಾಡಿದ್ದ ಡ್ಯಾನಿ ಸ್ಯಾನ್ಚೆಲೋಪೆಜ್ ಈ ಚಿತ್ರಕ್ಕೂ ಕ್ಯಾಮೆರಾ ಹಿಡಿದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.