ನಟಿ ಕೀರ್ತಿ ಸುರೇಶ್ ಪ್ರಧಾನಪಾತ್ರದಲ್ಲಿ ನಟಿಸಿರುವ, ಈಶ್ವರ್ ಕಾರ್ತಿಕ್ ನಿರ್ದೇಶನದ ಚೊಚ್ಚಲ ಸಿನಿಮಾ ‘ಪೆಂಗ್ವಿನ್’ ಇದೇ ಜೂನ್ ತಿಂಗಳಲ್ಲಿ ಡಿಜಿಟಲ್ ವೇದಿಕೆಯಲ್ಲಿಬಿಡುಗಡೆಯಾಗಲಿದೆ. ಈ ಸಿನಿಮಾ ಮೇ ಮೊದಲ ವಾರದಲ್ಲೇ ಬಿಡುಗಡೆಯಾಗಬೇಕಿತ್ತು. ಆದರೆ ಕೊರೊನಾ ಲಾಕ್ಡೌನ್ನಿಂದಾಗಿ ನಿಗದಿತ ಸಮಯಕ್ಕೆ ಬಿಡುಗಡೆ ಮಾಡಲು ಚಿತ್ರತಂಡಕ್ಕೆ ಸಾಧ್ಯವಾಗಿಲ್ಲ.
ಈಚೆಗಿನ ವರದಿ ಪ್ರಕಾರ ಈ ಚಿತ್ರದ ಹಕ್ಕನ್ನು ಅಮೆಜಾನ್ ಪ್ರೈಮ್ ವಿಡಿಯೊ ಪಡೆದುಕೊಂಡಿದ್ದು, ಜೂನ್ ತಿಂಗಳಲ್ಲಿ ಈ ಸಿನಿಮಾ ಡಿಜಿಟಲ್ ವೇದಿಕೆ ಮೂಲಕ ಪ್ರದರ್ಶನವಾಗಲಿದೆ.
ಈ ಚಿತ್ರಕ್ಕೆ ಕಾರ್ತಿಕ್ ಸುಬ್ಬರಾಜ್ ಅವರು ಬಂಡವಾಳ ಹೂಡಿದ್ದಾರೆ. ‘ಅಮೆಜಾನ್ ಪ್ರೈಮ್ ವಿಡಿಯೊ ಜೊತೆ ಚಿತ್ರದ ನಿರ್ಮಾಪಕರು ಆರಂಭಿಕ ಮಾತುಕತೆ ನಡೆಸಿದ್ದಾರೆ. ಈ ಚಿತ್ರವನ್ನು ತಮಿಳು ಹಾಗೂ ತೆಲುಗು ಎರಡೂ ಭಾಷೆಯಲ್ಲಿ ಬಿಡುಗಡೆಗೊಳಿಸಲು ಅವರು ಯೋಜನೆ ಮಾಡುತ್ತಿದ್ದಾರೆ. ಒಪ್ಪಂದಕ್ಕೆ ಸಹಿ ಮಾಡಿದ ಬಳಿಕ ಈ ಬಗ್ಗೆ ಅಧಿಕೃತ ಘೋಷಣೆ ಮಾಡಲಿದ್ದಾರೆ’ ಎಂದು ಚಿತ್ರತಂಡದ ಮೂಲಗಳು ತಿಳಿಸಿವೆ.
‘ಪೆಂಗ್ವಿನ್’ ಸಿನಿಮಾವು ಮಹಿಳಾ ಕೇಂದ್ರಿತ ಥ್ರಿಲ್ಲರ್ ಕತೆಯಾಧಾರಿತವಾಗಿದೆ. ಈ ಸಿನಿಮಾದ ಟೈಟಲ್ ಹಾಗೂ ಮೊದಲ ಪೋಸ್ಟರ್ 2019ರ ಅಕ್ಟೋಬರ್ 17 ಕೀರ್ತಿ ಸುರೇಶ್ ಹುಟ್ಟುಹಬ್ಬದ ದಿನದಂದು ಬಿಡುಗಡೆ ಮಾಡಲಾಗಿತ್ತು. ಈ ಚಿತ್ರದಲ್ಲಿ ಕೀರ್ತಿ, ಗರ್ಭಿಣಿ ಪಾತ್ರದಲ್ಲಿ ನಟಿಸಿದ್ದಾರೆ. ಚಿತ್ರದ ಬಹುಭಾಗ ಚಿತ್ರೀಕರಣವು ಊಟಿಯಲ್ಲಿ ನಡೆದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.