ಕೊಚ್ಚಿ: ಅತ್ಯಾಚಾರ ಪ್ರಕರಣ ಎದುರಿಸುತ್ತಿದ್ದ ಮಲಯಾಳ ನಟ ನಿವಿನ್ ಪೋಳಿ ಅವರು ತಪ್ಪಿತಸ್ಥರಲ್ಲ ಎಂದು ಕೇರಳ ಪೊಲೀಸರು ಬುಧವಾರ ಹೇಳಿದ್ದಾರೆ.
‘ವರ್ಷದ ಹಿಂದೆ ದುಬೈನಲ್ಲಿ ನಿವಿನ್ ನನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ’ ಎಂದು ಮಹಿಳೆ ದೂರಿದ್ದರು. ಮಹಿಳೆ ನೀಡಿದ ದೂರು ಆಧರಿಸಿ ನಟ ನಿವಿನ್ ವಿರುದ್ಧ ಕೇರಳ ಪೊಲೀಸರು ಎಫ್ಐಆರ್ ದಾಖಲಿಸಿದ್ದರು.
ಪ್ರಕರಣದ ತನಿಖೆ ನಡೆಸಿದ ಉಪ ಪೊಲೀಸ್ ವರಿಷ್ಠಾಧಿಕಾರಿ, ಇತ್ತೀಚಿಗಷ್ಟೇ ಸ್ಥಳೀಯ ನ್ಯಾಯಾಲಯಕ್ಕೆ ನಿವಿನ್ ಅವರ ಹೆಸರು ಹೊರತುಪಡಿಸಿ ಉಳಿದ ಆರೋಪಿಗಳ ಹೆಸರಿರುವ ವರದಿಯನ್ನು ಸಲ್ಲಿಸಿದ್ದರು. ತನಿಖೆಯ ವೇಳೆ ಮಹಿಳೆ ಮೇಲೆ ಅತ್ಯಾಚಾರ ನಡೆದಿದೆ ಎನ್ನಲಾದ ಸ್ಥಳದಲ್ಲಿ ಮತ್ತು ಆ ಸಮಯದಲ್ಲಿ ನಿವಿನ್ ಇರಲಿಲ್ಲ ಎನ್ನುವುದು ತನಿಖೆಯ ವೇಳೆ ಗೊತ್ತಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ,
‘ನಿವಿನ್ ಅವರ ಪಾಸ್ಪೋರ್ಟ್, ಕ್ರೆಡಿಟ್ ಕಾರ್ಡ್ಗಳ ವ್ಯವಹಾರ ಸೇರಿದಂತೆ ಪ್ರಯಾಣದ ದಾಖಲೆಗಳನ್ನು ನಾವು ಪರಿಶೀಲಿಸಿದ್ದೇವೆ. ಆದರೆ ದೂರಿನಲ್ಲಿ ಇರುವ ಮಾಹಿತಿಗೂ ದಾಖಲೆಗಳಿಗೂ ಹೋಲಿಕೆಯಾಗುತ್ತಿಲ್ಲ. ಘಟನೆ ನಡೆಯುವ ವೇಳೆ ನಿವಿನ್ ಸ್ಥಳದಲ್ಲಿದ್ದರು ಎನ್ನುವುದಕ್ಕೆ ಯಾವುದೇ ದಾಖಲೆಗಳಿಲ್ಲ’ ಎಂದು ಹಿರಿಯ ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದ್ದಾರೆ.
ಆದರೆ ಇತರ ಆರೋಪಿಗಳ ವಿರುದ್ಧ ತನಿಖೆ ಮುಂದುವರಿಯಲಿದೆ ಎಂದೂ ಅವರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.