ಬಹುನಿರೀಕ್ಷಿತ ಕೆಜಿಎಫ್ ಚಾಪ್ಟರ್ – 2 ಏ. 14ರಂದು ಬಿಡುಗಡೆ ಆಗಲಿದೆ. ದೇಶವಿದೇಶಗಳ ‘ರಾಕಿಭಾಯ್’ ಅಭಿಮಾನಿಗಳು ಈ ಚಿತ್ರದ ಸ್ವಾಗತಕ್ಕೆ ತುದಿಗಾಲಲ್ಲಿ ನಿಂತಿದ್ದಾರೆ. ಹಿಂದಿ ಭಾಷಾ ಪ್ರದೇಶದಲ್ಲೇ ಇದುವರೆಗೆ ₹ 11.40 ಕೋಟಿ ಮೊತ್ತದ ಮುಂಗಡ ಟಿಕೆಟ್ ಬುಕ್ಕಿಂಗ್ ಆಗಿದೆ. ಈ ಚಿತ್ರ ಬಿಡುಗಡೆಗೂ ಒಂದು ದಿನ ಮುನ್ನ (ಏ. 13) ವಿಜಯ್ ದಳಪತಿ ಅವರ ‘ಬೀಸ್ಟ್’ ಚಿತ್ರ ಬಿಡುಗಡೆಯಾಗುತ್ತಿದೆ. ಆದರೆ, ಕೆಜಿಎಫ್ ಹವೆಯ ಎದುರು ‘ಬೀಸ್ಟ್’ ಮಂಕಾಗುವ ಆತಂಕ ಎದುರಿಸುತ್ತಿದೆ.
ಕೆಜಿಎಫ್ ಚಾಪ್ಟರ್ 2ನ ಐದು ಭಾಷಾ ಅವತರಣಿಕೆಗಳು ಸೇರಿ₹ 20 ಕೋಟಿ ಮೊತ್ತದ ಮುಂಗಡ ಬುಕ್ಕಿಂಗ್ ಆಗಿದೆ. ಮೊದಲ ದಿನದ ಟಿಕೆಟ್ ದರ ₹ 1,450ರಿಂದ ₹ 2,000ವರೆಗೂ ಇದೆ. ಮೊದಲ ಪ್ರದರ್ಶನ ನಡುರಾತ್ರಿ 1ಗಂಟೆಯಿಂದ ಆರಂಭವಾಗಲಿದೆ.
ಯಾಕೆ ಕ್ರೇಜ್?
ಈ ವಾರಾಂತ್ಯದಲ್ಲಿ ಸಾಲು ರಜೆಗಳು ಬಂದಿವೆ. ಏ. 14 ಅಂಬೇಡ್ಕರ್ ಜಯಂತಿ, 15ರಂದು ಗುಡ್‌ಫ್ರೈಡೇ, 16ರಂದು ಶನಿವಾರ, 17ರಂದು ಭಾನುವಾರ ಹೀಗೆ ಸಾಲು ರಜಾಗಳು ಇರುವುದು ಪ್ರೇಕ್ಷಕರು ಚಿತ್ರಮಂದಿರದತ್ತ ಬರುವಂತಾಗಲು ಇರುವ ಪ್ಲಸ್ ಪಾಯಿಂಟ್.
ತೆರೆ ಲೆಕ್ಕ
ಗುರುವಾರ ಕೆಜಿಎಫ್ ಚಾಪ್ಟರ್ 2 ರಾಜ್ಯದ 500 ಏಕತೆರೆಯ ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣಲಿದೆ. ತಮಿಳುನಾಡಿನಲ್ಲಿ 1 ಸಾವಿರ ಏಕತೆರೆಯ ಚಿತ್ರಮಂದಿರಗಳ ಪೈಕಿ 350 ಚಿತ್ರಮಂದಿರಗಳಲ್ಲಿ ತೆರೆ ಕಾಣಲಿದೆ ಎಂದು ಹೊಂಬಾಳೆ ಫಿಲ್ಮ್ಸ್‌ನ ಪ್ರತಿನಿಧಿಯೊಬ್ಬರು ಮಾಹಿತಿ ನೀಡಿದರು.
ತೆಲುಗು ಅವತರಣಿಕೆಗೂ ಇದೇ ರೀತಿಯ ಪ್ರತಿಕ್ರಿಯೆ ಇದೆ.
‘ಬೀಸ್ಟ್’ ಚಿತ್ರವು ಬುಧವಾರ ರಾಜ್ಯದ 300 ಚಿತ್ರಮಂದಿರಗಳಲ್ಲಿ 1,500 ಪ್ರದರ್ಶನ ಕಾಣಲಿದೆ. ಮರುದಿನ ಕೆಜಿಎಫ್ –2 ಬಿಡುಗಡೆ ಹಿನ್ನೆಲೆಯಲ್ಲಿ ‘ಬೀಸ್ಟ್’ ಚಿತ್ರವು 50 ಚಿತ್ರಮಂದಿರಗಳಲ್ಲಷ್ಟೇ ಪ್ರದರ್ಶನ ಕಾಣಲಿದೆ.
ಈ ಎರಡು ಚಿತ್ರಗಳ ಅಬ್ಬರದ ಹಿನ್ನೆಲೆಯಲ್ಲಿ ಶಾಹಿದ್ ಕಪೂರ್ ನಟನೆಯ ‘ಜೆರ್ಸಿ’ ಚಿತ್ರದ ಬಿಡುಗಡೆ ಮುಂದಕ್ಕೆ ಹೋಗಿದೆ. ಬಾಲಿವುಡ್ ಪ್ರಭಾವಳಿಯ ಪ್ರದೇಶದಲ್ಲೂ ಕೆಜಿಎಫ್–2 ಹವೆಯೆಬ್ಬಿಸಿರುವುದು ಇದಕ್ಕೆ ಕಾರಣ.
ಒಟ್ಟಿನಲ್ಲಿ ಕೆಜಿಎಫ್ 2 ಚಿತ್ರೋದ್ಯಮದ ವಾಣಿಜ್ಯ ಲೆಕ್ಕಾಚಾರದಲ್ಲಿ ಮಹತ್ವದ ದಾಖಲೆ ಸ್ಥಾಪಿಸಲಿದೆ ಎಂಬ ನಿರೀಕ್ಷೆ ನಿಚ್ಚಳವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.