ಬೆಂಗಳೂರು: ಪ್ರಶಾಂತ್ ನೀಲ್ ನಿರ್ದೇಶನ, ರಾಕಿಂಗ್ ಸ್ಟಾರ್ ಯಶ್ ಅಭಿನಯಿಸಿರುವ 'ಕೆಜಿಎಫ್–2' ಸಿನಿಮಾ ಬಾಕ್ಸ್‌ಆಫೀಸ್ ಲೆಕ್ಕಾಚಾರದಲ್ಲಿ ಮತ್ತೊಂದು ದಾಖಲೆ ಬರೆದಿದೆ.
ಈ ಸಿನಿಮಾದ ಹಿಂದಿ ಅವತರಣಿಕೆ ಬರೋಬ್ಬರಿ ₹391.65 ಕೋಟಿ ಗಳಿಕೆ ಮಾಡಿದೆ ಎಂದು ವರದಿಯಾಗಿದೆ. ಇದರೊಂದಿಗೆ ಹಿಂದಿ ಭಾಷೆಯಲ್ಲಿ ಅತಿ ಹೆಚ್ಚು ಗಳಿಕೆ ಕಂಡ ಎರಡನೇ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಈ ಕುರಿತು ಸಿನಿಮಾ ಉದ್ಯಮ ವಿಶ್ಲೇಷಕ ತಾರಕ್ ಆದರ್ಶ್ ಎನ್ನುವವರು ಟ್ವೀಟ್ ಮಾಡಿದ್ದಾರೆ. ಹಣ ಗಳಿಕೆಯಲ್ಲಿ 'ದಂಗಲ್’ ಸಿನಿಮಾವನ್ನು ಕೆಜಿಎಫ್–2 ಹಿಂದಿಕ್ಕಿದೆ. ಇದೀಗ ಅತಿಹೆಚ್ಚು ಗಳಿಕೆ ಕಂಡ ಹಿಂದಿಯ ಎರಡನೇ ಸಿನಿಮಾ ಎನಿಸಿದೆ. ಒಟ್ಟು ₹391.65 ಕೋಟಿ ಗಳಿಸಿದೆ' ಎಂದು ಅವರು ಬರೆದುಕೊಂಡಿದ್ದಾರೆ.
ಸಲ್ಮಾನ್ ಖಾನ್ ಅಭಿನಯದ 'ಟೈಗರ್ ಜಿಂದಾ ಹೈ' ₹339.16 ಕೋಟಿ, ಅಮೀರ್ ಖಾನ್ ನಟನೆಯ 'ಪಿಕೆ' ₹ 340.8, ರಣಬೀರ್ ಕಪೂರ್ ಬಣ್ಣ ಹಚ್ಚಿದ್ದ 'ಸಂಜು' ₹ 342.53 ಕೋಟಿ ಗಳಿಕೆ ಮಾಡಿದ್ದವು. ಈ ಪಟ್ಟಿಯಲ್ಲಿ ರಾಜಮೌಳಿ ನಿರ್ದೇಶನದ 'ಬಾಹುಬಲಿ-2' ಸಿನಿಮಾ ಮೊದಲ ಸ್ಥಾನದಲ್ಲಿದೆ. ಈ ಚಿತ್ರ ₹ 510.99 ಗಳಿಸಿದೆ ಎನ್ನಲಾಗಿದೆ. ಅಮೀರ್ ಖಾನ್ ಅಭಿನಯದ 'ದಂಗಲ್' ಸಿನಿಮಾ ₹ 387.38 ಕೋಟಿ ಸಂಪಾದಿಸಿ ನಂತರದ ಸ್ಥಾನದಲ್ಲಿತ್ತು.
ಇದೀಗ ₹391.65 ಕೋಟಿ ಗಳಿಸುವ ಮೂಲಕ ಕೆಜಿಎಫ್ ಚಿತ್ರ ಎರಡನೇ ಸ್ಥಾನಕ್ಕೇರಿದೆ. ಈ ಮೂಲಕ ಅಮೀರ್ ಖಾನ್ ಅಭಿನಯದ ‘ದಂಗಲ್’ ಚಿತ್ರದ ದಾಖಲೆಯನ್ನು ಮೀರಿಸಿದೆ.
ಜಗತ್ತಿನಾದ್ಯಂತ 10 ಸಾವಿರಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಚಿತ್ರವು ₹1,000 ಕೋಟಿಗೂ ಹೆಚ್ಚು ಗಳಿಕೆ ಮಾಡಿದೆ ಎಂದು ವರದಿಯಾಗಿದೆ.
ಪ್ರಶಾಂತ್ ನೀಲ್ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಚಿತ್ರ ಏ.14ರಂದು ವಿಶ್ವದಾದ್ಯಂತ ಬಿಡುಗಡೆಯಾಗಿದೆ. ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಕನ್ನಡ ಮಾತ್ರವಲ್ಲದೆ, ಹಿಂದಿ, ತೆಲುಗು, ತಮಿಳು ಮತ್ತು ಮಲಯಾಳಂನಲ್ಲಿ ತುಂಬಿದ ಚಿತ್ರಮಂದಿರಗಳಲ್ಲಿ ಪ್ರದರ್ಶನವಾಗುತ್ತಿದೆ.
ಹೊಂಬಾಳೆ ಫಿಲಂಸ್ ನಿರ್ಮಾಣದ ಕೆಜಿಎಫ್ ಚಾಪ್ಟರ್–2 ಸಿನಿಮಾದಲ್ಲಿ ಯಶ್ ನಾಯಕ ನಟನಾಗಿ ಅಭಿನಯಿಸಿದ್ದಾರೆ. ಶ್ರೀನಿಧಿ ಶೆಟ್ಟಿ ನಾಯಕಿಯಾಗಿ, ಸಂಜಯ್ ದತ್, ರವೀನಾ ಟಂಡನ್, ಪ್ರಕಾಶ್ ರಾಜ್ ಮೊದಲಾದವರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.