ನಟ ಶಿವರಾಜ್ ಕುಮಾರ್ ಅವರು ಭಾನುವಾರ'ಕೆಜಿಎಫ್ ಚಾಪ್ಟರ್ 2' ಟ್ರೈಲರ್ ಬಿಡುಗಡೆ ಮಾಡಿದರು.
ಕನ್ನಡ, ಹಿಂದಿ, ತಮಿಳು, ತೆಲುಗು ಹಾಗೂ ಮಲಯಾಳಂ ಭಾಷೆಗಳಲ್ಲಿ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ ‘ಕೆಜಿಎಫ್ ಚಾಪ್ಟರ್ 2’ ಟ್ರೈಲರ್ ಹೊರ ಬಂದಿದೆ. ಕೆಲವು ದಿನಗಳ ಹಿಂದಷ್ಟೇ 'ತೂಫಾನ್' ಹಾಡು ಬಿಡುಗಡೆ ಮಾಡಲಾಗಿತ್ತು.ರವಿ ಬಸ್ರೂರ್ ಸಂಗೀತ ನಿರ್ದೇಶನ ಮಾಡಿದ್ದಾರೆ.
'ಐ ಲವ್ ಯೂ... ಯು ಶುಡ್ ಲವ್ ಮಿ...' ಎಲ್ಲರೂ ಕೆಜಿಎಫ್-2 ಸಿನಿಮಾನ ಪ್ರೀತಿಸಬೇಕು ಎಂದು ಹೇಳಿ, ಟ್ರೇಲರ್ ಬಿಡುಗಡೆ ಮಾಡಿದ ನಟ ಶಿವರಾಜ್ ಕುಮಾರ್.
ಬೆಂಗಳೂರಿನ ಒರಾಯನ್ ಮಾಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಾಲಿವುಡ್ ಸಿನಿಮಾ ನಿರ್ಮಾಪಕ ಕರಣ್ ಜೋಹರ್ ಅವರು ನಟ ಪುನೀತ್ ರಾಜ್‌ಕುಮಾರ್ ನೆನಪು ಮಾಡಿಕೊಂಡರು. ಪ್ರೀತಿಯ 'ಅಪ್ಪು' ಅವರಿಗೆ ಮೌನಾಚರಣೆಯ ಮೂಲಕ ಗೌರವ ಸಲ್ಲಿಸಲಾಯಿತು.
'ವಾಯ್ಲೆನ್ಸ್ ಲೈಕ್ಸ್ ಮಿ....' ಟ್ರೈಲರ್ ಸಾಲು ಉಲ್ಲೇಖಿಸಿದ ಶಿವರಾಜ್ ಕುಮಾರ್, ''ಯಶ್ ನನ್ನ ಸಹೋದರನ ಹಾಗೆ. ರಾಧಿಕಾ ಕೈ ಹಿಡಿದ ಮೇಲೆ ಅದೃಷ್ಟ ಹೆಚ್ಚಿದೆ. ಯಶ್ ಹ್ಯಾಂಡ್ಸಮ್, ಅವರು ಚಿತ್ರದಲ್ಲಿ ಅದ್ಭುತವಾಗಿ ಕಾಣಿಸಿಕೊಂಡಿದ್ದಾರೆ. ಚಿತ್ರದ ಬಗ್ಗೆ ನನಗೂ ಕುತೂಹಲವಿದೆ. ಏಪ್ರಿಲ್ 14ರ ವರೆಗೆ ನಾನೂ ಕಾಯುತ್ತೇನೆ, ಮೊದಲ ದಿನವೇ ಪ್ರದರ್ಶನ ನೋಡುತ್ತೇನೆ'' ಎಂದರು.
'ಮನೋರಂಜನೆಯ ಕ್ಷೇತ್ರದಲ್ಲಿ ನಾವು ಅಂತರರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧಿಸಬೇಕಿದೆ. ಈ ಚಿತ್ರಕ್ಕೆ ಹಲವಾರು ವರ್ಷಗಳ ಪರಿಶ್ರಮ ಹಾಕಲಾಗಿದೆ. ತುಂಬಾ ಬೆವರು ಹರಿದಿದೆ. ನಿರೀಕ್ಷೆಗೂ ಮೀರಿ ಯಶಸ್ಸು ಗಳಿಸುವ ವಿಶ್ವಾಸವಿದೆ. ಟ್ರೈಲರ್ ಅದ್ಭುತವಾಗಿ ಮೂಡಿಬಂದಿದೆ. ನಿರ್ಮಾಪಕ ವಿಜಯ್ ಕಿರಗಂದೂರು, ನಿರ್ದೇಶಕ ಪ್ರಶಾಂತ್ ನೀಲ್ ಹಾಗೂ ಇಡೀ ಚಿತ್ರ ತಂಡಕ್ಕೆ ಅಭಿನಂದನೆಗಳು' ಎಂದು ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಹೇಳಿದರು.
ಪ್ರಥ್ವಿ ರಾಜ್ ಸುಕುಮಾರನ್ ಮಲಯಾಳಂ ಭಾಷೆಯಲ್ಲಿ ಚಿತ್ರದ ವಿತರಣೆ ಮಾಡುತ್ತಿದ್ದಾರೆ.
'ನಿಮ್ಮೆಲ್ಲರ ಆಶೀರ್ವಾದ, ಸಹಕಾರ ಈ ಚಿತ್ರಕ್ಕೆ ಬೇಕು. ಒಳ್ಳೆಯ, ಖಡಕ್, ಬದ್ಧತೆಯ ನಿರ್ದೇಶಕ ಪ್ರಶಾಂತ್ ನೀಲ್ ಅವರ ಜೊತೆಗೆ ಕೆಲಸ ಮಾಡಿದ್ದು ಅದ್ಭುತ. ರಾಕಿಂಗ್ ಸ್ಟಾರ್ ಯಶ್ ನಿಜವಾಗಿಯೂ ರಾಕಿಂಗ್ ಜಂಟಲ್ ಮನ್' ಎಂದು ನಟಿ ರವೀನಾ ಟಂಡನ್ ಶ್ಲಾಘಿಸಿದರು.
'40 ವರ್ಷಗಳ ಚಿತ್ರ ಜೀವನದಲ್ಲಿ ಅದ್ಭುತ ಅನುಭವ ನೀಡಿದ ಚಿತ್ರ ಕೆಜಿಎಫ್ 2. ಒಂದು ಬದ್ಧತೆಯ, ಸ್ವಚ್ಛ ಚಿತ್ರ ತಂಡವಿದು. ನನಗೆ ತುಂಬಾ ಖುಷಿ ಕೊಟ್ಟಿದೆ' ಎಂದು ಚಿತ್ರ ತಂಡದ ಎಲ್ಲರನ್ನೂ ನಟ ಸಂಜಯ್ ದತ್ ಅಭಿನಂದಿಸಿದರು.
ಕೆಜಿಎಫ್ ವರ್ಸ್ (#KGFVERSE) ಮಾರ್ಚ್ 30ರಂದು ಬಿಡುಗಡೆ ಆಗಲಿದೆ.
8 ವರ್ಷಗಳ ಪ್ರಯಾಣವಿದು. ಕೊನೆಗೂ ಇಲ್ಲಿಯವರೆಗೆ ಬಂದಿದೆ. ಈವರೆಗೆ ಕೆಜಿಎಫ್ ಚಿತ್ರವನ್ನು ವಿಶೇಷವಾಗಿ ಗುರುತಿಸಿಕೊಳ್ಳುವಂತೆ ಮಾಡಿದ್ದೀರಿ ಎಂದು ನಿರ್ದೇಶಕ ಪ್ರಶಾಂತ್ ನೀಲ್ ಮಾಧ್ಯಮಗಳಿಗೆ ಕೃತಜ್ಞತೆ ಸಲ್ಲಿಸಿದರು. ವಿಶ್ವದ ಅತ್ಯುತ್ತಮ ತಾಂತ್ರಿಕ ತಂಡ ನಮ್ಮೊಂದಿಗಿದೆ ಎಂದು ಪ್ರಶಾಂತ್ ನೀಲ್ ಅವರು ತಾಂತ್ರಿಕ ತಂಡ ಹಾಗೂ ನಟ ನಟಿಯರನ್ನು ಅಭಿನಂದಿಸಿದರು.
ಚಿತ್ರದ ಕನ್ನಡ ಟ್ರೇಲರ್ ಬಿಡುಗಡೆಯಾಗಿ ಒಂದು ಗಂಟೆಯಲ್ಲಿ 17 ಲಕ್ಷ ವೀಕ್ಷಣೆ ಕಂಡಿತು.
ಈ ಚಿತ್ರ ಎಲ್ಲ ಭಾಷೆಗಳ ಬಾಕ್ಸ್ ಆಫೀಸ್‌ನಲ್ಲಿ ಮೈಲಿಗಲ್ಲು ದಾಖಲಿಸಲಿದೆ ಎಂದು ಚಿತ್ರ ನಿರ್ದೇಶಕ, ನಿರೂಪಕ ಕರಣ್ ಜೋಹರ್ ಹೇಳಿದರು.
ರಾಕಿಂಗ್ ಸ್ಟಾರ್ ಯಶ್ ಮಾತನಾಡಿ, ನನಗೆ ಯಾವ ಅನುಭವವೂ ಆಗುತ್ತಿಲ್ಲ. ವಿ ಮಿಸ್ ಯೂ ಅಪ್ಪು (ಪುನೀತ್ ರಾಜ್ ಕುಮಾರ್) ಸರ್. 'ನಿನ್ನಿಂದಲೇ' ಸಿನಿಮಾ ಮೂಲಕ ಹೊಂಬಾಳೆ ಫಿಲ್ಮ್ಸ್ ಆರಂಭವಾಯಿತು. ಶಿವರಾಜ್ ಕುಮಾರ್ ಮಾರ್ಗದರ್ಶನದಲ್ಲಿ ಮುಂದುವರಿಯುತ್ತೇನೆ' ಎಂದರು.
'ಭಿನ್ನವಾದ ನಿರೀಕ್ಷೆಯೊಂದಿಗೆ ಬಂದಿದ್ದೀರಿ. ನೋಡೋಣ. ನಾವೂ ಭಿನ್ನವಾದ ಪ್ರಸ್ತುತಿಗೆ ಪ್ರಯತ್ನಿಸಿದ್ದೇವೆ. ಇದರಲ್ಲಿ ನನ್ನದೇನೂ ಇಲ್ಲ. ಚಿತ್ರದಲ್ಲಿ ನಿರ್ಮಾಪಕ, ನಿರ್ದೇಶಕರ ಜೊತೆ ದಿಗ್ಗಜರ ಕೊಡುಗೆ ಇದೆ. ಚಿತ್ರ ತಂಡದ ಬದ್ಧತೆ ಅದ್ಭುತವಾದದ್ದು. ಸೆಟ್ ಬಾಯ್ಸ್, ಲೈಟ್ ಬಾಯ್ ಪ್ರತಿಯೊಬ್ಬರೂ ಪ್ರಾಮಾಣಿಕತೆ ಮತ್ತು ಬದ್ಧತೆಯಿಂದ ತೊಡಗಿದ್ದಾರೆ' ಎಂದರು.
ವರ್ಲ್ಡ್ ಈಸ್ ಮೈ ಟೆರಿಟರಿ ಎಂದು ಇಡೀ ಚಿತ್ರರಂಗ ಒಂದೇ ಎಂದು ಸೂಚ್ಯವಾಗಿ ಹೇಳಿ ಯಶ್ ಮಾತು ಮುಗಿಸಿದರು..
ಪ್ರಶಾಂತ್ ನೀಲ್ ನಿರ್ದೇಶನ, ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ ಕೆಜಿಎಫ್ ಚಾಪ್ಟರ್ 2 ಸಿನಿಮಾ ಏಪ್ರಿಲ್ 14 ಕ್ಕೆ ಬಿಡುಗಡೆಯಾಗಲಿದೆ.
ಯಶ್, ಸಂಜಯ್ ದತ್, ಶ್ರೀನಿಧಿ ಶೆಟ್ಟಿ, ರವೀನಾ ಟಂಡನ್, ಪ್ರಕಾಶ್ ರಾಜ್ ಸೇರಿದಂತೆ ಹಲವು ಕಲಾವಿದರು ಅಭಿನಯಿಸಿದ್ದಾರೆ.
* ಭಯ ಮತ್ತು ಜವಾಬ್ದಾರಿ ಇದೆ. ಏನಿದ್ದರೂ ನಮ್ಮ ಕೆಲಸ ಮಾಡಬೇಕು ಅಷ್ಟೇ...
- ಯಶ್, ನಟ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.