ಕೆಜಿಎಫ್‌ನಲ್ಲಿ ಗರುಡನ ಸಾಯಿಸಿದ ಮೇಲೆ ಮುಂದೇನಾಯಿತು...ನೀವು ಓದ್ತಿರಾ? ಎಂಬ ಸಾಲಿನ ಮೂಲಕ 'ಕೆಜಿಎಫ್ ಚಾಪ್ಟರ್ 2' ಚಿತ್ರದ ಟ್ರೇಲರ್ ತೆರೆದುಕೊಳ್ಳುತ್ತದೆ. ಕೆಜಿಎಫ್ ಗಣಿಯ ವಿಸ್ತಾರ, ಮತ್ತಷ್ಟು ಮದ್ದು–ಗುಂಡುಗಳು, ಬಂದೂಕಿನ ಮೊರೆತ,...ಈ ಎಲ್ಲದರ ನಡುವೆ ಮೊದಲ ಭಾಗದಲ್ಲಿ ಕಾಣಿಸಿಕೊಳ್ಳದ ಪ್ರಮುಖ ಪಾತ್ರಗಳು ಅನಾವರಣಗೊಳ್ಳುತ್ತವೆ.
ಅನಂತ್ ನಾಗ್ ಜಾಗಕ್ಕೆ ಪತ್ರಕರ್ತನಾಗಿ ಪ್ರಕಾಶ್ ರಾಜ್ ಕಾಣಿಸಿಕೊಂಡಿದ್ದಾರೆ. 'ರಕ್ತದಿಂದ ಬರೆದಿರೊ ಕಥೆ ಇದು...ಶಾಯಿಯಿಂದ ಮುಂದುವರಿಸೋಕೆ ಆಗೊಲ್ಲ...ಮತ್ತೆ ರಕ್ತನೇ ಕೇಳುತ್ತೆ...' ಪ್ರಕಾಶ್ ರಾಜ್ ಅವರ ಈ ಡೈಲಾಗ್ ಚಿತ್ರ ಕಥೆಯ ಬಗ್ಗೆ ಸಣ್ಣ ಸುಳಿವು ನೀಡುತ್ತದೆ. ಮೊದಲ ಭಾಗದಲ್ಲಿನ ತೋರಿದ ಘರ್ಷಣೆಗಿಂತ ಹೆಚ್ಚಿನದು ಎರಡನೇ ಭಾಗದಲ್ಲಿರುವುದನ್ನು ಟ್ರೇಲರ್ ಹೇಳುತ್ತಿರುವಂತಿದೆ.
ರಾಕಿಂಗ್ ಸ್ಟಾರ್ ಯಶ್ ಅವರ 'ಹಿಂಸೆ ನನಗಿಷ್ಟವಿಲ್ಲ... ಆದರೆ, ಹಿಂಸೆ ನನ್ನನ್ನು ಇಷ್ಟ ಪಡುತ್ತದೆ. ಹಾಗಾಗಿ ನಾನು ಅದನ್ನು ನಿವಾರಿಸಲು ಆಗದು...' ಎಂದು ಇಂಗ್ಲಿಷ್‌ನಲ್ಲಿ ಹೇಳುವ ಡೈಲಾಗ್ ಟ್ರೇಲರ್‌ನ ಪಂಚ್ ಲೈನ್.
ಕನ್ನಡ, ತೆಲುಗಿನ ಟ್ರೇಲರ್‌ನಲ್ಲಿ ಯಶ್ ಅವರ ಧ್ವನಿಯಿದೆ.
ರಾಜಕೀಯ, ಮಾಫಿಯಾ ಹಾಗೂ ಜನರ ಬಿಡುಗಡೆಗೆ ಬಂದ ನಾಯಕ; ಈ ಮೂವರ ನಡುವೆ ನಡೆಯುವ ಸಂಘರ್ಷದ ಕಥನವನ್ನು ಕೆಜಿಎಫ್ ಚಾಪ್ಟರ್–2 ತೋರಲಿದೆ ಎಂಬುದನ್ನು ಟ್ರೇಲರ್ ತಿಳಿಸುತ್ತದೆ.
ದೃಶ್ಯಗಳು ಮತ್ತು ಸೌಂಡ್ ಎಫೆಕ್ಟ್ ಟ್ರೇಲರ್ ಅನ್ನು ಪರಿಣಾಮಕಾರಿಯಾಗಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.