ADVERTISEMENT

ಕೆಜಿಎಫ್ ₹ 200 ಕೋಟಿ ಗಳಿಕೆ ಅಧಿಕೃತವಲ್ಲ: ವಿಜಯ್‌ ಕಿರಗಂದೂರು ಸ್ಪಷ್ಟನೆ

​ಪ್ರಜಾವಾಣಿ ವಾರ್ತೆ
Published 15 ಜನವರಿ 2019, 9:58 IST
Last Updated 15 ಜನವರಿ 2019, 9:58 IST
   

‘ಕೆಜಿಎಫ್‌ ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ₹ 200 ಕೋಟಿ ಗಳಿಕೆ ಮಾಡಿದೆ ಎನ್ನುವ ಮಾಹಿತಿ ಅನಧಿಕೃತ. ಚಿತ್ರದ ಗಳಿಕೆ ಬಗ್ಗೆ ಇನ್ನೂ ನಮಗೆ ಅಧಿಕೃತ ಮಾಹಿತಿ ಸಿಕ್ಕಿಲ್ಲ’ ಎಂದು ನಿರ್ಮಾಪಕ ವಿಜಯ್‌ ಕಿರಗಂದೂರು ಸ್ಪಷ್ಟಪಡಿಸಿದರು.

ನಟ ಯಶ್ ನಟನೆಯ ‘ಕೆಜಿಎಫ್‌’ ಚಿತ್ರ 25 ದಿನ ಪೂರೈಸಿದ ಹಿನ್ನೆಲೆಯಲ್ಲಿ ಸೋಮವಾರ ರಾತ್ರಿ ಪರ್ತಕರ್ತರ ಜೊತೆಗೆ ಮಾತನಾಡಿದ ಅವರು, ‘ಸಾಮಾಜಿಕ ಜಾಲತಾಣಗಳಲ್ಲಿ ಚಿತ್ರದ ಗಳಿಕೆ ಬಗ್ಗೆ ವರದಿಗಳು ಬರುತ್ತಿವೆ. ಇವುಗಳು ಅಧಿಕೃತವಲ್ಲ. ನನಗೆ ಸರಿಯಾದ ಅಂಕಿಅಂಶ ಸಿಗಲು ಇನ್ನೂ ಒಂದು ತಿಂಗಳು ಕಾಯಬೇಕಿದೆ. ಆ ನಂತರವಷ್ಟೇ ಚಿತ್ರದ ಗಳಿಕೆ ಕುರಿತು ಮಾಧ್ಯಮದವರ ಮುಂದೆ ಮಾಹಿತಿ ನೀಡುತ್ತೇನೆ’ ಎಂದು ಹೇಳಿದರು.

ಕೆಜಿಎಫ್‌ ಚಿತ್ರ ಅಮೆರಿಕ ಮತ್ತು ಇಂಗ್ಲೆಂಡ್‌ನಲ್ಲಿ ಉತ್ತಮ ಗಳಿಕೆ ಮಾಡಿದೆ. ಇಲ್ಲಿಯವರೆಗೆ ಕನ್ನಡದ ಯಾವುದೇ ಸಿನಿಮಾ ಇಷ್ಟೊಂದು ಲಾಭ ಗಳಿಸಿದ ಉದಾಹರಣೆ ಇಲ್ಲ. ದುಬೈನಲ್ಲಿ ಮಧ್ಯರಾತ್ರಿ ಪ್ರದರ್ಶನ ಕಂಡ ಏಕೈಕ ಕನ್ನಡ ಸಿನಿಮಾ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ. ಪಾಕಿಸ್ತಾನದಲ್ಲೂ ಕೆಜಿಎಫ್‌ನ ಹಿಂದಿ ಅವತರಣಿಕೆಯು 50 ಪ್ರದರ್ಶನಗಳನ್ನು ಕಂಡಿದ್ದು, ಯಶಸ್ವಿಯಾಗಿ ಪ್ರದರ್ಶನದ ಯಾತ್ರೆಯನ್ನು ಮುಂದುವರಿಸಿದೆ. ಅಲ್ಲಿನ ಜನರು ಚಿತ್ರವನ್ನು ಮೆಚ್ಚಿಕೊಂಡಿದ್ದಾರೆ ಎಂದು ವಿವರಿಸಿದರು.

ADVERTISEMENT

ಶ್ರೀಲಂಕಾ, ಮಲೇಷ್ಯಾ, ಸಿಂಗಪುರ, ಆಸ್ಟೇಲಿಯಾದಲ್ಲೂ ಸಿನಿಮಾ ಪ್ರದರ್ಶನ ಕಾಣುತ್ತಿದೆ. ಪ್ರಸ್ತುತ ಹಿಂದಿಯಲ್ಲಿ 600 ಪರದೆಗಳಲ್ಲಿ ಪ್ರದರ್ಶನವಾಗುತ್ತಿದೆ. ‘ಸೂಪರ್‌ ಸ್ಟಾರ್’ ರಜನಿಕಾಂತ್ ನಟನೆಯ ‘ಪೆಟ್ಟಾ’ ಸಿನಿಮಾ ತೆರೆಕಂಡ ಪರಿಣಾಮ ಪ್ರಸ್ತುತ ತಮಿಳುನಾಡಿನಲ್ಲಿ ಕಡಿಮೆ ಚಿತ್ರಮಂದಿರಗಳಲ್ಲಿ ಕೆಜಿಎಫ್‌ ಪ್ರದರ್ಶನ ಕಾಣುತ್ತಿದೆ ಎಂದು ಮಾಹಿತಿ ನೀಡಿದರು.

ಮಲಯಾಳ, ತೆಲುಗಿನಲ್ಲೂ ಚಿತ್ರಕ್ಕೆ ಒಳ್ಳೆಯ ಸ್ಪಂದನೆ ಸಿಕ್ಕಿದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.