ADVERTISEMENT

‘ಕೆಜಿಎಫ್‌’ ರಿಲೀಸ್‌ಗೆ ಕೆಜಿಎಫ್‌ ಕಾತರ

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2018, 16:29 IST
Last Updated 20 ಡಿಸೆಂಬರ್ 2018, 16:29 IST
ಕೆಜಿಎಫ್‌ನ ಮೀನಾಕ್ಷಿ ಚಿತ್ರಮಂದಿರದಲ್ಲಿ ಕೆಜಿಎಫ್‌ ಚಿತ್ರದ ಪೋಸ್ಟರ್‌ಗಳ ಪಾರ್ಸೆಲ್‌ನ್ನು ಗುರುವಾರ ಚಿತ್ರಮಂದಿರದ ನೌಕರರು ಪರಿಶೀಲಿಸಿದರು
ಕೆಜಿಎಫ್‌ನ ಮೀನಾಕ್ಷಿ ಚಿತ್ರಮಂದಿರದಲ್ಲಿ ಕೆಜಿಎಫ್‌ ಚಿತ್ರದ ಪೋಸ್ಟರ್‌ಗಳ ಪಾರ್ಸೆಲ್‌ನ್ನು ಗುರುವಾರ ಚಿತ್ರಮಂದಿರದ ನೌಕರರು ಪರಿಶೀಲಿಸಿದರು   

ಕೆಜಿಎಫ್‌: ನಗರದ ಸಯನೈಡ್‌ ಗುಡ್ಡದ ಮೇಲೆ ಸುಮಾರು ಮೂರು ತಿಂಗಳ ಕಾಲ ಚಿತ್ರೀಕರಣ ನಡೆಸಿದ ಕೆಜಿಎಫ್‌ ಚಲನಚಿತ್ರದ ಬಿಡುಗಡೆ ನಗರದಲ್ಲಿರುವ ಏಕ ಮಾತ್ರ ಚಿತ್ರಮಂದಿರದಲ್ಲಿ ಶುಕ್ರವಾರ ತೆರೆಕಾಣಲಿದೆ. ಕನ್ನಡ ಚಿತ್ರವೊಂದು ರಿಲೀಸ್ ದಿನದಂದೇ ಕೆಜಿಎಫ್‌ನಲ್ಲಿ ಬಿಡುಗಡೆಯಾಗುತ್ತಿರುವುದು ಇದೇ ಮೊದಲಾಗಿದೆ.

ಚಿನ್ನದ ಗಣಿಯ ಕಾಲೊನಿಗಳ, ಶಾಫ್ಟ್‌ಗಳ ಸೆಟ್ಟಿಂಗ್ ಹಾಕಿ ಅದರಲ್ಲಿ ಚಿತ್ರೀಕರಣ ನಡೆಸಲಾಗಿತ್ತು. ಚಿತ್ರದ ಬಗ್ಗೆ ಯಾವುದೇ ಸುಳಿವು ಹೊರ ಹೋಗದಂತೆ ಚಿತ್ರೀಕರಣದ ಸಂದರ್ಭದಲ್ಲಿ ನಿರ್ಬಂಧ ವಿಧಿಸಲಾಗಿತ್ತು.

ನಟ ಯಶ್‌ ಅವರನ್ನುನೋಡಲು ಹೋಗಿ ಸೆಲ್ಫಿ ತೆಗೆದುಕೊಳ್ಳಲು ಬಯಸಿದ್ದ ಅಭಿಮಾನಿಗಳು ನಿರಾಸೆಯಿಂದ ವಾಪಸ್ ಬಂದಿದ್ದರು. ಈಗ ಕೊನೆಗೂ ಚಿತ್ರ ಬಿಡುಗಡೆ ಆಗುತ್ತಿರುವುದರಿಂದ ನಗರದಲ್ಲಿ ಕುತೂಹಲ ಮೂಡಿಸಿದೆ.

ADVERTISEMENT

ಚಿತ್ರದ ಪ್ರದರ್ಶನಕ್ಕೆ ವಿತರಕರು ಭಾರಿ ಹಣವನ್ನು ಮುಂಗಡವಾಗಿ ಕೇಳಿದ್ದರಿಂದ, ತೆರೆ ಕಾಣಲಿರುವ ಮೀನಾಕ್ಷಿ ಚಿತ್ರಮಂದಿರದ ಮಾಲೀಕ ಸಂತೋಷ್ ಕುಮಾರ್ ಚಿತ್ರ ಪ್ರದರ್ಶನಕ್ಕೆ ಹಿಂದೆ ಮುಂದೆ ನೋಡುತ್ತಿದ್ದರು. ನಂತರ ಮಾತುಕತೆಯ ಮೂಲಕ ಗುರುವಾರ ಮಧ್ಯಾಹ್ನ ಚಿತ್ರ ಪ್ರದರ್ಶನಕ್ಕೆ ಹಸಿರು ನಿಶಾನೆ ದೊರೆಯಿತು.

ಕೆಜಿಎಫ್ ಕನ್ನಡ ಅವತರಣಿಕೆಯಲ್ಲಿ ಚಿತ್ರ ಪ್ರದರ್ಶನವಾಗುತ್ತದೆ. ಈಗಾಗಲೇ ಚಿತ್ರದ ಪೋಸ್ಟರ್‌ಗಳು ಬಂದಿವೆ. ಚಿತ್ರ ಪ್ರದರ್ಶನದ ಬಗ್ಗೆ ಅಭಿಮಾನಿಗಳಿಗೆ ಯಾವುದೇ ಗೊಂದಲ ಬೇಡ ಎಂದು ಮಾಲೀಕ ಸಂತೋಷ್‌ಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.

ಕರಪತ್ರ ವಿತರಣೆ: ಕೆಜಿಎಫ್ ನಗರವನ್ನು ರೌಡಿಗಳು, ಕ್ರೂರ ಸ್ವಭಾವದವರು, ದೊಂಬಿಕೋರರು, ರಕ್ತ ಪಿಶಾಚಿಗಳು ಎಂಬ ರೀತಿಯಲ್ಲಿ ಕೆಟ್ಟದಾಗಿ ಚಿತ್ರೀಕರಣ ಮಾಡಿ, ನಗರದ ಮರ್ಯಾದೆಗೆ ಕುಂದು ತರುವ ಪ್ರಯತ್ನ ನಡೆದಿದೆ. ಇದರಿಂದಾಗಿ ನಗರದ ಯುವಕರಿಗೆ ಇತರ ಪ್ರದೇಶದಲ್ಲಿ ಉದ್ಯೋಗಾವಕಾಶಗಳು ಕಡಿಮೆಯಾಗುತ್ತಿದೆ. ಇದು ಮಾನವ ಹಕ್ಕುಗಳ ಉಲ್ಲಂಘನೆ ಎಂದು ಅನಾಮಧೇಯ ಕರಪತ್ರಗಳು ನಗರದಲ್ಲಿ ಹಂಚಲ್ಪಡುತ್ತಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.