ಬೆಂಗಳೂರು: ಕೆಜಿಎಫ್, ಕೆಜಿಎಫ್ –2 ಸಿನಿಮಾಗಳ ಮೂಲಕ ಖ್ಯಾತಿ ಪಡೆದಿರುವ ‘ಹೊಂಬಾಳೆ ಫಿಲಂಸ್’ ನಿರ್ಮಾಣ ಸಂಸ್ಥೆ ತನ್ನ ಮುಂಬರುವ ಹೊಸ ಚಿತ್ರವನ್ನು ಪ್ರಕಟಿಸಿದೆ.
‘ಸುಧಾ ಕೊಂಗಾರ ಅವರ ಜೊತೆನೈಜ ಘಟನೆ ಆಧಾರಿತ ಕುತೂಹಲಕಾರಿ ಕಥೆಯೊಂದಿಗೆ ಹೊಸ ಆರಂಭ’ ಎಂದು ಹೊಂಬಾಳೆ ಫಿಲಂಸ್ ಟ್ವೀಟ್ ಮಾಡಿದೆ.
‘ಕೆಲವು ನೈಜ ಕಥೆಗಳನ್ನು ಹೇಳಲೇ ಬೇಕು. ಸುಧಾ ಕೊಂಗಾರ ಅವರ ಜೊತೆ ನಮ್ಮ ಸಿನಿಮಾ ಪ್ರಕಟಿಸುವುದಕ್ಕೆ ಹೆಮ್ಮೆ ಎನ್ನಿಸುತ್ತಿದೆ’ ಎಂದು ಹೊಂಬಾಳೆ ಫಿಲಂಸ್ ಪೋಸ್ಟ್ ಮಾಡಿದೆ.
ಸುಧಾ ಕೊಂಗಾರ ಅವರು ಈ ಹಿಂದೆ ತಮಿಳು ನಟ ಸೂರ್ಯ, ಅಪರ್ಣಾ ಬಾಲಮುರಳಿ ಅಭಿನಯದ ‘ಸೂರರೈ ಪೊಟ್ರು’ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದರು.
ಹೊಂಬಾಳೆ ಫಿಲಂಸ್ ನಿರ್ಮಾಣದ ‘ಕೆಜಿಎಫ್–2’ ಚಿತ್ರ ಬಿಡುಗಡೆಯಾದ ಆರೇ ದಿನದಲ್ಲಿ ₹ 676 ಕೋಟಿ ಗಳಿಕೆ ಕಂಡಿದೆ ಎಂಬ ವರದಿಗಳು ಕೇಳಿಬರುತ್ತಿವೆ.
ಪ್ರಶಾಂತ್ ನೀಲ್ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಚಿತ್ರ ಏ.14ರಂದು ವಿಶ್ವದಾದ್ಯಂತ ಬಿಡುಗಡೆಯಾಗಿದೆ. ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಕನ್ನಡ ಮಾತ್ರವಲ್ಲದೆ, ಹಿಂದಿ, ತೆಲುಗು, ತಮಿಳು ಮತ್ತು ಮಲಯಾಳಂನಲ್ಲಿ ತುಂಬಿದ ಚಿತ್ರಮಂದಿರಗಳಲ್ಲಿ ಪ್ರದರ್ಶನವಾಗುತ್ತಿದೆ.
ಸಿನಿಮಾದಲ್ಲಿ ರಾಕಿಂಗ್ ಸ್ಟಾರ್ ಯಶ್ ನಾಯಕ ನಟನಾಗಿ ಅಭಿನಯಿಸಿದ್ದಾರೆ. ಶ್ರೀನಿಧಿ ಶೆಟ್ಟಿ, ಸಂಜಯ್ ದತ್, ರವೀನಾ ಟಂಡನ್, ಪ್ರಕಾಶ್ ರಾಜ್ ಮೊದಲಾದವರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.