ಭಾರಿ ಬಜೆಟ್‌ನಲ್ಲಿಮೂಡಿ ಬಂದಿದ್ದ ಬಾಹುಬಲಿ ಸಿನಿಮಾದ ಮೇಕಿಂಗ್ ವಿಡಿಯೊ ಆಗ ಸಾಕಷ್ಟು ಸುದ್ದಿ ಮಾಡಿತ್ತು.ಅದರಲ್ಲಿನ ಗ್ರಾಫಿಕ್ ಬಳಕೆ ಕಂಡು ಜನಬೆರಗಾಗಿದ್ದರು. ಈಗಕೆಜಿಎಫ್ ಸಿನಿಮಾದ ಸರದಿ... ಮಣ್ಣು ಗುದ್ದಿ ಚಿನ್ನ ತೆಗೆದ ಬೆವರಿನ ಕಥೆ ಹೇಳುವ ಕೆಜಿಎಫ್ ಮೇಕಿಂಗ್ ನೋಡಿ ‘ಅದ್ಭುತ’ ಎನ್ನುವ ಉದ್ಘಾರನಿಮ್ಮ ಮನದಲ್ಲಿ ಮೂಡುತ್ತದೆ . ಮೂರು ಭಾಗಗಳಲ್ಲಿರುವ ಕೆಜಿಎಫ್ ಮೇಕಿಂಗ್ ವಿಡಿಯೊದಲ್ಲಿ ಚಿತ್ರತಂಡ ಏನೆಲ್ಲ ಹಂಚಿಕೊಂಡಿದೆ ಎನ್ನುವ ಸಾರಾಂಶ ಇಲ್ಲಿದೆ.
***
ಗಾಡಿಯಿಂದ ಇಳಿದು ಬಯಲಲ್ಲಿ ನಿಂತು ಒಮ್ಮೆ ಸುತ್ತ ನೋಡಿದರು ಕಲಾ ನಿರ್ದೇಶಕ ಶಿವು. ಸುತ್ತಲಿನ ಜಾಗ ನೋಡಿದ್ದೇ ಅವರ ಮನಸಲ್ಲಿ ಹರ್ಷದ ಸೆಲೆಯೊಂದು ಉಕ್ಕಿಬಂತು. ‘ವಾವ್! ಎಂಥ ಜಾಗ’ ಹೀಗೊಂದು ಉದ್ಘಾರ ಗೊತ್ತಿಲ್ಲದೆಯೇ ಅವರ ಬಾಯಿಂದ ಹೊರಬೀಳುತ್ತದೆ. ‘ಇಲ್ಲಿ ಅದ್ಭುತವಾದ ಸೆಟ್ ಕಟ್ಟಬಹುದು’ ಎಂಬ ಕನಸೂ ಅವರ ಮನಸಲ್ಲಿ ಗಟ್ಟಿಯಾಗುತ್ತದೆ. ಆದರೆ ಆ ಕನಸಿನ ಆಯಸ್ಸು ಹೆಚ್ಚು ಹೊತ್ತು ಇರಲಿಲ್ಲ. ಒಂದೈದು ನಿಮಿಷದಲ್ಲೇಬೀಸತೊಡಗುತ್ತದೆ ಗಾಳಿ. ಗಾಳಿಯೆಂದರೆ ಮೈಯೊಡ್ಡಿ ಆಸ್ವಾದಿಸಬಹುದಾದ ತಂಗಾಳಿಯಲ್ಲ ಅದು. ಯಾರೋ ಬೀಸಿ ಬೀಸಿ ಒಗೆಯುತ್ತಿರುವಂತೆ ಭಾಸವಾಗುವ ಮಹಾಗಾಳಿ. ಬರೀ ಗಾಳಿಯಷ್ಟೇ ಆಗಿದ್ದರೆ ಹೇಗೋ ಸಹಿಸಿ ನಿಲ್ಲಬಹುದಿತ್ತು. ಆದರೆ ಆ ಬಯಲಲ್ಲಿ ಅದಿರಿನ ತ್ಯಾಜ್ಯಗಳ ಗುಡ್ಡಗಳಿದ್ದವು. ಸೈನೈಡ್ ಗುಡ್ಡ ಅಂತಾರೆ ಅದನ್ನ. ಆ ಗುಡ್ಡವನ್ನು ಸವರಿ ಸುತ್ತುವ ಗಾಳಿಸುಮ್ಮನೆ ಬರುವುದಿಲ್ಲ. ತನ್ನ ಜತೆಗೆ ಮಣ್ಣಿನ ಕಣಗಳನ್ನು ಹೊತ್ತು ತರುತ್ತದೆ.
‘ವಾವ್’ ಎಂದು ಉದ್ಘರಿಸಿದ ಮರುಕ್ಷಣವೇ ಶಿವು ಅವರ ಬಾಯಿ ‘ಓ ಮೈ ಗಾಡ್’ ಎಂಬ ಶಬ್ದವನ್ನೂ ಅನಾಯಾಸವಾಗಿ ಉಚ್ಛರಿಸಿತ್ತು. ಈಗಷ್ಟೇ ನಿರಾಳ ಬಯಲಾಗಿದ್ದ ಜಾಗ ಕಣ್ಮುಚ್ಚಿ ತೆಗೆಯುವುದರೊಳಗೆ ದೂಳಿನಲ್ಲಿ ಮುಚ್ಚಿ ಹೋಗಿತ್ತು. ಕಣ್ತೆರೆಯಲೂ ಸಾಧ್ಯವಿಲ್ಲದಷ್ಟು ದೂಳು. ‘ಇದು ಕೈಲಾಗದ ಕೆಲಸ’ ಎಂದು ಮನಸ್ಸು ಮುದುಡಿತ್ತು. ಸೆಟ್ ಹಾಕಲು ತಂದಿದ್ದ ಸಲಕರಣೆಗಳನ್ನು ಇಳಿಸಲೂ ಸಾಧ್ಯವಾಗದೆ ತಂಡ ಹಿಂತಿರುಗುತ್ತದೆ. ಆದರೆ ಕನಸು ಸುಮ್ಮನಿರಲು ಬಿಡಬೇಕಲ್ಲ. ಮರುದಿನ ಶಿವು ಮತ್ತು ಅವರ ತಂಡಕ್ಕೆ ಮುಖಕ್ಕೆ ಮಾಸ್ಕ್, ಕೂಲಿಂಗ್ ಗ್ಲಾಸ್, ಹೀಗೆ ಗಾಳಿಯನ್ನು ಎದುರಿಸಲು ಬೇಕಾದ ಸಲಕರಣೆಗಳೆಲ್ಲ ಬಂದಿದ್ದವು. ಪರಿಣಾಮವಾಗಿ ಒಂದಿಷ್ಟು ದಿನಗಳಲ್ಲಿ ಕೆಜಿಎಫ್‌ನ ಪಾಳು ಬಯಲಲ್ಲಿ ದೊಡ್ಡ ಸೆಟ್ ತಲೆಯೆತ್ತಿತ್ತು.
– ‘ಕೆಜಿಎಫ್’ ಸಿನಿಮಾದ ದ್ವಿತೀಯಾರ್ಧದಲ್ಲಿ ಬರುವ ಗಣಿಯ ಸೆಟ್ ನೋಡಿ ಬೆರಗಾಗದವರಿಲ್ಲ. ಆದರೆ ಈ ಸೆಟ್‌ಗಾಗಿ ಹಗಲಿರುಳು ಶ್ರಮಿಸಿದವರ ಕುರಿತು ತಿಳಿದವರು ಕಡಿಮೆ. ಈ ಚಿತ್ರದ ಕಲಾನಿರ್ದೇಶಕ ಶಿವಕುಮಾರ್ ಅವರನ್ನು ಕೆದಕಿದರೆ ತೆರೆಯ ಮೇಲಿನ ಕಥೆಗಿಂತ ರೋಚಕವಾದ ಹಲವು ಅನುಭವಗಳು ತೆರೆದುಕೊಳ್ಳುತ್ತವೆ.
ತೆರೆಯ ಮೇಲೆ ಕೆಜಿಎಫ್ ಚಿನ್ನದ ಬೆಳೆ ತೆಗೆಯುತ್ತಿದ್ದರೆ, ಈ ಸಿನಿಮಾದ ಹಿಂದಿನ ಶ್ರಮದ ಕಥೆಯನ್ನು ಹೇಳುವ ಮೇಕಿಂಗ್ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಗಮನ ಸೆಳೆಯುತ್ತಿದೆ. ಇದರಲ್ಲಿ ನಟ ಯಶ್, ಕಲಾನಿರ್ದೇಶಕ ಶಿವಕುಮಾರ್, ಡಿಓಪಿ ಭುವನ್ ಗೌಡ, ನಿರ್ಮಾಪಕ ವಿಜಯ ಕಿರಗಂದೂರು ಎಲ್ಲರೂ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.
ಸುರಕ್ಷಣಾ ಸಾಮಗ್ರಿಗಳನ್ನು ಧರಿಸಿದ ಮೇಲೂ ಸೆಟ್ ರೂಪಿಸುವುದು ಸುಲಭದ ಸಂಗತಿಯೇನೂ ಆಗಿರಲಿಲ್ಲ. ಅಲ್ಲಿನ ನೆಲದ ಮಣ್ಣು ಸಡಿಲವಾಗಿತ್ತು. ಮೇಲಿನ ಮಣ್ಣು ಗಟ್ಟಿಯೇ ಇದೆ. ಆದರೆ ಒಳಗೆ ಹೋದಂತೆಲ್ಲ ಸಡಿಲು. ಇದು ಗೊತ್ತಾಗಿದ್ದು ಕೆಲಸ ಶುರು ಮಾಡಿ ಹದಿನೈದು ದಿನ ಆದಮೇಲೆ. ಸೆಟ್ ಹಾಕಿದರೆ ನಿಲ್ಲುವುದೇ ಅನುಮಾನ. ಆದರೂ ದೃಢಮನಸ್ಸು ಮಾಡಿ ಸೆಟ್ ಕಟ್ಟಿ ನಿಟ್ಟುಸಿರುವ ಬಿಡುವಷ್ಟರಲ್ಲಿ ಮುಗಿಲು ಇವರ ತಾಳ್ಮೆಯನ್ನು ಪರೀಕ್ಷಿಸಲು ನಿಂತಿತ್ತು. ಮೋಡ ಕರಗಿ ಉದುರಿದ ಒಂದೊಂದೇ ಹನಿಗಳು ಹಲವಾಗಿ ಜಡಿಮಳೆ ಶುರುವಾಯ್ತು. ಹಗಲಿರುಳು ಶ್ರಮವಹಿಸಿ ರೂಪಿಸಿದ್ದ ಬಹುಮುಖ್ಯವಾದ ಸೆಟ್ ಒಂದು ಕಣ್ಮುಂದೆಯೇ ಮಣ್ಣುಪಾಲಾಗಿತ್ತು. ಶಿವು ಅವರ ತಂಡದ ಶ್ರಮವನ್ನು ಮಳೆ ಕಿಂಚಿತ್ ಕರುಣೆ ತೋರದೆ ತೊಳೆದು ಹಾಕಿತ್ತು.
‘ಮಳೆ ಶುರುವಾಯಿತು. ಮಳೆ ಬರುವುದಕ್ಕೆ ಮುಂಚೆ ಹತ್ತು ನಿಮಿಷ ಗಾಳಿ ಬರುತ್ತಿತ್ತು. ಅದು ಬರೀ ಗಾಳಿ ಅಲ್ಲ; ಸುಂಟರಗಾಳಿ. ಎದುರಿಗಿದ್ದವರು ಕಾಣಿಸುತ್ತಿರುಲಿಲ್ಲ. ನಾವು ನಿಂತಿದ್ದ ಜಾಗದಿಂದ ಕತ್ತೆತ್ತು ನೋಡಿದರೆ ತಗಡಿನ ಶೀಟ್‌ಗಳೆಲ್ಲ ಪಟಪಟಪಟಾಂತ ಹೊಡೆದುಕೊಳ್ಳುತ್ತಿದ್ದವು. ಒಂದೆರಡಲ್ಲ, ಮೂವತ್ತು ಶೀಟ್ ಕಣ್ಮುಂದೆಯೇ ಕಿತ್ಕೊಂಡು ಹೋಯಿತು. ಅಷ್ಟು ಶ್ರಮವಹಿಸಿ ಮಾಡಿದ ಸೆಟ್ ಅದು. ಅದರ ಜತೆಗೆ ಒಂದು ಬಾಂಧವ್ಯ ಬೆಳೆದಿರುತ್ತದೆ. ಕಣ್ಮುಂದೆಯೇ ಅದು ಬಿದ್ದು ಹೋದಾಗ ತುಂಬ ಅಪ್‌ಸೆಟ್ ಆಗಿಬಿಡುತ್ತಿತ್ತು. ಮತ್ತೆ ಹೊಸತಾಗಿ ಸಿದ್ಧಮಾಡಬೇಕು. ಮೊದಲಿದ್ದ ಹಾಗೆಯೇ ಸಿದ್ಧಮಾಡಬೇಕು. ತುಂಬ ಬೇಜಾರಾಗುತ್ತಿತ್ತು’ ಹೀಗೆ ಅನುಭವ ಹಂಚಿಕೊಳ್ಳುವಾಗ ಶಿವು ಅವರು ತುಸು ಭಾವುಕರಾಗುತ್ತಾರೆ.
ವಿಶೇಷವಾಗಿ ಕೆಜಿಎಫ್ ಕ್ಲೈಮ್ಯಾಕ್ಸ್‌ನಲ್ಲಿ ಬರುವ ಮಾರಿಜಾತ್ರೆಯ ದೃಶ್ಯಕ್ಕೆ ಹಾಕಿದ ಸೆಟ್ ಅನ್ನೂ ಶಿವು ನೆನಪಿಸಿಕೊಂಡಿದ್ದಾರೆ. ತೆರೆಯ ಮೇಲಿನ ನಾಲ್ಕೈದು ನಿಮಿಷಗಳ ದೃಶ್ಯಕ್ಕಾಗಿ ಐದಾರು ದಿನಗಳ ರಾತ್ರಿ ಪಟ್ಟ ಕಷ್ಟ ಸಾರ್ಥಕವಾದ ಧನ್ಯತೆಯಲ್ಲಿ ತಂಡವಿದೆ. ಇವಿಷ್ಟು ಮೊದಲ ಭಾಗದ ಮೇಕಿಂಗ್ ವಿಡಿಯೊದ ವಿಷಯಗಳು.
ಎರಡನೇ ಭಾಗದ ಮೇಕಿಂಗ್ ವಿಡಿಯೊದಲ್ಲಿ ಕೆಜಿಎಫ್ ಪಯಣ ಹೇಗೆ ಶುರುವಾಯಿತು, ರಾಕಿ ಪಾತ್ರ ಮತ್ತು ಯಶ್ ನಟನೆಯ ಕುರಿತ ಮಾತುಕತೆಗಳು ಇಲ್ಲಿ ಬಿಚ್ಚಿಕೊಳ್ಳುತ್ತವೆ. ಕೂದಲು, ಗಡ್ಡದಿಂದ ಎಷ್ಟೆಲ್ಲ ರೀಟೇಕ್ ಆಗಿವೆ. ಅದಕ್ಕಾಗಿ ಯಶ್ ಪಟ್ಟ ಪಡಿಪಾಟಲನ್ನು ಸ್ವತಃ ಯಶ್ ಅವರೇ ವಿವರಿಸಿದ್ದಾರೆ.ಇನ್ನೂ ಮೂರನೇ ಭಾಗದಲ್ಲಿ ಹಿನ್ನಲೆ ಸಂಗೀತ ಮತ್ತು ಛಾಯಾಗ್ರಹಣ ಕಥೆಗಳು ಸಾಗುತ್ತವೆ.ತೆರೆಯ ಮೇಲಿನ ಅಬ್ಬರದ ಹಿಂದೆ ಎಷ್ಟೆಲ್ಲ ಮನಸ್ಸುಗಳ ಬೆವರ ಕಥೆಯಿದೆ ಎಂಬುದನ್ನು ಅರಿಯಲು ಈ ಮೇಕಿಂಗ್ ವಿಡಿಯೊವನ್ನು ನೀವು ಮರೆಯದೇ ನೋಡಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.